ಬೆಂಗಳೂರು: ನವರಾತ್ರಿ ಅಂಗವಾಗಿ ಯುವಕ ಸಂಘದಿಂದ ‘ಯುವ ದಸರಾʼ (Yuva Dasara) ಭಾಗವಾಗಿ ಜಯನಗರದ ವಿವೇಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಭಕ್ತಿ ಗೀತೆಗಳು ಮತ್ತು ತಬಲ ತರಂಗ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಯುವದಸರಾ ಕಾರ್ಯಕ್ರಮದ 5ನೇ ದಿನವಾದ ಗುರುವಾರ ಬೆಳಿಗ್ಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ, ಕಲಾವಿದನ ಕಷ್ಟಗಳು, ಪರಿಸರ ಕುರಿತು, ಶ್ರೀ ರಾಘವೇಂದ್ರ ಸ್ವಾಮಿ, ಏಕಲವ್ಯ, ಪರಶುರಾಮ, ಬಬ್ರುವಾಹನ, ಶಕುನಿ, ರಾವಣ, ಶಿಕ್ಷಕ, ವಿದ್ಯಾರ್ಥಿ, ರಾಜಕಾರಣಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಏಕಪಾತ್ರಾಭಿನಯ ಹಾಗೂ ನಾಟಕ ಸ್ಪರ್ಧೆ ನಡೆಯಿತು. ಇದರಲ್ಲಿ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯಾ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ಶೋಭಾ ಎನ್.ಎಸ್ ಮತ್ತು ತಂಡದವರಿಂದ ಭಕ್ತಿ ಗೀತೆಗಳು ಹಾಗೂ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದವರಿಂದ ತಬಲ ತರಂಗ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಭಕ್ತಿ ಗೀತೆಗಳ ಮೂಲಕ ಶೋಭಾ ಎನ್.ಎಸ್. ತಂಡವು ಪ್ರೇಕ್ಷಕರನ್ನು ರಂಜಿಸಿತು. ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಅಮೃತೇಶ್ ಕುಲಕರ್ಣಿ ತಂಡದಿಂದ ತಬಲವಾದ್ಯದ ಮೂಲಕ ತಬಲಾ ತರಂಗವನ್ನು ಪ್ರಸ್ತುತ ಪಡಿಸಿದರು.
ಇದನ್ನೂ ಓದಿ: Sirsi News: ನ.1ರಿಂದ 7 ತಿಂಗಳು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಬಂದ್!
ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಯನಗರ ಸೇರಿದಂತೆ ಸುತ್ತಮುತ್ತಲಿನ ನಗರಗಳ ನೂರಾರು ಜನರು ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.