ಬೆಂಗಳೂರು: ಏಪ್ರಿಲ್ 28ರಂದು (ಭಾನುವಾರ) ಟಿಸಿಎಸ್ ವರ್ಲ್ಡ್ 10ಕೆ (TCS World 10K) ಬೆಂಗಳೂರು ಟೂರ್ನಿಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ಗಳು ಓಟದ ಕಣಕ್ಕೆ ಇಳಿಯಲಿದ್ದಾರೆ. ಬೆಂಗಳೂರಿನ ಬೀದಿಗಳಲ್ಲಿ ಆಯೋಜಿಸಲಾದ ಈ ಓಟವು ಒಟ್ಟು 1.75 ಕೋಟಿ ರೂಪಾಯಿ (2,10000 ಯುಎಸ್ ಡಾಲರ್) ಬಹುಮಾನವನ್ನು ಹೊಂದಿದೆ. 67 ಅಥ್ಲೀಟ್ಗಳನ್ನು ಒಳಗೊಂಡಿರುವ ಭಾರತೀಯ ಎಲೈಟ್ ಶ್ರೇಣಿಯಲ್ಲಿ ಪುರುಷರ ಮತ್ತು ಮಹಿಳಾ ವಿಜೇತರಿಗೆ ತಲಾ 2,75,000 ರೂ.ಗಳ ನಗದು ನಗದು ಬಹುಮಾನ ಮತ್ತು ಕೋರ್ಸ್ ದಾಖಲೆಯನ್ನು ಮುರಿದರೆ ಇನ್ನೂ 1,00,000 ರೂ.ಗಳ ಬೋನಸ್ ದೊರೆಯಲಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್ ಸಿಂಗ್ ಗೆಹ್ಲೋಟ್ ಮತ್ತು ಕೆಎಎ ಅಧ್ಯಕ್ಷ ಮತ್ತು ಬ್ಯಾಸ್ಕೆಟ್ ಬಾಲ್ ಫೆಡರೇಶನ್ ಅಧ್ಯಕ್ಷ ಕೆ.ಗೋವಿಂದರಾಜ್ ಸೇರಿದಂತೆ ಗಣ್ಯರು ರೇಸ್ ಗೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ.
ರೇಸ್ ಸಮಯ ಈ ರೀತಿ ಇದೆ
- ಓಪನ್ 10K ಮತ್ತು ಪೊಲೀಸ್ ಕಪ್ – ಬೆಳಿಗ್ಗೆ 5:10
- ವಿಶ್ವ 10K ಮಹಿಳೆಯರು – ಬೆಳಿಗ್ಗೆ 6:40
- ವಿಶ್ವ 10K ಪುರುಷರು – ಬೆಳಿಗ್ಗೆ 7:30
- ಮಜ್ಜಾ ರನ್ – ಬೆಳಿಗ್ಗೆ 8:15
- ಚಾಂಪಿಯನ್ಸ್ ವಿತ್ ಡಿಸೆಬಿಲಿಟಿಸ್ ಮತ್ತು ಸಿಲ್ವರ್ ರನ್ – ಬೆಳಿಗ್ಗೆ 8:40
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಪರೇಡ್ ಮೈದಾನದ ಪ್ರವೇಶದ್ವಾರದ ಮುಂಭಾಗದ ರಸ್ತೆಯಲ್ಲಿ ಎಲ್ಲಾ ವಿಭಾಗಗಳ ಓಟಕ್ಕೆ ಹಸಿರು ನಿಶಾನೆ ತೋರಲಾಗುತ್ತದೆ. ಪದಕ ಪ್ರದಾನ ಸಮಾರಂಭವು ಮೈದಾನದ ಒಳಗೆ ನಡೆಯಲಿದೆ.
ಹಾಲಿ ಚಾಂಪಿಯನ್ ತಮ್ಶಿ ಸಿಂಗ್ ಮತ್ತು ನ್ಯಾಷನಲ್ ಕೋರ್ಸ್ ರೆಕಾರ್ಡ್ ಹೋಲ್ಡರ್ ಸಂಜೀವಿನಿ ಜಾಧವ್ ಅವರು ಭಾರತದ ಮಹಿಳಾ ಓಟಗಾರರನ್ನು ಮುನ್ನಡೆಸಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಮುಂಚಿತವಾಗಿ ಮಾತನಾಡಿದ ಸಂಜೀವಿನಿ ಜಾಧವ್, “ನನ್ನ ತರಬೇತಿ ಉತ್ತಮವಾಗಿ ನಡೆಯುತ್ತಿದೆ. ನಾನು ಭಾನುವಾರ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ. ನನ್ನ ಅತ್ಯುತ್ತಮ ಪ್ರದರ್ಶನ ನೀಡುವುದು ನನ್ನ ಗುರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2024 : ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಕೊಡುವುದೇ ಆರ್ಸಿಬಿ?
ಭಾರತೀಯ ಎಲೈಟ್ ಮಹಿಳಾ ಓಟಗಾರರಲ್ಲಿ ಸಂಘಮಿತ್ರ ಮಹತಾ, ಪೂನಂ ದಿನಕರ್ ಸೋನುನೆ, ಏಕ್ತಾ ರಾವತ್, ಉಜಾಲಾ, ಪ್ರೀನು ಯಾದವ್, ಫೂಲನ್ ಪಾಲ್, ಭಾರತಿ ನೈನ್, ಚಾವಿ ಯಾದವ್ ಮತ್ತು ಸೀಮಾ ಕೂಡ ಮುಂಚೂಣಿಯಲ್ಲಿದ್ದಾರೆ.
ಪುರುಷರ ಸಾಲಿನಲ್ಲಿ ಯಾರ್ಯಾರು?
ಭಾರತೀಯ ಪುರುಷರ ಸಾಲಿನಲ್ಲಿ ಕಳೆದ ವರ್ಷದ ರನ್ನರ್ ಅಪ್ ಹರ್ಮನ್ಜೋತ್ ಸಿಂಗ್ 30:00 ನಿಮಿಷಗಳ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಈ ಬಾರಿ ಭರವಸೆ ಮೂಡಿಸಿದ್ದಾರೆ.
30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ
ಟಿಸಿಎಸ್ ವರ್ಲ್ಡ್ 10 ಕೆಯಲ್ಲಿ ಈ ಬಾರಿ ಬೆಂಗಳೂರಿನ ಗ್ರೌಂಡ್ ಮತ್ತು ವರ್ಚುವಲ್ ವಿಭಾಗಗಳಲ್ಲಿ 30,000 ಕ್ಕೂ ಹೆಚ್ಚು ಭಾಗವಹಿಸಲಿದ್ದಾರೆ. ಉತ್ತಮ್ ಚಂದ್, ನಿತೇಂದ್ರ ಸಿಂಗ್ ರಾವತ್, ಧರ್ಮೇಂದ್ರ, ವಿವೇಕ್ ಸಿಂಗ್ ಮೋರೆ, ಸಂದೀಪ್ ಸಿಂಗ್, ದಿನೇಶ್, ದೀಪಕ್ ಭಟ್, ಮೋಹನ್ ಸೈನಿ, ಅಮೃತ್ ಸಿಂಗ್ ಬೋಹ್ರಾ ಮತ್ತು ಸಂದೀಪ್ ದೇವ್ರಾರಿ ರೇಸ್ನಲ್ಲಿ ಸ್ಪರ್ಧಿಸುತ್ತಿರುವ ಇತರ ಭಾರತೀಯ ಪುರುಷ ಕ್ರೀಡಾಪಟುಗಳು.