ಪಾಣಿಪತ್: ಹರಿಯಾಣದ ಪಾಣಿಪತ್ ಜಿಲ್ಲೆಯ ಸಮಲ್ಕಾದಲ್ಲಿ ಆಯೋಜಿಸಿರುವ 2023ನೇ ಸಾಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ (RSS Annual Meet) ಗ್ರಾಮ ವಿಕಾಸ ಕೇಂದ್ರದ ವತಿಯಿಂದ ‘ಸೇವಾ ಸಾಧನಾ’ ಎಂಬ ಪ್ರದರ್ಶಿನಿಯನ್ನು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಭಯ್ಯಾಜಿ ಜೋಷಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಭಯ್ಯಾಜಿ ಜೋಷಿ ಅವರು, ಈ ರೀತಿಯ ಪ್ರದರ್ಶಿನಿ ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತದೆ. ನಮ್ಮ ಯುವ ಪೀಳಿಗೆಗೆ ತಮ್ಮ ಐತಿಹಾಸಿಕ ಧಾರ್ಮಿಕ ಸ್ಥಳಗಳ ಕುರಿತಾಗಿ, ಇತಿಹಾಸ ಮತ್ತು ಸಂಸ್ಕೃತಿಯ ಕುರಿತಾಗಿ ಅರಿತುಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಪ್ರದರ್ಶಿನಿಯಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಅಲ್ಲಿನ ಐತಿಹಾಸಿಕ ಮತ್ತು ಸಾಮಾಜಿಕ ಚಿತ್ರಣಗಳನ್ನು ತೋರಿಸುವ ವಿವಿಧ ಕಲಾ ಪ್ರಕಾರಗಳ ಅಭಿವ್ಯಕ್ತಿ ಮಾತ್ರವಲ್ಲದೆ ಸ್ಥಳೀಯ ಊಟೋಪಚಾರ, ವೇಷಭೂಷಣ, ಹಬ್ಬ ಹರಿದಿನ, ಲೋಕಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಇದನ್ನೂ ಓದಿ | Pulwama Widows Row: ರಾಜಸ್ಥಾನದಲ್ಲಿ ಪುಲ್ವಾಮ ಹುತಾತ್ಮರ ಪತ್ನಿಯರಿಗೆ ಥಳಿತ; ಬಿಜೆಪಿ ಪ್ರತಿಭಟನೆ, ಕಲ್ಲುತೂರಾಟ
ವಿಶೇಷವಾಗಿ ಹರಿಯಾಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮೊದಲ ಹಂತದಲ್ಲಿ ಕಟ್ಟಿ ಬೆಳೆಸಿದ ಹಿರಿಯ ಸ್ವಯಂಸೇವಕರು, ಅವರ ಜೀವನ ಸ್ಮರಣೆ, ಸಂಘದ ಐತಿಹಾಸಿಕ ಕಾರ್ಯಕ್ರಮಗಳು ಹೀಗೆ ಅನೇಕ ವಿಚಾರಗಳ ಕುರಿತಾಗಿ ಡಿಜಿಟಲ್ ರೂಪದಲ್ಲಿ ಕೂಡ ಸಾದರಪಡಿಸಲಾಗಿದೆ.
ಆರ್‌ಎಸ್‌ಎಸ್‌ನ ಉತ್ತರ ಕ್ಷೇತ್ರದ ಸಂಘಚಾಲಕರಾದ ಸೀತಾರಾಮ್ ವ್ಯಾಸ, ಹರಿಯಾಣ ಪ್ರಾಂತ ಸಂಘಚಾಲಕ ಪವನ್ ಜಿಂದಲ್ ಉಪಸ್ಥಿತರಿದ್ದರು.