ಹುಲಸೂರ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲ, ಅನಕ್ಷರಸ್ಥರ ಕುಟುಂಬ (illiterate family), ಇದೆಲ್ಲದರ ನಡುವೆಯೂ ಛಲ ಬಿಡದೆ ಓದಿದ ವಿದ್ಯಾರ್ಥಿನಿ ಶುಭಂಗಿ ಬಿರಾದಾರ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಹುಲಸೂರು ತಾಲೂಕಿನ ಮಹಾರಾಷ್ಟ್ರ ಗಡಿ ಭಾಗದ ಮಾಚನಾಳ ಗ್ರಾಮದ ಜನಾಬಾಯಿ ಭರತರಾವ ಬಿರಾದಾರ ದಂಪತಿಯ ಪುತ್ರಿ ಶುಭಂಗಿ (ಪುಟ್ಟಿ) ಬಿರಾದಾರ, ಭಾಲ್ಕಿ ಡೈಮಂಡ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ, 98.16 ಅಂಕ ಪಡೆಯುವುದರ ಮೂಲಕ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.
3 ವಿಷಯದಲ್ಲಿ 100ಕ್ಕೆ 100 ಅಂಕ
ವಿದ್ಯಾರ್ಥಿನಿ ಶುಭಂಗಿಯು ಕೆಮಿಸ್ಟ್ರಿ, ಮ್ಯಾಥೆಮ್ಯಾಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದರೆ, ಫಿಸಿಕ್ಸ್ 98, ಹಿಂದಿ 97, ಇಂಗ್ಲಿಷ್ ವಿಷಯದಲ್ಲಿ 94 ಅಂಕಗಳನ್ನು ಪಡೆದಿದ್ದಾಳೆ.
ಗ್ರಾಮದಲ್ಲಿ ಸಂಭ್ರಮದ ವಾತಾವರಣ
ವಿದ್ಯಾರ್ಥಿಯ ಈ ಸಾಧನೆಗೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಶಿಕ್ಷಕರು, ಸಾಹಿತಿಗಳು, ರಾಜಕೀಯ ನಾಯಕರು ವಿದ್ಯಾರ್ಥಿನಿಗೆ ಶುಭ ಕೋರಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: KEA Recruitment 2023 : 757 ಹುದ್ದೆಗಳ ನೇಮಕ ಪ್ರಕ್ರಿಯೆ ಮುಂದೂಡಿಕೆ; ಕೆಇಎ ಹೇಳಿದ್ದೇನು?
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಶುಭಂಗಿ ಬಿರಾದಾರ, ನಮಗೆ ಸ್ವಲ್ಪ ಒಣ ಭೂಮಿ ಇದ್ದು, ಪಾಲಕರು ಕೂಲಿ ಕೆಲಸವನ್ನು ಮಾಡುತ್ತಾ ನನಗೆ ಒಳ್ಳೆ ಶಿಕ್ಷಣವನ್ನು ನೀಡಿದ್ದಾರೆ. ನನ್ನ ಸಾಧನೆಗೆ ಕಾಲೇಜಿನ ಶಿಕ್ಷಕರು, ಪಾಲಕರು ಸ್ಫೂರ್ತಿದಾಯಕರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಮಾಡುವುದರ ಮೂಲಕ ಎಂಜಿನಿಯರಿಂಗ್ ವಿಭಾಗಕ್ಕೆ ಹೋಗುವ ಇಚ್ಛೆ ಹೊಂದಿದ್ದೇನೆ ಎಂದು ತಿಳಿಸಿದ್ದಾಳೆ.
ಇದೇ ವೇಳೆ ಗ್ರಾಮದ ಮುಖಂಡ, ಹುಲಸೂರು ಪಿಕೆಪಿಎಸ್ ಸಹಕಾರ ಸಂಘದ ಉಪಾಧ್ಯಕ್ಷ ಕಾಶಿನಾಥ ಪಾಟೀಲ ಮಾತನಾಡಿ, ದೇಶ ಸ್ವಾತಂತ್ರ್ಯವಾಗಿ ಏಳು ದಶಕಗಳು ಕಳೆದರೂ ಇನ್ನೂ ಮಾಚನಾಳ ಗ್ರಾಮಸ್ಥರು ಬಸ್ ಕಂಡಿಲ್ಲ. ಯಾವುದೇ ಸೌಲಭ್ಯಗಳನ್ನು ಇಲ್ಲದೆ ಅನಕ್ಷರಸ್ಥರ ಮನೆಯಲ್ಲಿ ವಿದ್ಯಾರ್ಥಿನಿ ಸಾಧನೆ ಮಾಡಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.