ಔರಾದ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 11ರಿಂದ 17ರವರೆಗೆ ಹಮ್ಮಿಕೊಂಡಿರುವ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ) ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ.
ಮಹಾನ್ ನಾಯಕರ ತ್ಯಾಗ, ಬಲಿದಾನ ಮುತ್ತು ಹೋರಾಟಗಳ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂಭ್ರಮಕ್ಕೆ ಕಾರಣಕರ್ತರಾದ ಮಹನೀಯರನ್ನು ಸ್ಮರಿಸುವ ಜತೆಗೆ ಎಲ್ಲರಲ್ಲಿಯೂ ದೇಶಪ್ರೇಮ ಜಾಗೃತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಅಭಿಯಾನವನ್ನು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಎನ್‌ಜಿಒ ವರದಿ ತಿರಸ್ಕರಿಸಿದ ಭಾರತ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಅಭಿಯಾನ ಯಶಸ್ವಿಗೊಳಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ 1 ಕೋಟಿ ರಾಷ್ಟ್ರ ಧ್ವಜ ಹಾರಿಸುವ ಉದ್ದೇಶ ಹೊಂದಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ.
ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೇ ಸುತ್ತೋಲೆಗಳನ್ನು ನೀಡಲಾಗಿದ್ದು, ಶಾಲಾ ಕಾಲೇಜು, ಅಂಗನವಾಡಿಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ಅಗತ್ಯ ನಿರ್ದೇಶನ ನೀಡಲಾಗಿದೆ. ಎನ್‌ಸಿಸಿ, ಎನ್‌ಎಸ್‌ಎಸ್, ಸ್ವಯಂ ಸೇವಕರು, ಮಾಜಿ ಸೈನಿಕರು, ಸಂಘ ಸಂಸ್ಥೆಗಳು ಕಾರ್ಯಕ್ರಮದ ಯಶಸ್ಸಿಗೆ ಸರ್ಕಾರದೊಂದಿಗೆ ಕೈಜೋಡಿಸಿವೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಕ್ರಮ ವಹಿಸಬೇಕು. ಹಾಗೆಯೇ ಎಲ್ಲರೂ ಸ್ವಯಂ ಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ಧ್ವಜ ಹಾರಿಸುವ ಮೂಲಕ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ, 99 ಕೋಟಿ ರೂ.ಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ