ಸೊರಬ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಟಿಕೇಟ್ ನೀಡಿದರೆ, ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಬಿಜೆಪಿ ಹಿರಿಯ ಧುರೀಣ ಪದ್ಮನಾಭ್ ಭಟ್ ಪಕ್ಷಕ್ಕೆ ಸಂದೇಶ ರವಾನಿಸಿದರು. ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ನಮೋ ವೇದಿಕೆಯಿಂದ ಹಮ್ಮಿಕೊಂಡ ಬೃಹತ್ ಬೈಕ್ ರ್‍ಯಾಲಿಗೆ ಚಾಲನೆ ನೀಡಿ, ನಂತರ ಸೊರಬ ಸರ್ಕಲ್‌ನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಹತ್ತು ವರ್ಷಗಳಿಂದ ಅಧಿಕಾರ ವಂಚಿತನಾಗಿ ಮನೆಯಲ್ಲಿ ಕುಳಿತಿದ್ದ ಕುಮಾರ್ ಬಂಗಾರಪ್ಪ ಅವರಿಗೆ ಪಕ್ಷಕ್ಕೆ ಕರೆತಂದು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಹಗಲಿರುಳು ಶ್ರಮಿಸಿದ್ದರ ಪರಿಣಾಮ ಶಾಸಕರಾದರು. ಆದರೆ ಕಾರ್ಯಕರ್ತರೆಡೆಗೆ ಅವರಿಗೆ ಕನಿಷ್ಠ ಕೃತಜ್ಞತೆಯೂ ಇಲ್ಲ ಅವರಿಗೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಜನವಿರೋಧಿ, ರೈತ ವಿರೋಧಿ, ಪಕ್ಷ ವಿರೋಧಿಯಾಗಿರುವ ಕುಮಾರ್ ಬಂಗಾರಪ್ಪ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಬಾರದು ಎಂಬ ಆಗ್ರಹದೊಂದಿಗೆ ಈಗ ನಮೋ ವೇದಿಕೆ ಕಾರ್ಯಕರ್ತರು ಈ ರ್‍ಯಾಲಿ ನಡೆಸಿದ್ದಾರೆ. ಪಕ್ಷದ ವರಿಷ್ಠರು ಇದನ್ನು ಗಮನಿಸಬೇಕು. ಕುಮಾರ್ ಅವರಿಗೆ ಟಿಕೇಟ್ ನೀಡಿದರೆ ನಮೋ ವೇದಿಕೆಯಿಂದ ಸಾಮಾನ್ಯ ಕಾರ್ಯಕರ್ತನೊಬ್ಬ ಅಖಾಡಕ್ಕೆ ಇಳಿಯಲಿದ್ದಾರೆ. ಜೊತೆಗೆ ಗೆಲುವನ್ನು ಸಾಧಿಸಲಿದ್ದೇವೆ. ಈ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದರು.
ಅಶ್ವಮೇಧ ಹಾಡು ಹೇಳಿದ್ದೇ ಸಾಧನೆ
ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರ್ಪಡೆಗೂ ಮೊದಲು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಎಂಬ ನಾಮಬಲದಿಂದಲೇ ಗೆಲುವು ಸಾಧಿಸಿದ್ದಾರೆ. ಯಾವುದೇ ರಾಜಕೀಯ ಜ್ಞಾನವಿಲ್ಲದೆ, ಹೋರಾಟದ ಹಿನ್ನೆಲೆ ಇಲ್ಲದ ಕುಮಾರ್ ಅವರಿಗೆ ವೇದಿಕೆ ಕಲ್ಪಿಸಿದರು. ಚಿತ್ರನಟ ಎಂಬ ಸ್ಟಾರ್ ಪಟ್ಟವಿತ್ತು. ಜನ ಸೇರಿದಲ್ಲೆಲ್ಲಾ ಹಾದಿ ಬೀದಿಯಲ್ಲಿ ಅಶ್ವಮೇಧ ಚಿತ್ರದ ಹಾಡೊಂದನ್ನು ಹಾಡಿ ಜನರನ್ನು ಮರಳು ಮಾಡಿದ್ದೇ ಕುಮಾರ್ ಸಾಧನೆ. ಆದರೆ, ಬಡವರ ಪರ ಕಾಳಜಿ ಇಲ್ಲದೆ ವರ್ತಿಸುತ್ತಿದ್ದಾರೆ. ತಾಳಗುಪ್ಪದಲ್ಲಿ ರೈತರನ್ನು ಬೀದಿ ಪಾಲು ಮಾಡಲಾಗಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೂರ್ಣವಿರಾಮ ನೀಡುವುದೇ ನಮೋ ವೇದಿಕೆ ಮೂಲ ಧ್ಯೇಯ. ನಮೋ ವೇದಿಕೆಯವರು ಬಿಜೆಪಿಯ ವಿರೋಧಿಗಳಲ್ಲ. ಪಕ್ಷದಲ್ಲಿ ಜನಸಂಘ ಕಾಲದಿಂದಲೂ ದುಡಿದವರು ಇದ್ದಾರೆ. ಪಕ್ಷದ ತತ್ವ ಸಿದ್ಧಾಂತಗಳ ಕನಿಷ್ಠ ಅರಿವಿಲ್ಲದಿರುವ ಕುಮಾರ್ ಅವರಿಂದ ಮೂಲ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಈ ವಿಚಾರವಾಗಿ ನಮೋ ವೇದಿಕೆ ಕಾರ್ಯಕರ್ತರು ನಾಲ್ಕು ವರ್ಷಗಳಿಂದಲೂ ಹೋರಾಟ ಮಾಡುತ್ತಲೇ ಇದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ ಎಂದು ಸ್ಪಷ್ಟಪಡಿಸಿದರು.
ರ್‍ಯಾಲಿಯ ಅಧ್ಯಕ್ಷತೆ ವಹಿಸಿದ್ದ ನಮೋ ವೇದಿಕೆಯ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದಾವಣಗೆರೆಗೆ ಬಂದು ಜನಸಂಕಲ್ಪಯಾತ್ರೆ ಸಮಾರೋಪದಲ್ಲಿ ಪಾಲ್ಗೊಂಡರೂ ಅಲ್ಲಿಗೆ ಕುಮಾರ್ ಬಂಗಾರಪ್ಪ ತೆರಳಲಿಲ್ಲ. ಕಮಿಷನ್ ಆಸೆಗಾಗಿ ಕ್ಷೇತ್ರದಲ್ಲಿಯೇ ಉಳಿದುಕೊಂಡು ಅಪೂರ್ಣ ಕಾಮಗಾರಿಗಳ ಉದ್ಘಾಟನೆ-ಶಂಕುಸ್ಥಾಪನೆಯಲ್ಲಿ ನಿರತರಾಗಿರುವುದು ಅವರ ಕಾರ್ಯವೈಖರಿ ಎತ್ತಿ ತೋರುತ್ತದೆ. ನಮೋ ವೇದಿಕೆಯ ಕಾರ್ಯಕರ್ತರು ದಾವಣಗೆರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ, ಆನವಟ್ಟಿ ಬೈಕ್ ರ್‍ಯಾಲಿಯು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿತ್ತು. ಶಿವಮೊಗ್ಗದಲ್ಲಿ ನಡೆದ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಅರವತ್ತು ಬಸ್‌ಗಳಲ್ಲಿ ನಮೋ ವೇದಿಕೆಯ ಕಾರ್ಯಕರ್ತರು ತೆರಳಿದ್ದರು. ನಮೋ ವೇದಿಕೆಯವರ ಮೂಲ ಉದ್ದೇಶವೊಂದೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಟಿಕೇಟ್ ನೀಡಬಾರದು. ಪಕ್ಷದಿಂದ ಬೇರೆ ಯಾವುದೇ ಅಭ್ಯರ್ಥಿಯನ್ನು ಸೂಚಿಸಿದರೆ ಒಗ್ಗಟ್ಟಿನಿಂದ ದುಡಿಯಲಿದ್ದೇವೆ ಎಂದರು.
ಇದಕ್ಕೂ ಮೊದಲು ಕೋಟಿಪುರದ ಶ್ರೀ ಕೈಠಭೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆಯೊಂದಿಗೆ ಆರಂಭವಾದ ಬೈಕ್ ರ್‍ಯಾಲಿಯು ಆನವಟ್ಟಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚರಿಸಿತು. ರ್‍ಯಾಲಿಯುದ್ದಕ್ಕೂ ಕುಮಾರ್ ಹಟಾವೋ.. ಬಿಜೆಪಿ ಬಚಾವೋ ಘೋಷಣೆಗಳು ಮೊಳಗಿದವು. ರ್‍ಯಾಲಿಗೆ ಡೊಳ್ಳು, ಡಿಜೆ ಸೇರಿದಂತೆ ವಿವಿಧ ಕಲಾತಂಡಗಳು ಮೆರಗು ತಂದವು. ನಮೋ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಮಂಜಪ್ಪ ನೇರಲಗಿ, ವಿಜೇಂದ್ರಗೌಡ ತೆಲಗುಂದ, ಅರುಣ್ ಕುಮಾರ್ ಪುಟ್ಟನಹಳ್ಳಿ, ಸಂಘಟನಾ ಕಾರ್ಯದರ್ಶಿ ದಿವಾಕರ ಭಟ್ ಭಾವೆ, ಪ್ರಮುಖರಾದ ಎ.ಎಲ್. ಅರವಿಂದ್, ಗುರುಪ್ರಸನ್ನಗೌಡ ಬಾಸೂರು, ನಿರಂಜನ ಕುಪ್ಪಗಡ್ಡೆ, ಅಶೋಕ್ ನಾಯ್ಕ್ ಅಂಡಿಗೆ, ಯೋಗೇಶ್ ವಕೀಲ, ಡಿ. ಶಿವಯೋಗಿ, ರಾಜಶೇಖರ ಗಾಳಿಪುರ, ಮಲ್ಲಿಕಾರ್ಜುನ ಗುತ್ತೇರ್, ಬಸವರಾಜ ಬಾರಂಗಿ, ಸಂಜೀವ್ ಆಚಾರ್, ರವಿ ಗುಡಿಗಾರ್, ಶ್ರೀಧರ್ ಭಂಡಾರಿ, ಪರಮೇಶ್, ಸೇರಿದಂತೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ತಾಲೂಕಿನ ವಿವಿಧ ಭಾಗಗಳಿಂದ ಪಾಲ್ಗೊಂಡಿದ್ದರು.
ನಮೋ ವೇದಿಕೆ ಬಿಜೆಪಿಯ ’ಎ’ ಟೀಮ್
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ತಂಡವೇ ನಮೋ ವೇದಿಕೆ. ಆದರೆ, ಇತ್ತೀಚೆಗೆ ಶಾಸಕ ಕುಮಾರ್ ಬಂಗಾರಪ್ಪ ಬೆಂಬಲಿಗನೊಬ್ಬ ನಮೋ ವೇದಿಕೆಯನ್ನು ಕಾಂಗ್ರೆಸ್‌ನ ಬಿ ಟೀಮ್ ಎಂದು ಆರೋಪಿಸಿದ್ದರು. ಪಕ್ಷದಲ್ಲಿ ಮಾನ್ಯತೆಯೇ ಇಲ್ಲದ ವ್ಯಕ್ತಿಗೆ ಪ್ರತಿಕ್ರಿಯೆ ನೀಡಬಾರದಿತ್ತು. ಆದರೆ, ನಮೋ ವೇದಿಕೆಯು ಪ್ರಾಮಾಣಿಕ, ಸ್ವಾಭಿಮಾನಿ ಕಾರ್ಯಕರ್ತರ ಬಿಜೆಪಿಯ ಎ ಟೀಮ್ ಆಗಿದೆ ಎಂದು ನಮೋ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ ತಿರುಗೇಟು ನೀಡಿದರು.