Site icon Vistara News

Birthday Celebration: ವಿಮಾನದಲ್ಲಿ ತಾಯಿಯ ಬರ್ತ್‌ಡೇ ಸೆಲೆಬ್ರೆಷನ್‌ ಮಾಡಿದ ಪೊಲೀಸ್‌ ಕಾನ್ಸ್‌ಟೇಬಲ್‌

ಹಾವೇರಿ: ಮುಕ್ಕೋಟಿ ದೇವತೆಗಳಿದ್ದರೆ ಏನಂತೆ ಮನೆ ದೈವಗಳು ಎಂದು ಅನಿಸುವುದು ಹೆತ್ತ ತಂದೆ- ತಾಯಿಯರು ಮಾತ್ರ. ಜೀವನ ಪರ್ಯಂತ ಮಕ್ಕಳಿಗಾಗಿ ಬದುಕಿದ ತಾಯಿಗಾಗಿ ಇಲ್ಲೊಬ್ಬ ಮಗ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಸ್ನೇಹಿತರೊಂದಿಗೆ ಹೋಟೆಲ್‌ ಸೇರಿದಂತೆ ಬೇರೆ ಬೇರೆ ಕಡೆ ಹುಟ್ಟುಹಬ್ಬದ ಆಚರಣೆ ಮಾಡುವುದು ಮಾಮೂಲು. ಆದರೆ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ತಮ್ಮ ತಾಯಿಯ 63ನೇ ಜನ್ಮ ದಿನವನ್ನು (Birthday Celebration) ವಿಮಾನದಲ್ಲಿ ಆಚರಿಸಿದ್ದಾರೆ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹನುಮಂತಪ್ಪ ಸುಂಕದ ತಮ್ಮ ತಾಯಿ ಪಾರ್ವತವ್ವರ 63ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿಯ ಹುಟ್ಟುಹಬ್ಬದ ಪ್ರಯುಕ್ತ ಮೊದಲ ಬಾರಿ ತಂದೆ, ತಾಯಿ ಮತ್ತು ಮಗಳೊಂದಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಜತೆಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

Birthday Celebration

ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮದ ಹನುಮಂತಪ್ಪನವರು ಪೊಲೀಸ್ ಇಲಾಖೆ ಸೇರಲು ತಾಯಿ ಪಾರ್ವತವ್ವ ಶ್ರಮಿಸಿದ್ದರು. ಸದಾ ಕೃಷಿ ಕೆಲಸದಲ್ಲೇ ನಿರತರಾಗಿರುತ್ತಿದ್ದ ತಾಯಿ- ತಂದೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ 2 ಕೆ.ಜಿ ಕೇಕ್‌ ಅನ್ನು ಖರೀದಿಸಿ, ತನ್ನ ತಾಯಿ ಪಾರ್ವತವ್ವ, ತಂದೆ ಲಕ್ಷ್ಮಣ ಮತ್ತು ಮಗಳು ಚಂದನಾಳೊಂದಿಗೆ ವಿಮಾನ ಏರಿದ್ದಾರೆ. ಆ ಬಳಿಕ ಕಾನ್ಸ್‌ಟೇಬಲ್ ಹನುಮಂತಪ್ಪ ವಿಮಾನದಲ್ಲೇ ವಿಮಾನ ಸಿಬ್ಬಂದಿಯ ಸಹಕಾರದೊಂದಿಗೆ ಕೇಕ್ ಕತ್ತರಿಸಿ ತಾಯಿಯ ಹುಟ್ಟುಹಬ್ಬ ಸಂಭ್ರಮದಿಂದ ಆಚರಿಸಿದ್ದಾರೆ.

Birthday Celebration

ತನಗಾಗಿ ಶ್ರಮಿಸಿದ ತಾಯಿಯನ್ನು ಒಮ್ಮೆಯಾದರೂ ವಿಮಾನ ಹತ್ತಿಸಬೇಕು ಎಂಬುದು ಹನುಮಂತಪ್ಪನ ಆಸೆಯಾಗಿತ್ತು. ‌ಅದಕ್ಕಾಗಿ ಒಂದು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿ, ವಿಮಾನದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸುವ ಮೂಲಕ ಸಂಭ್ರಮಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ | Punjab National Bank : ಎಫ್‌ಡಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸಿದ ಮೊದಲ ಸಾರ್ವಜನಿಕ ಬ್ಯಾಂಕ್‌ ಪಿಎನ್‌ಬಿ

Exit mobile version