Site icon Vistara News

Bidar News: ಬೃಹತ್ ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿಗಳು

A couple reunited in a loka adalat at Bidar

ಬಸವಕಲ್ಯಾಣ: ಮದುವೆಯಾದ (Marriage) ಕೆಲವೇ ವರ್ಷಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣದಿಂದ ವಿಚ್ಚೇದನಕ್ಕಾಗಿ (Divorce) ನ್ಯಾಯಾಲಯದ ಮೊರೆ ಹೊಗಿದ್ದ ದಂಪತಿಗಳನ್ನು (Couple) ರಾಜಿ ಸಂಧಾನದ ಮೂಲಕ ಒಂದಾಗಿಸಿದ ಪ್ರಸಂಗ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನ್ಯಾಯಾಲಯದಲ್ಲಿ ಶನಿವಾರ ಜರುಗಿತು.

ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ದಂಪತಿಗಳು ಬೇರೆಯಾಗಲು ನಿರ್ಧರಿಸಿದ್ದರು. ಆದರೆ ಈ ದಂಪತಿಗಳನ್ನು ನ್ಯಾಯಾಧೀಶರು ಮನವೊಲಿಸುವ ಮೂಲಕ ಮತ್ತೆ ಒಂದು ಮಾಡಿದ ಅಪರೂಪದ ಘಟನೆ ನಗರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.

2011ರಲ್ಲಿ ಬಸವಕಲ್ಯಾಣ ಮೂಲದ ಯುವಕ ಹಾಗೂ ಮೈಸೂರು ಮೂಲದ ಯುವತಿಯ ಮದುವೆಯಾಗಿತ್ತು. ಆದರೆ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಕಾಣದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ದೂರವಾಗಲು ನಿರ್ಧರಿಸಿ ವಿಚ್ಚೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಇದನ್ನೂ ಓದಿ: Electric Shock: ಜಮೀನಿಗೆ ಹೋಗಿದ್ದಾಗ ವಿದ್ಯುತ್‌ ಆಘಾತ; ತಂದೆ, ಮಗಳು ದಾರುಣ ಮೃತ್ಯು

ದಂಪತಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದರು. ಈ ನಡುವೆ ಶನಿವಾರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಬೃಹತ್ ಲೋಕದಾಲತ್‌ನಲ್ಲಿ ದಂಪತಿಗಳನ್ನು ಕರೆಯಿಸಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ರಾಜಿಸಂಧಾನದಲ್ಲಿ ಬೇರೆಯಾಗಲು ನಿರ್ಧರಿಸಿದ್ದ ಈ ದಂಪತಿಗಳು ಮನಸ್ಸು ಬದಲಾಯಿಸಿ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿ, ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಬಾಳಿಗೆ ಕಾಲಿಟ್ಟರು.

ದಂಪತಿಗಳ ನಿರ್ಧಾರ ಸ್ವಾಗತಿಸಿದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ಚನ್ನಪ್ಪ ಅವರು ಮಾತನಾಡಿ, ವಿವಾಹ ವಿಚ್ಛೇದನ ಒಂದು ಸಾಮಾಜಿಕ ಪಿಡುಗಾಗಿದೆ. ನಿಮ್ಮಿಂದ ಬೇರೆಯವರಿಗೆ ಮಾದರಿಯಾಗಲಿ ಇಂತಹ ಪ್ರಕರಣಗಳು ಸಮಾಜದಲ್ಲಿ ಕಡಿಮೆಯಾಗಲಿ, ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿ ಎಂಬ ಉದ್ದೇಶ ನ್ಯಾಯಾಲಯದ್ದಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನ ಸುಖಕರವಾಗಲಿ ಎಂದು ಹರಸಿ ದಂಪತಿಗಳಿಗೆ ಶುಭ ಕೋರಿದರು.

ಇದನ್ನೂ ಓದಿ: Viral Video: ಶಿಕ್ಷಕಿಯ ನಿವೃತ್ತಿ, ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೊಟ್ಟ ಮಕ್ಕಳು; ಶಾಲಾ ದಿನಗಳ ನೆನಪಿಸುವ ವಿಡಿಯೊ ಇದು

ಈ ವೇಳೆ ಸಿವಿಲ್ ನ್ಯಾಯಾಧೀಶೆ ಗಂಗವ್ವ ಆಯಟ್ಟಿ ಸೇರಿದಂತೆ ಮತ್ತಿತರಿದ್ದರು.

ನ್ಯಾಯವಾದಿ ಸಂಜುರೆಡ್ಡಿ ಯರಬಾಗ ಅವರು ಯುವತಿಯ ಪರವಾಗಿ ವಾದ ಮಂಡಿಸಿದರೆ, ಹಿರಿಯ ನ್ಯಾಯವಾದಿ ವಿಲಾಸ ಕಾಂಬಳೆ ಯುವಕನ ಪರವಾಗಿ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಸ್.ಬಿ ಮಾಶಾಳಕರ, ವಿಜಯಕುಮಾರ ವಟಗೆ, ರಾಜೇಂದ್ರ ಗುತ್ತೇದಾರ, ಸಂಜೀವಕುಮಾರ ಗೌಂಡ, ಅನುಶಯ ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Exit mobile version