ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಮುಚ್ಚುವ ನಿರ್ಧಾರದ ಬೆನ್ನಲ್ಲೇ ಗುತ್ತಿಗೆ ಕಾರ್ಮಿಕರು (Bhadravathi Bandh) ಆರಂಭಿಸಿದ ಪ್ರತಿಭಟನೆ ಗುರುವಾರಕ್ಕೆ (ಫೆ.24) 37ನೇ ದಿನಕ್ಕೆ ಕಾಲಿಟ್ಟಿದೆ. ವಿಐಎಸ್ಎಲ್ ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಆಕ್ರೋಶ ಗೊಂಡಿರುವ ಗುತ್ತಿಗೆ ಕಾರ್ಮಿಕರು ಗುರುವಾರ ಕರೆ ನೀಡಿರುವ ಭದ್ರಾವತಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಕಾರ್ಖಾನೆ ಜತೆಗೆ ತಮ್ಮನ್ನು ಉಳಿಸಿ ಎಂದು ಆಗ್ರಹಿಸಿ ವಿಐಎಸ್ಎಲ್ ಕಾರ್ಮಿಕರು ಕಳೆದ 37 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವಮೊಗ್ಗ ಚಲೋ ನಡೆಸಿದ್ದ ಗುತ್ತಿಗೆ ಕಾರ್ಮಿಕರು, ಶಿವಮೊಗ್ಗ ನಗರದಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದ್ದರು. ಕಾರ್ಖಾನೆ ಅಪ್ಪಿಕೋ ಚಳವಳಿ, ಪಂಜಿನ ಮೆರವಣಿಗೆ ನಡೆಸಿದ್ದ ಕಾರ್ಮಿಕರು, ವಿಐಎಸ್ಎಲ್ ಕಾರ್ಖಾನೆ ಎದುರು ನಿರಂತರ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
ಗುರುವಾರ ಭದ್ರಾವತಿ ಪಟ್ಟಣ ಬಂದ್ ಕರೆಗೆ ಸಾರ್ವಜನಿಕರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯಿಂದಲೇ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಗುತ್ತಿಗೆ ಕಾರ್ಮಿಕ ಸಂಘ ಕರೆ ನೀಡಿದ ಈ ಬಂದ್‌ಗೆ ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ವಕೀಲರ ಸಂಘದ ಸದಸ್ಯರು ರಂಗಪ್ಪ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಬೆಂಬಲ ವ್ಯಕ್ತಪಡಿಸಿದ್ದರೆ, ಹಲವು ಸಂಘಟನೆಗಳ ಸದಸ್ಯರು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪ್ರಮುಖ ವೃತ್ತಗಳಿಗೆ ತೆರಳಿ ಕಾರ್ಮಿಕ ಸಂಘಟನೆಗಳು ಟೈರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಅವಹೇಳನ ಮಾಡಿದ್ದಕ್ಕೆ ಬೇಷರತ್ ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ; ಅಸ್ಸಾಂ ಸಿಎಂ ಟ್ವೀಟ್
ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ನಮಗೆ ನ್ಯಾಯ ದೊರಕದೇ ಇದ್ದಲ್ಲಿ ಫೆ. 27ರಂದು ಶಿವಮೊಗ್ಗಕ್ಕೆ ಬರುವ ಪ್ರಧಾನಿ ಅವರನ್ನು ಕುಟುಂಬ ಸದಸ್ಯರ ಜತೆ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಕೇಂದ್ರ ಸರ್ಕಾರ ಕೈಗೊಂಡಿರುವುದು ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್, ಜೆಡಿಎಸ್ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೆಚ್ಚಿನ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ