Site icon Vistara News

Bike Rally: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು

Nalin Kumar Kateel bike rally soraba

#image_title

ಸೊರಬ: ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯು ಬೃಹತ್ ಬೈಕ್ ರ‍್ಯಾಲಿ (Bike Rally) ನಡೆಸಿ ತನ್ನ ಶಕ್ತಿ ಪ್ರದರ್ಶಿಸಿತು. ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬೃಹತ್ ಬೈಕ್ ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾಲಯದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದವರೆಗೆ ಬೃಹತ್ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇಡೀ ಪಟ್ಟಣವೇ ಕೇಸರಿ‌ಮಯವಾಗಿತ್ತು. ಬಿಜೆಪಿ ಪರ ಜಯ ಘೋಷ, ಬಿಜೆಪಿ‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷರ ಪರ ಜಯಕಾರ ಕೇಳಿಬಂತು. ಸೊರಬ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಪರ ಬ್ಯಾಟಿಂಗ್ ಮಾಡಲು ಕಟೀಲ್ ಹಾಗೂ ಸಿ.ಟಿ. ರವಿ ಆಗಮಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಅವರು ತೆರೆದ ವಾಹನದಲ್ಲಿ ಬೈಕ್ ರ‍್ಯಾಲಿಯಲ್ಲಿ ಭಾಗಿಯಾದರು. ರ‍್ಯಾಲಿಯ ನಂತರ ಬಿಜೆಪಿ ತಾಲೂಕು ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಬಿಜೆಪಿ ಮುಖಂಡರು ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, “ಚುನಾವಣೆಯಲ್ಲಿ ಗೆಲುವು ಕೇವಲ ಅಧಿಕಾರ ನಡೆಸಲು ಅಲ್ಲ. ಸದೃಢ ದೇಶ ಕಟ್ಟಲು. ಇದೀಗ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಎಲ್ಲಾ ದೇಶಗಳ ಕಷ್ಟಕ್ಕೆ ನಮ್ಮ ದೇಶ ಪ್ರತಿಕ್ರಿಯೆ ನೀಡುತ್ತಿದೆ. ಇದೀಗ ಭಾರತ ಜಗತ್ತಿನ ಎತ್ತರಕ್ಕೆ ಏರುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಪ್ರಧಾನಿ ಮೋದಿಜಿ” ಎಂದು ಹೇಳಿದರು.

“ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಮ್ಮ ದೇಶವನ್ನು ಸಾಲಗಾರರ, ಹಾವಾಡಿಗರ, ಮೋಸಗಾರರ ದೇಶ ಮಾಡಿದ್ದರು. ಸಿದ್ದರಾಮಯ್ಯ ಹಾಗೂ ಡಿ‌.ಕೆ ಶಿವಕುಮಾರ್ ಅವರಿಗೆ ಸವಾಲ್ ಹಾಕುತ್ತೇನೆ . ನಮ್ಮ ಅಭಿವೃದ್ಧಿ ಕಾರ್ಡ್ ಜನರ ಮುಂದೆ ಕೊಡುತ್ತೇನೆ. ನಿಮ್ಮ ಅಭಿವೃದ್ಧಿ ಕಾರ್ಡ್ ನೀಡಿ. ಜಾತಿ ಹೆಸರಲ್ಲಿ ಚುನಾವಣೆ ಮಾಡಿದ್ದೀರಿ. ತಾಕತ್ ಇದ್ದರೆ ಅಭಿವೃದ್ಧಿಯ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಹಾಕುತ್ತೇನೆ. ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಒಂದು ಹನಿ ಕಣ್ಣೀರು ಹಾಕದ ಡಿಕೆಶಿ, ಸಿದ್ದರಾಮಯ್ಯ ಅವರು ಹಂತಕರ ಪರ ಮಾತನಾಡುತ್ತಿದ್ದಾರೆ. ನಿಮ್ಮದು ಭಯೋತ್ಪಾದಕರ ಪಾರ್ಟಿ. ಭಯೋತ್ಪಾದನೆಗೆ ಇನ್ನೊಂದು ಹೆಸರೇ ಕಾಂಗ್ರೆಸ್” ಎಂದು ಆಕ್ರೋಶ ವ್ಯಕ್ತಪಡಿಸಿದರು.

#image_title

ಇದನ್ನೂ ಓದಿ:Modi In Karnataka: ಭದ್ರಾ ಮೇಲ್ದಂಡೆಗೆ ₹5,300 ಕೋಟಿ ರೂ. ಕೊಟ್ಟಿದ್ದು ಡಬಲ್‌ ಇಂಜಿನ್‌ ಸರ್ಕಾರ: ತುಮಕೂರಿನಲ್ಲಿ ಮೋದಿ ಭಾಷಣ

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, “ಚುನಾವಣೆ ಬಂದಾಗ ಎಲ್ಲರೂ ಚುರುಕುಗೊಳ್ಳುವುದು ಸಹಜ. ಹಳ್ಳಿ ಕಡೆ ಗಣಗಸ್ತಿ ಬಡಿದಾಗ ದೇವರು ಬರೋದು ಗಂಡು ಮಗನಿಗೆ ಮಾತ್ರ. ಆದರೆ, ನೆರೆದವರೂ ಕಾಲು ಕುಣಿಸುತ್ತಾರೆ. ಇಲೆಕ್ಷನ್ ಬಂದಾಗ ಇಂಥವೆಲ್ಲ ಇರುತ್ತವೆ. ಇವೆಲ್ಲ ಮೀರಿ ಬಿಜೆಪಿ ಗೆಲ್ಲುತ್ತದೆ” ಎಂದರು.

“ಚಹಾ ಮಾರುವವ ಪ್ರಧಾನಿಯಾದರು, ರೈತನ ಮಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎನ್ನುತ್ತಾರೆ. ಆದರೆ ಜೆಡಿಎಸ್‌ ನಲ್ಲಿ ಹಾಗಿಲ್ಲ ಎಂದು ಲೇವಡಿ ಮಾಡಿದ ಅವರು, ಹಾಸನ ಟಿಕೆಟ್ ಭವಾನಿ ರೇವಣ್ಣಗೆ ಕೊಡಬೇಕು, ಎಮ್ಮೆಲ್ಸಿ ಬೇಕಿದ್ರೆ ಸೂರಜ್ ರೇವಣ್ಣಗೆ ಕೊಡಬೇಕು, ಎಂಪಿ ಟಿಕೆಟ್ ಬೇಕಿದ್ರೆ ಪ್ರಜ್ವಲ್ ರೇವಣ್ಣಗೆ ಕೊಡಬೇಕು. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ ಯೋಗ್ಯತೆ ಇರೋದು. ಅವರನ್ನು ಬಿಟ್ಟರೆ ನಿಖಿಲ್ ಕುಮಾರಸ್ವಾಮಿಗೆ ಕೊಡಬೇಕು. ಇವೆಲ್ಲವನ್ನೂ ಅವರು ಕರೆಯೋದು ತ್ಯಾಗ ಅಂತ. ಇದು ಅವರ ಪರಿಭಾಷೆ” ಎಂದು ಟೀಕಿಸಿದರು.

“ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು. ನಾವೆಲ್ಲ ಸಾಮಾನ್ಯ ಕಾರ್ಯಕರ್ತರಾಗಿ ಬಂದವರು. ಪ್ರತಿ ಕಾರ್ಯಕರ್ತನಿಗೂ ಯಾವ ಪದವಿಗೂ ಹೋಗುವ ಅವಕಾಶವನ್ನು ಬಿಜೆಪಿ ಮುಕ್ತವಾಗಿ ನೀಡುತ್ತದೆ. ನಮ್ಮ ಯೋಜನೆ, ಚಿಂತನೆ, ಪ್ರಣಾಳಿಕೆ, ಅಭಿವೃದ್ಧಿ ಕಾರ್ಯ ಚರ್ಚೆಯಾಗಬೇಕು. ನಾವು ದಿಕ್ಕು ತಪ್ಪಿಸುವ ರಾಜಕಾರಣಕ್ಕಿಂತ ಅಭಿವೃದ್ಧಿ ರಾಜಕಾರಣವನ್ನು ಬಯಸುತ್ತೇವೆ. ನಾವು ಅಭಿವೃದ್ಧಿ ಮಾಡದೇ ಇದ್ದರೆ ನಮಗೆ ವೋಟು ಕೊಡೋದು ಬೇಡ. ಎಲ್ಲರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ. ಚರ್ಚೆ ಮಾಡಲಿ, ಬೇಕಿದ್ದರೆ ಮಾಧ್ಯಮದವರೇ ವೇದಿಕೆ ಕಲ್ಪಿಸಲಿ. ಯಾವ್ಯಾವ ಜಿಲ್ಲೆಗೆ ಏನೇನು ಮಾಡಿದ್ದೇವೆ ಎಂದು ನಾವು ಕೂಡ ಚರ್ಚೆ ಮಾಡುತ್ತೇವೆʼ ಎಂದು ಹೇಳಿದರು.

#image_title

ಹಿಂದುತ್ವ ಕುರಿತು ಹೇಳಿಕೆ ನೀಡಿದ ಸಿದ್ದರಾಮಯ್ಯ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, “ಹಿಂದು, ಹಿಂದುತ್ವ ಒಂದೇ ನಾಣ್ಯದ ಎರಡು ಮುಖಗಳು. ಹಿಂದುತ್ವ ಅಂದರೆ ಎಲ್ಲವನ್ನೂ ಒಪ್ಪಿಕೊಳ್ಳುವುದು. ದೇವನೊಬ್ಬ ನಾಮ ಹಲವು ಎಂಬ ತತ್ತ್ವ ಹಿಂದುತ್ವದಲ್ಲಿದೆ. ಜಾತಿ ಸಮಾನತೆ ಬಯಸುವುದಿಲ್ಲ, ಹಿಂದುತ್ವ ಸಮಾನತೆ ಬಯಸುತ್ತದೆ. ಸಿದ್ದರಾಮಯ್ಯ ಹಿಂದುತ್ವ ಒಪ್ಪುವುದಿಲ್ಲ ಅಂತಾದರೆ, ಅವರಿಗೆ ಸಮಾನತೆ ಬೇಕಾಗಿಲ್ಲ. ಅವರಿಗೆ ಜಾತೀಯತೆ, ಅಸ್ಪೃಶ್ಯತೆ ಬೇಕು. ಅದಕ್ಕೋಸ್ಕರವೇ ಅವರು ಪರಮೇಶ್ವರ ಅವರನ್ನು ಸೋಲಿಸಿದರು. ಹಾಗಾಗಿ ಅವರು ಹಿಂದುತ್ವವನ್ನು ಒಪ್ಪಿಕೊಳ್ಳದಿರುವುದು ಸರಿಯಿದೆ. ನಾವು ಹಿಂದುತ್ವ ವಿಚಾರವನ್ನು ಇಂದೂ ತೆಗೆದುಕೊಳ್ಳುತ್ತೇವೆ. ಮುಂದೆಯೂ ತೆಗೆದುಕೊಳ್ಳುತ್ತೇವೆ” ಎಂದರು.

ಇದನ್ನೂ ಓದಿ: Actor Rajinikanth : ಜೈಸಲ್ಮೇರ್‌ನಲ್ಲಿ ರಜನಿಕಾಂತ್‌ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು

ಸೊರಬ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಕಮಲ ಪಡೆಯ ಈ ರ‍್ಯಾಲಿ ಹಾಗೂ ಘಟಾನುಘಟಿ ನಾಯಕರ ಈ ಭೇಟಿಯು ಕ್ಷೇತ್ರದ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರಿಗೆ ವರದಾನವಾಗತ್ತದಾ ಕಾದು ನೋಡಬೇಕಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್‌, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಡಿ, ಪ್ರಮುಖರಾದ ಕೆ. ಶ್ರೀನಾಥ್. ಎನ್.ಡಿ. ಸತೀಶ್. ಆರ್.ಡಿ. ಹೆಗಡೆ. ಪುರಸಭೆ ಅಧ್ಯಕ್ಷ ವೀರೇಶ್ ಮೇಸ್ತ್ರಿ, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್ ಇನ್ನಿತರರು ಇದ್ದರು.

ಇದನ್ನೂ ಓದಿ: ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು; ಅವರು ಭಾರತದ ಪ್ರಜೆಗಳಲ್ಲವೇ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನೆ

Exit mobile version