ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ (HSR Layout Police Station)ಯಲ್ಲಿ ಒಂದು ಅಸಂಬದ್ಧ ಎಫ್ಐಆರ್ ದಾಖಲಾಗಿದೆ. ಫಜೀಲಾ ಎಂಬುವರು ತಮ್ಮ ಮಗಳ ಆತ್ಮಹತ್ಯೆ ಮಾಡಿಕೊಂಡಿದ್ದರ (Suicide Case) ಬಗ್ಗೆ ಈ ಎಚ್ಎಸ್ಆರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ದಾಖಲಾದ ಎಫ್ಐಆರ್ ವಿಚಿತ್ರವಾಗಿದೆ. ‘ಮೃತ ದೇಹದ ಮೇಲೆ ಕ್ರಮ ಕೈಗೊಳ್ಳುವಂತೆ’ ದೂರುದಾರರು ದೂರು ಕೊಟ್ಟಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಇದು ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ.
ಫಜೀಲಾ ಎಂಬುವರ ಮಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಫಜೀಲಾ ಜೂ.28ರಂದು ದೂರು ನೀಡಿದ್ದಾರೆ. ಅದರಲ್ಲಿ ಅವರು ತಮ್ಮ ಮನೆ ಸಮೀಪ ಇರುವ ರಾಮಕೃಷ್ಣ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನದ ಸಮಿತಿಯವರ ವಿರುದ್ಧವೇ ಆರೋಪ ಮಾಡಿದ್ದಾರೆ. ‘ನಮ್ಮ ಮನೆ ಎದುರು ಇರುವ ಪಾರ್ಕ್ನಲ್ಲಿ ರಾಮಕೃಷ್ಣ ಮತ್ತು ವರಸಿದ್ಧಿ ವಿನಾಯಕ ದೇಗುಲ ಇದೆ. ಅದರಲ್ಲಿ ಅಳವಡಿಸಲಾದ ಧ್ವನಿವರ್ಧಕದಿಂದ ಯಾವಾಗಲೂ ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಪಾರ್ಕ್ನಲ್ಲಿ ನಮ್ಮ ಮನೆ ಮಕ್ಕಳು ಫುಟ್ಬಾಲ್ ಆಡುವಾಗ ವರಸಿದ್ಧಿ ವಿನಾಯಕ ದೇಗುಲ ಸಮಿತಿಯವರು ಗಲಾಟೆ ತೆಗೆದು, ನಮ್ಮೊಂದಿಗೆ ಜಗಳವಾಡಿದ್ದಾರೆ. ಈ ಹಿಂದೆ ನಮ್ಮ ಕಾರಿನ ಲೈಟ್ ಕೂಡ ಒಡೆದು ಹಾಕಿದ್ದಾರೆ. ಇದೆಲ್ಲದರಿಂದ ಮನನೊಂದು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಕೊನೆಯಲ್ಲಿ ‘ಮೃತದೇಹದ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬರೆಯಲಾಗಿದೆ.
ಇದನ್ನೂ ಓದಿ: Rahul Gandhi : ಕಾಂಗ್ರೆಸ್ ನಾಯಕರ ಮೇಲೆ ವಿಡಿಯೊ ಪೋಸ್ಟ್ ಮಾಡಿದ್ದ ಅಮಿತ್ ಮಾಳವೀಯ ವಿರುದ್ಧ FIR
ಮೃತದೇಹದ ಮೇಲೆ ಕ್ರಮ ಕೈಗೊಳ್ಳಿ ಎನ್ನುವುದು ಟೈಪಿಂಗ್ ತಪ್ಪು ಆಗಿರಬಹುದು. ಆ ದೂರುದಾರರು ಅವಸರದಲ್ಲಿ ಬರೆಯುವಾಗ ಆಗಿರುವ ಪ್ರಮಾದವೇ ಆಗಿರಬಹುದು. ಆದರೆ ದೂರನ್ನು ಪಡೆಯಲು ಠಾಣೆಯಲ್ಲಿ ಸಿಬ್ಬಂದಿ ಇರುತ್ತಾರೆ. ಅದನ್ನು ಠಾಣೆಯ ರೈಟರ್ ಆಗಲಿ, ಪರಿಶೀಲನೆ ಮಾಡಿದ ಇತರ ಅಧಿಕಾರಿಗಳಾಗಲಿ ಅಥವಾ ಠಾಣಾಧಿಕಾರಿಯಾಗಲಿ ಗಮನಿಸದೆ ಇರುವುದೇ ಅಚ್ಚರಿ ತರಿಸಿದೆ. ಎಫ್ಐಆರ್ ದಾಖಲಿಸಿದರೆ ಆಯಿತು ಎಂಬ ಕಾಟಾಚಾರದ ಮನೋಭಾವ ಇದಲ್ಲವೇ?