ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಯಕ್ಷಗಾನ ಅಥವಾ ಕರ್ನಾಟಕದ ಯಾವುದೇ ಕಲಾ ಪ್ರಕಾರವನ್ನು ಪರಿಚಯಿಸುವುದು ತೀರಾಮುಖ್ಯ. ಇದರಿಂದ ಮಕ್ಕಳೂ ಆ ಬಗ್ಗೆ ಆಸಕ್ತಿ ವಹಿಸುವ ಅವಕಾಶ ಹೇರಳವಾಗಿದೆ. ಆ ಮೂಲಕ ಯಕ್ಷಗಾನದಂತಹ ಕಲೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಒಯ್ಯುವ ಒಳ್ಳೆಯ ಕಾರ್ಯ ಮಾಡಿದಂತಾಗುತ್ತದೆ. ಶಾಲಾಮಕ್ಕಳಿಗೆ ಆಸಕ್ತಿಯಿದ್ದರೆ ಉಚಿತವಾಗಿ ಕಲಿಸಿಕೊಡಲಾಗುವುದು ಎಂದು ಕರ್ನಾಟಕ ಮಹಿಳಾ ಯಕ್ಷಗಾನ (Mahila Yakshagana) ತಂಡದ ಮುಖ್ಯಸ್ಥರಾದ ಕೆ. ಗೌರಿ ಪ್ರಕಟಿಸಿದರು.
ಜೆಪಿ ನಗರದ ಪುಟ್ಟೇನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ʼಕೃಷ್ಣ ಲೀಲೆ, ಕಂಸ ವಧೆʼ ಯಕ್ಷಗಾನ ಪ್ರದರ್ಶನದ ವೇಳೆ ಮಾತನಾಡಿದರು.
ಕರ್ನಾಟಕ ಮಹಿಳಾ ಯಕ್ಷಗಾನ ತಂಡವು ಕರ್ನಾಟಕದ ಕಲೆ ಯಕ್ಷಗಾನವನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಕೈಗೊಂಡಿದೆ. ಯಕ್ಷಗಾನದ ವೇಷ ಭೂಷಣಗಳ ಪರಿಚಯ, ಕಥಾ ಪ್ರಸಂಗಗಳ ಆಯ್ಕೆ ವಿಧಾನ, ಭಾಗವತಿಕೆ, ಬಳಸುವ ವಾದನಗಳಾದ ಚೆಂಡೆ, ಮದ್ದಲೆ.. ಹೀಗೆ ಯಕ್ಷರಂಗದ ಪರಿಚಯವನ್ನು ವಿದ್ಯಾರ್ಥಿಗಳಿಗೆ ಕೆ. ಗೌರಿ ಮಾಡಿಕೊಟ್ಟರು. ವಿದ್ಯಾರ್ಥಿಗಳು, ಶಿಕ್ಷಕರ ಪ್ರಶ್ನೆಗಳಿಗೆ ಗೌರಿ ಮತ್ತು ತಂಡದವರು ಉತ್ತರಿಸಿದರು.
ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ್ ಮಾತನಾಡಿ, ಯಕ್ಷಗಾನ ಕಲೆಯನ್ನು ಮಹಿಳಾ ತಂಡವೊಂದು ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಮಹಿಳಾ ಯಕ್ಷಗಾನ ತಂಡ ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯನ್ನು ಕಲಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಬಳಿಕ “ಕೃಷ್ಣ ಲೀಲೆ, ಕಂಸ ವಧೆ” ಎಂಬ ಯಕ್ಷಗಾನ ಪ್ರದರ್ಶನ ನೆರವೇರಿತು. ಕೆ. ಗೌರಿ, ಆಶಾ ರಾಘವೇಂದ್ರ, ಸುಮಾ ಅನಿಲ್ ಕುಮಾರ್ ಮತ್ತು ಕುಮಾರಿ ಧೃತಿ ಅಮ್ಮೆಂಬಳ ಮುಮ್ಮೇಳದಲ್ಲಿದ್ದರು. ಭಾಗವತರಾಗಿ ಶಂಕರ ಬಾಳಕುದ್ರು, ಮದ್ದಲೆಯಲ್ಲಿ ಗೌತಮ್ ಸಾಸ್ತಾನ್ ಮತ್ತು ಚೆಂಡೆಯಲ್ಲಿ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು. ಮುಖ್ಯಶಿಕ್ಷಕರಾದ ವೆಂಕಟೇಶ್ ಮೂರ್ತಿ ವಂದಿಸಿದರು.
ಇದನ್ನೂ ಓದಿ | Raja Marga Column : ಕೌಸಲ್ಯಾ ಸುಪ್ರಜಾ ರಾಮ; ಶ್ರೀರಾಮನೆಂಬ ಶಾರ್ದೂಲ ಸದೃಶ ವ್ಯಕ್ತಿತ್ವ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ