Site icon Vistara News

Bidar News: ಸಾಯಗಾಂವ ಹೋಬಳಿ 16 ಗ್ರಾಮಗಳ ದಾಖಲಾತಿಗಳನ್ನು ಹುಲಸೂರ ತಾಲೂಕಿಗೆ ಸೇರ್ಪಡೆಗೆ ಒತ್ತಾಯ

demanding inclusion records of 16 villages of Sayagaon Hobali to Hulasur Taluk

ಹುಲಸೂರ: ಭಾಲ್ಕಿ (Bhalki) ತಾಲೂಕಿನ ಸಾಯಗಾಂವ ಹೋಬಳಿಯ ಹದಿನಾರು ಹಳ್ಳಿಗಳ (Villages) ಪಹಣಿ ಸೇರಿದಂತೆ ದಾಖಲಾತಿಗಳನ್ನು ಹುಲಸೂರ ತಾಲೂಕಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ, ಹುಲಸೂರ ತಾಲೂಕು ಹೋರಾಟ ಸಮಿತಿ ಮುಖಂಡರು, ತಹಸೀಲ್ದಾರ್‌ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್‌ ಸಂಜೀವ ಕುಮಾರ್‌ ಭೈರೆ ಅವರಿಗೆ ಸಲ್ಲಿಸಿದರು.

ಹುಲಸೂರ ತಾಲೂಕು ಹೋರಾಟ ಸಮಿತಿ ಸಂಚಾಲಕ ಎಂ.ಜಿ‌. ರಾಜೋಳೆ ಮಾತನಾಡಿ, ನೂತನ ಹುಲಸೂರ ತಾಲೂಕಿಗೆ ಭಾಲ್ಕಿ ತಾಲೂಕಿನ ಸಾಯಗಾಂವ ಹೋಬಳಿಯ ಹದಿನಾರು ಹಳ್ಳಿಗಳು ಹಾಗೂ ತಾಂಡಾ, ವಾಡಿಗಳು ಸೇರಿಸಿ ಆರು ಗ್ರಾಮ ಪಂಚಾಯಿತಿಗಳು ಹುಲಸೂರ ತಾಲೂಕಿಗೆ ಸೇರ್ಪಡಿಸಿ ರಾಜ್ಯ ಪತ್ರದಲ್ಲಿ ಫೆಬ್ರವರಿ 3 2023ರಲ್ಲಿ ಸರ್ಕಾರ ಆದೇಶಿಸಿದೆ.

ಆದರೆ ಸುಮಾರು ಒಂಬತ್ತು ತಿಂಗಳು ಕಳೆದರೂ ಇಲ್ಲಿಯವರೆಗೆ ಹುಲಸೂರ ತಾಲೂಕಿಗೆ ಹಳ್ಳಿಗಳ ದಾಖಲೆ ಹಸ್ತಾಂತರ ಆಗದೇ ಇರುವುದು ವಿಷಾದನೀಯ ಸಂಗತಿಯಾಗಿದೆ. ಡಿಸೆಂಬರ್ ಒಂದರೊಳಗೆ ಸೇರ್ಪಡೆ ಆಗದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Karnataka Sambhrama 50: ಹೋರಾಟ, ತ್ಯಾಗ-ಬಲಿದಾನದಿಂದ ಕನ್ನಡ ನಾಡು ಉದಯ: ಸಿದ್ದರಾಮಯ್ಯ

ಸಾಯಗಾಂವ ಹೋಬಳಿಯ ಮುಖಂಡ ಅಶೋಕ ಪಾಟೀಲ ಮಾತನಾಡಿ, ಎಂ.ಬಿ. ಪ್ರಕಾಶ್‌ ಆಯೋಗದ ಮೇರೆಗೆ ಹುಲಸೂರ ತಾಲೂಕಿಗೆ ಸಾಯಗಾಂವ ಹೋಬಳಿಯ ಹದಿನಾರು ಹಳ್ಳಿಗಳು ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಆದರೆ ಇಲ್ಲಿಯವರೆಗೆ ನಮ್ಮ ಹೋಬಳಿಯ ಕಚೇರಿಗಳು, ಪಹಣಿ ಮತ್ತು ಇತರ ದಾಖಲಾತಿಗಳು ಹಸ್ತಾಂತರಿಸದೇ ಇರುವುದು ಖಂಡನೀಯ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಅಧಿಕೃತವಾಗಿ ಹುಲಸೂರ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು. ಮೇಹಕರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಿವರಾಜ ತೋರಣೆ ಮಾತನಾಡಿದರು.

ಇದನ್ನೂ ಓದಿ: Rishabh Pant : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಿಷಭ್ ಪಂತ್, ಅಕ್ಷರ್ ಪಟೇಲ್

ಸಾಯಗಾಂವ ಹೋಬಳಿಯ ಹಿರಿಯ ಮುಖಂಡರುಗಳಾದ ತಾತೇರಾವ್‌ ಲಾಂಬೆ, ಜ್ಞಾನೋಬಾ ಮಲ್ಕಾಪೂರ, ಬಸಪ್ಪಾ ಮಾಲಿ, ಸತ್ಯವಾನ ಕಾಂಬಳೆ, ನವನಾಥ ಪಾಟೀಲ, ಬಾಲಾಜಿರಾವ್‌ ಜಾಧವ್‌, ತಾನಾಜಿ ಜಾಧವ್, ಪಿರಾಜಿ ಲಾಂಡಗೆ, ದತ್ತಾ ಪಾಟೀಲ ಹಾಗೂ ಮೇಹಕರ, ಆಳವಾಯಿ, ಸಾಯಗಾಂವ, ಕೋಂಗಳಿ , ಜಾಮಖಂಡಿ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version