ಔರಾದ್: ತಾಲೂಕಿನ ಕರಕ್ಯಾಳ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ 25 ಜನ ಅಸ್ವಸ್ಥಗೊಂಡಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ, ಪರಿಶೀಲಿಸಿದರು.
ಅಸ್ವಸ್ಥಗೊಂಡ ಶಿವಾಜಿ ನರಸಿಂಗ್ ಅವರ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.
ಅಸ್ವಸ್ಥರಾಗಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲಾಗಿದೆಯೇ ಎಂದು ಅಧಿಕಾರಿಗಳಿಗೆ ಸಚಿವರು ಪ್ರಶ್ನಿಸಿದರು. ಇದಕ್ಕೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಮಾಣಿಕರಾವ್ ಕೇರೂರೆ, ಎಇಇ ಸುಭಾಷ್ ದಾಲಗೊಂಡೆ, ಜೆಇ ಮೋಹನ ರಾಠೋಡ್ ಪ್ರತಿಕ್ರಿಯೆ ನೀಡಿ, ಬಾವಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿರುವುದು ಕಂಡುಬಂದಿದೆ ಎಂದರು. ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್ ಮಾತನಾಡಿ, ಇನ್ನೂ ನೀರಿನ ಪರೀಕ್ಷೆಯ ವರದಿಯೊಂದು ಬರಲಿದೆ ಎಂದು ಸಚಿವರ ಗಮನಕ್ಕೆ ತಂದರು.
ಇದನ್ನೂ ಓದಿ: ನಾಯಿಮರಿ ಬೇಕೆಂದು ತಂದು ಬೇಸ್ತುಬಿದ್ದ ಯುವತಿ; ಬೆಳೆದು ನಿಂತಾಗ ಅದು ನಾಯಿಯೇ ಆಗಿರಲಿಲ್ಲ, ಈಕೆ ಫುಲ್ ಶಾಕ್!
ಅಸ್ವಸ್ಥರಿಗೆ ಚಿಕಿತ್ಸೆಯಲ್ಲಿ ತೊಂದರೆಯಾಗಬಾರದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಅವರಿಗೆ ಸೂಚಿಸಿದರು. ವಾಟರ್ ಮ್ಯಾನ್ ಮಾಧವರಾವ್ ಎನ್ನುವರಿಗೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ಗ್ರಾಪಂ ಪಿಡಿಒಗಳಿಗೆ ಸ್ವಚ್ಛತೆ ಬಗ್ಗೆ ಆದ್ಯತೆ ನೀಡುವ ಮೂಲಕ ಶುದ್ಧ ನೀರು ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಶಿಲ್ಪಾ ಎಂ. ಅವರಿಗೆ ಸೂಚಿಸಿದರು. ಕಲುಷಿತ ನೀರು ಸೇವಿಸಿ ಕೊಪ್ಪಳದಲ್ಲಿ ಮೂವರು, ರಾಯಚೂರಿನಲ್ಲಿ 7 ಜನ ಮೃತಪಟ್ಟಿದ್ದಾರೆ. ಆದ್ದರಿಂದ ಕರಕ್ಯಾಳ ಗ್ರಾಮದ ಘಟನೆಯಂತೆ ಜಿಲ್ಲೆಯಲ್ಲಿ ಮರುಕಳಿಸದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದರು.
ಇದನ್ನೂ ಓದಿ: Free Electricity: ಉಚಿತ ವಿದ್ಯುತ್ ಅರ್ಜಿ ಪೋರ್ಟಲ್ ಓಪನ್ ಆಗ್ತಿಲ್ವಾ? ಈ ಲಿಂಕ್ ಬಳಸಿ, ನೇರ ಕನೆಕ್ಟ್ ಆಗುತ್ತೆ
ಕರಕ್ಯಾಳ ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ ಹೆಚ್ಚಿದೆ. ಗ್ರಾಮದಲ್ಲಿ ಚರಂಡಿ, ಒಳಚರಂಡಿ ಮತ್ತು ರಸ್ತೆಗಳಿಲ್ಲ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಈ ವೇಳೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕರಕ್ಯಾಳ ಗ್ರಾಮದಲ್ಲಿ ರಸ್ತೆ ಸರಿಯಾಗಿಲ್ಲ ಎನ್ನುವುದು ಗೊತ್ತಾಗಿದೆ. ಅಲ್ಲದೇ ಇಲ್ಲಿಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.
ಕಲುಷಿತ ನೀರು ಸೇವನೆಯಿಂದ ವಾಂತಿ, ಭೇದಿ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅಸ್ವಸ್ಥರು ಸದ್ಯ ಔರಾದ್‌ನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮ ಪಂಚಾಯಿತಿಗೆ ನೀಡುವ 15ನೇ ಹಣಕಾಸು ಹಣವನ್ನು ನೀರಿಗಾಗಿ ಉಪಯೋಗಿಸಿ, ಹಣ ದುರುಪಯೋಗ ಮಾಡಬೇಡಿ ಎಂದು ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಈ ಯೋಜನೆಯಡಿ ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕು ಎಂದು ಸೂಚಿಸಿದರು. ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಪಿಡಿಒಗಳು ಎಚ್ಚರಿಕೆ ವಹಿಸಿ ಕ್ರಮಕೈಗೊಳ್ಳಬೇಕು ಎಂದರು.
ಗ್ರಾಪಂ ಮಾಡಲು ಒತ್ತಾಯ
ಕರಕ್ಯಾಳ ಗ್ರಾಮ ಏಕಂಬಾ ಗ್ರಾಪಂ ವ್ಯಾಪ್ತಿಯಲ್ಲಿದೆ. ಕರಕ್ಯಾಳ ಗ್ರಾಮವನ್ನು ಪ್ರತ್ಯೇಕವಾಗಿ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಗ್ರಾಮಸ್ಥರು ಸಚಿವ ಈಶ್ವರ್ ಖಂಡ್ರೆ ಅವರಿಗೆ ಒತ್ತಾಯಿಸಿದ್ದಾರೆ. ಗ್ರಾಪಂ 6 ಚುನಾವಣೆ ಬಹಿಷ್ಕಾರ ಮಾಡಲಾಗಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲಾಗಿದೆ ಎಂದರು. ಈ ವೇಳೆ ಮಾತನಾಡಿದ ಖಂಡ್ರೆ ಅವರು ಈಗ ನಮ್ಮ ಸರ್ಕಾರವಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: Kannada Serials TRP: ʻಅಮೃತಧಾರೆʼಗೆ ಜಾಸ್ತಿ ಆಯ್ತು ಡಿಮ್ಯಾಂಡ್; ಈ ವಾರ ಟಿಆರ್‌ಪಿಯಲ್ಲಿ ನಂಬರ್ 1 ಯಾರು?
ಆಂಬ್ಯುಲೆನ್ಸ್, ಪೊಲೀಸರ ವಿರುದ್ಧ ಅಸಮಾಧಾನ
ಔರಾದ್‌ನ ಸಂಗಮ ಬಳಿಯಲ್ಲಿ ಅಪಘಾತ ಸಂಭವಿಸಿ 30 ನಿಮಿಷಗಳಾದರೂ ಆಂಬ್ಯುಲೆನ್ಸ್, ಪೊಲೀಸ್ ಬಂದಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು. ನಾನು ಅಪಘಾತವಾದ ಸ್ಥಳದಿಂದ ಆಸ್ಪತ್ರೆಗೆ ಅರಣ್ಯ ಇಲಾಖೆ ವಾಹನದಲ್ಲಿ ಕಳುಹಿಸಿದ್ದೇನೆ. ಔರಾದ್‌ನಲ್ಲಿ ಎಷ್ಟು ಆಂಬ್ಯುಲೆನ್ಸ್ ಇವೆ ಎಂದು ಡಾ. ಗಾಯತ್ರಿ ಅವರಿಗೆ ಪ್ರಶ್ನಿಸಿದರು. 5 ವಾಹನಗಳಿವೆ ಎಂದು ಉತ್ತರಿಸಿದಾಗ ನಿರ್ಲಕ್ಷ್ಯ ವಹಿಸಿದ ಚಾಲಕರ ಮೇಲೆ ಕ್ರಮ ಜರುಗಿಸಿ ಎಂದರು. ಇನ್ನು ಪೊಲೀಸರು ಸ್ಪಂದಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
5 ಕೋಟಿ ಸಸಿ ನೆಡಲು ಕ್ರಮ
ಜುಲೈ 1 ರಂದು ನಡೆಯುವ ವನಮಹೋತ್ಸವದಂದು ಸರ್ಕಾರದಿಂದ ರಾಜ್ಯದಲ್ಲಿ 5 ಕೋಟಿ ಸಸಿ ನೆಡಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾಧ್ಯಮದವರಿಗೆ ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 1 ಸಾವಿರ ಸಸಿ ನೆಡಲಾಗುತ್ತಿದೆ. ಸಸಿ ಬೆಳೆಸುವ ಜವಾಬ್ದಾರಿಯನ್ನು ಎಲ್ಲರೂ ವಹಿಸಬೇಕು ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: Geetha Shivarajkumar: ಸರಳವಾಗಿ ಜನುಮದಿನವನ್ನು ಆಚರಿಸಿಕೊಂಡ ಗೀತಾ ಶಿವರಾಜ್‌ಕುಮಾರ್
ಈ ಸಂದರ್ಭದಲ್ಲಿ ಎಂಎಲ್ಸಿ ಅರವಿಂದಕುಮಾರ ಅರಳಿ, ಮುಖಂಡ ಡಾ. ಭೀಮಸೇನ್ ರಾವ ಶಿಂಧೆ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಡಿವೈಎಸ್ಪಿ ಪ್ರಥ್ವಿಕ್ ಶಂಕರ್, ತಹಸೀಲ್ದಾರ್ ಮಲ್ಲಿಕಾರ್ಜುನ, ಮೀನಾಕ್ಷಿ ಸಂಗ್ರಾಮ, ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಪಪಂ ಮಾಜಿ ಅಧ್ಯಕ್ಷ ಸುನಿಲಕುಮಾರ ದೇಶಮುಖ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ಬಸವರಾಜ ದೇಶಮುಖ, ಶರಣಪ್ಪ ಪಾಟೀಲ್ , ಸುಧಾಕಾರ್ ಕೊಳ್ಳುರ್ ಸೇರಿದಂತೆ ಅನೇಕರಿದ್ದರು.