ಬೀದರ್: ಕೆರೆಯಲ್ಲಿ ಈಜಲು ಹೋಗಿ (Drowned In River) ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬಸವಕಲ್ಯಾಣ ತಾಲೂಕಿನ ಫುಲ್ದರ್ ವಾಡಿ ಗ್ರಾಮದಲ್ಲಿ ನಡೆದಿದೆ.
ಸಕ್ಕುಬಾಯಿ ಸುರೇಶ (15) ಹಾಗೂ ಚಾಂದನಿ ಬಾಬುರಾವ (15) ಕೆರೆ ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರು. 10ನೇ ತರಗತಿಯಲ್ಲಿ ಓದುತಿದ್ದ ಈ ಬಾಲಕಿಯರು, ಗ್ರಾಮದ ಬಳಿ ಕೆರೆಯಲ್ಲಿ ಈಜಲು ಹೋದ ವೇಳೆ ನೀರಿನಾಳದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣ ನೀರಿಗಿಳಿದು ನೀರಲ್ಲಿ ಮುಳುಗಿದ ಬಾಲಕಿಯರ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಜನರು ಬರುವಷ್ಟರಲ್ಲಿ ಇವರಿಬ್ಬರು ಕೊನೆಯುಸಿರೆಳೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇತ್ತ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮಂಠಾಳ ಠಾಣೆ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ