Site icon Vistara News

BITM Silver jubilee | ರಜತ ಮಹೋತ್ಸವದ ಸಂಭ್ರಮದ ಹೊಸ್ತಿಲಲ್ಲಿ ʼಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ʼ

BITM Silver jubilee

ಬಳ್ಳಾರಿ: ರಾಜ್ಯದ ಹಿಂದುಳಿದ ಭಾಗದಲ್ಲಿ ಸುದೀರ್ಘವಾಗಿ ಮೂರು ದಶಕಗಳ ಕಾಲ ಅಕ್ಷರ ಸೇವೆ ನೀಡುತ್ತಿರುವ ಹೆಗ್ಗಳಿಕೆಯೊಂದಿಗೆ ಸಾಗುತ್ತಿದೆ ತುಂಗಭದ್ರ ಎಜುಕೇಷನ್ ಹೆಲ್ತ್ ಆ್ಯಂಡ್ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ (ಟಿ.ಇ.ಎಚ್.ಆರ್.ಡಿ ಟ್ರಸ್ಟ್). ಅಂದು ರಾಜಕೀಯದ ಮೂಲಕ ಸಮಾಜ ಸೇವೆ ಮಾಡಿದ ಮಾಜಿ ಸಚಿವೆ ಬಸವರಾಜೇಶ್ವರಿ ಕುಟುಂಬದವರು, ಇಂದು ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ದಾಸೋಹ ಮಾಡುತ್ತಿದ್ದಾರೆ. ತಾಯಿ ಹಾಕಿಕೊಟ್ಟ ಪಥದಲ್ಲಿ ಸಾಗುತ್ತಾ ಜನಮಾನಸದಲ್ಲಿ ಅಚ್ಚಳಿಯದೆ ಇದ್ದಾರೆ. “ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ”ಯ ಅಡಿಯಲ್ಲಿ ಬರುವ “ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್” ರಜತ ಮಹೋತ್ಸವದ (BITM Silver jubilee) ಸಂಭ್ರಮದ ಹೊಸ್ತಿಲಲ್ಲಿದೆ.

ಹಿಂದುಳಿದ ಜಿಲ್ಲೆಗಳ ಭಾಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕಲ್ಯಾಣ ಕರ್ನಾಟಕದಲ್ಲಿಯೇ ಶೈಕ್ಷಣಿಕ ಸೇವೆ ಮಾಡಬೇಕೆಂಬ ಮಹದಾಸೆಯಲ್ಲಿ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಅಕ್ಷರದ ಕಲ್ಪತರು ಟಿ.ಇ.ಎಚ್.ಆರ್.ಡಿ. ಟ್ರಸ್ಟ್ ಆಗಿದೆ.

ಬಿಐಟಿಎಂ ಎಂಬ ಕಾಲೇಜು ಇಲ್ಲದಿದ್ದರೆ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ತಾಂತ್ರಿಕ ಶಿಕ್ಷಣ ಮರೀಚಿಕೆಯಾಗುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಗುಣಾತ್ಮಕ ಶಿಕ್ಷಣ ನೀಡುವ ರಾಜ್ಯದ ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಬಿಐಟಿಎಂ ಒಂದು ಎನ್ನುವುದು ಈ ಭಾಗದ ಹೆಗ್ಗಳಿಕೆಯೇ ಸರಿ. ಇದರಿಂದಾಗಿ ರಾಜಧಾನಿಯಲ್ಲಿ ಸಿಗುವಂತಹ ಗುಣಮಟ್ಟದ ತಾಂತ್ರಿಕ ಶಿಕ್ಷಣ ಬಳ್ಳಾರಿಯಲ್ಲಿಯೇ ಸಿಗುತ್ತಿದೆ. ಈ ಸಂಸ್ಥೆಯು ಕಳೆದ ಮೂರು ದಶಕಗಳಿಂದಲೂ ಅಕ್ಷರ ದಾಸೋಹದಲ್ಲಿ ತೊಡಗಿಸಿಕೊಂಡಿದೆ.

ಸಂಸ್ಥೆಯ ಇಣುಕುನೋಟ
ಬಳ್ಳಾರಿ ಸೇರಿ ಸುತ್ತಮುತ್ತಲ ಜಿಲ್ಲೆಗಳ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, 1981ರಲ್ಲಿ ಹುಟ್ಟಿಕೊಂಡಿರುವ ಸಂಸ್ಥೆಯೇ ತುಂಗಭದ್ರ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್(ರಿ). ನರ್ಸರಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಮೂಲಕ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ಈ ಟ್ರಸ್ಟ್ ಮಾಡಿದೆ. ಇಲ್ಲಿನ ವಿದ್ಯಾರ್ಥಿ ಸಮೂಹ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಜತೆಗೆ ಬೇರೆ ದೇಶದಲ್ಲಿಯೂ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವುದು ಇಲ್ಲಿನ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಉತ್ತಮ ಶಿಕ್ಷಣದಲ್ಲಿ ಧನ್ಯತಾಭಾವವನ್ನು ಕಂಡ ಸಂಸ್ಥೆಯು, ಇಲ್ಲಿನ ವಿದ್ಯಾರ್ಥಿಗಳ ಜ್ಞಾನದ ದಾಹವನ್ನು ಮನಗೊಂಡು ವಿದ್ಯಾ ಸಂಸ್ಥೆಗಳನ್ನು ಟ್ರಸ್ಟ್ ಅಡಿಯಲ್ಲಿ ಹುಟ್ಟುಹಾಕುತ್ತಾ ಇಲ್ಲಿನ ಜನರ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುತ್ತಾ ಈ ಭಾಗದ ಶೈಕ್ಷಣಿಕ ರಂಗವನ್ನು ವಿಸ್ತಾರಗೊಳಿಸಿ, ಶ್ರೀಮಂತ ಗೊಳಿಸುವತ್ತ ದಾಪುಗಾಲಿಟ್ಟಿದೆ.

ಅಮ್ಮನೇ ಪ್ರೇರಣೆ ಮತ್ತು ಆದರ್ಶ
ಮಾಜಿ ಕೇಂದ್ರ ಸಚಿವರಾದ ದಿ. ಶ್ರೀಮತಿ ಬಸವರಾಜೇಶ್ವರಿಯವರ ಅನುಭವ, ವಿಚಕ್ಷಣೆ ಮತ್ತು ಸಮಾಜದ ಬಗ್ಗೆ ಇದ್ದ ಕಾಳಜಿ ಅಪೂರ್ವವಾದುದು. ಅತ್ಯುತ್ತಮ ಕ್ರಮ ಶಿಕ್ಷಣ, ಶಿಸ್ತು, ಬದ್ಧತೆ, ಸಮಾಜದ ಸಮಗ್ರ ಏಳಿಗೆಗೆ ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ ಅತ್ಯಗತ್ಯ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು ಶ್ರೀಮತಿ ಬಸವರಾಜೇಶ್ವರಿಯವರಾಗಿದ್ದಾರೆ. ಇವರ ನೇತೃತ್ವದಲ್ಲಿ ತುಂಗಭದ್ರ ಶಿಕ್ಷಣ ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು 1992ರಲ್ಲಿ ಬಳ್ಳಾರಿಯಲ್ಲಿ ಪ್ರಪಥಮ ಬಾರಿಗೆ “ಸಂಜಯ ಗಾಂಧಿ ಪಾಲಿಟೆಕ್ನಿಕ್” ಅನ್ನು ಪ್ರಾರಂಭವಾಯಿತು. ಅಂದು ಆರಂಭಿಸಿದ ಶಿಕ್ಷಣ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆಯುತ್ತಾ ಬಂದಿದೆ. ಇದೀಗ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ “ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್” 1997ರಲ್ಲಿ ಪ್ರಾರಂಭವಾಗಿ ಈ ವರ್ಷ “ರಜತ ಮಹೋತ್ಸವ”ದ ಸಂಭ್ರಮದಲ್ಲಿದೆ.

ನ್ಯಾಕ್‌ನಿಂದ “ಎ+” ಗ್ರೇಡ್ ಪಡೆದ ಹೆಗ್ಗಳಿಕೆ
ಈ ಹಿಂದುಳಿದ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ತಾಂತ್ರಿಕ ವಿದ್ಯಾಭ್ಯಾಸ ನೀಡುವ ಇಚ್ಛೆಯಿಂದ ಬಳ್ಳಾರಿಯಲ್ಲಿ 1997ರಲ್ಲಿ ಸ್ಥಾಪಿಸಿದ ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ (ಬಳ್ಳಾರಿ ಇಂಜಿನಿಯರಿಂಗ್ ಕಾಲೇಜ್) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ವಾಯತ್ತತೆ ಪಡೆದು, ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (ಎನ್‌ಬಿಎ) ಮಾನ್ಯತೆಯನ್ನೂ ಪಡೆದುಕೊಂಡಿತ್ತು. ಅಲ್ಲದೆ, ನ್ಯಾಷನಲ್ ಅಸೆಸ್‌ಮೆಂಟ್ & ಅಕ್ರೆಡಿಟೇಷನ್ ಕೌನ್ಸಿಲ್ (ನ್ಯಾಕ್) ನಿಂದ ಎ+ ಗ್ರೇಡ್ ಪಡೆದಿದೆ. ರಾಜ್ಯದ 220 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ವಾಯತ್ತತೆ ಪಡೆದ ಕೇವಲ 25 ಕಾಲೇಜಿಗಳಲ್ಲಿ ಬಿಐಟಿಎಂ ಕೂಡ ಒಂದಾಗಿದೆ.

ನಾಲ್ಕೂವರೆ ದಶಕಗಳ ಅನುಭವದ ಫಲ ಈ ಶಿಕ್ಷಣ ಕಲ್ಪನೆ
ಕೃಷಿ ಕುಟುಂಬದಿಂದ ಬಂದ ಬಸವರಾಜೇಶ್ವರಿಯವರು ಓದಿದ್ದು ಬಳ್ಳಾರಿಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎನ್ನುವುದು ವಿಶೇಷ. ನಾಲ್ಕು ದಶಕಗಳ ಕಾಲ ಗೆಜ್ಜಲಗಟ್ಟ ಸಂಸ್ಥಾನದಲ್ಲಿ ಜಹಗೀರದಾರ ಮನೆತನದ ಸೊಸೆಯಾಗಿ, 1956ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿ, 1957 ರಿಂದ 1977ರವರೆಗೆ ಮೂರು ಬಾರಿ ಮಾನ್ವಿಯಿಂದ ಶಾಸಕರಾಗಿದ್ದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1977 ರಿಂದ 1984ರವರೆಗೆ ರಾಯಚೂರಿನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಲ್ಲದೆ, ಮುಖ್ಯಮಂತ್ರಿ ಗುಂಡೂರಾವ್ ಅವರ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ ಸಭಾಧ್ಯಕ್ಷರಾಗಿದ್ದರು. 1984, 1989 ಮತ್ತು 1991ರಲ್ಲಿ ಮೂರು ಬಾರಿ ಬಳ್ಳಾರಿ ಸಂಸದರಾಗಿದ್ದರು. 1993ರಿಂದ 1995ರವರೆಗೆ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರದ ಅವಧಿಯಲ್ಲಿ ಕೇಂದ್ರದ ಮಹಿಳಾ ಮತ್ತು ಕಲ್ಯಾಣ ಸಚಿವರಾಗಿದ್ದರು. ಚೀನಾದ ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ಮತ್ತು ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಮೆರಿಕ, ಜಪಾನ್, ಹಾಂಕಾಂಗ್, ಸಿಂಗಾಪುರ್, ಮಲೇಷಿಯಾ, ಈಜಿಪ್ಟ್, ಜಾಂಬಿಯಾ ಮುಂತಾದ ದೇಶಗಳಿಗೆ ಭೇಟಿ ನೀಡಿದ ಅನುಭವವೇ ಇಂತಹ ದೊಡ್ಡದೊಂದು ಶಿಕ್ಷಣ ಸಂಸ್ಥೆಯ ಅಡಿಪಾಯಕ್ಕೆ ಕಾರಣವಾಯಿತು.

ಹಲವು ಹುದ್ದೆಗಳ ಅನುಭವವೇ ಶೈಕ್ಷಣಿಕ ಸೇವೆಗೆ ಪ್ರೇರಣೆ
ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಲ್ಲದೇ, ಬಸವರಾಜೇಶ್ವರಿಯವರು ನವಕರ್ನಾಟಕ ಸ್ಟೀಲ್ಸ್ ಲಿಮಿಟೆಡ್ ಸ್ಥಾಪಿಸುವ ಮೂಲಕ ಉದ್ಯಮಿಯೂ ಆಗಿದ್ದರು. ಬೆಂಗಳೂರಿನ ಕರ್ನಾಟಕ ಕೃಷಿಕ ಸಮಾಜದ ಕಾರ್ಯಾಧ್ಯಕ್ಷರಾಗಿ, ರಾಯಚೂರಿನ ಟ್ಯಾಗೂರ್ ಸ್ಮಾರಕ ವಿದ್ಯಾಸಂಸ್ಥೆಯ ಸ್ಥಾಪನಾ ಅಧ್ಯಕ್ಷರಾಗಿ, ಸಂಸದೀಯ ವ್ಯವಹಾರಗಳ ಸ್ಥಾಪನಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರ ಹಲವು ಹುದ್ದೆಗಳ ಅನುಭವವೇ ಅವರು ಒಬ್ಬ ಶಿಕ್ಷಣ ಪ್ರೇಮಿಯಾಗಿ ರೂಪುಗೊಳ್ಳಲು ಕಾರಣವಾಯಿತು.

ದೇಶ ಮತ್ತು ವಿದೇಶ ಕಲ್ಪನೆಯಲ್ಲಿ ಶಿಕ್ಷಣ
ದಿ. ಬಸವರಾಜೇಶ್ವರಿಯವರ ತೃತೀಯ ಪುತ್ರರಾದ ಡಾ.ಯಶವಂತ್ ಭೂಪಾಲ್ ಅವರು ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾಗಿದ್ದಾರೆ. ಇವರು ಕೃಷಿ ಮತ್ತು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದರೂ, ದೇಶ-ವಿದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಣ ಪದ್ಧತಿಯ ಬಗ್ಗೆ ಅಧ್ಯಯನ ಮಾಡಿ, ಸಂಸ್ಥೆಯ ಮತ್ತು ಶಿಕ್ಷಣ ಗುಣಮಟ್ಟದ ಏಳಿಗೆಗೆ ಅವಶ್ಯ ಎನಿಸಿದ ಅಂಶಗಳನ್ನು, ತಮ್ಮ ವಿದ್ಯಾಸಂಸ್ಥೆಗಳಲ್ಲಿ ಅಳವಡಿಸಿಕೊಂಡಿದ್ದು, ಸಂಸ್ಥೆಯ ಗುಣಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಇವರನ್ನು ಈಗಲೂ ತಮ್ಮ ಗೆಜ್ಜಲಗಟ್ಟ ಗ್ರಾಮದಲ್ಲಿ ಕೃಷಿಕರಾಗಿಯೂ ಕಾಣಬಹುದು. ಇವರು ಸಾವಿರಾರು ಜನರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ನೀಡಿ, ಅನ್ನದಾತರಾಗಿದ್ದಾರೆ ಹಾಗೂ ಸಿಬ್ಬಂದಿಯನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಾರೆ. ಈ ಕಲ್ಪನೆಯೇ ಸಂಸ್ಥೆಯು ಆಲದ ಮರದಂತೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದರೆ ಉತ್ಪ್ರೇಕ್ಷೆ ಎನಿಸದು.

ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ ಹೆಗ್ಗಳಿಕೆ ವಿಭಾಗಗಳಿವು
ಪ್ರಸ್ತುತ ಬಿ.ಇ. ಪದವಿಯಲ್ಲಿ 1) ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, 2) ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, 3) ಮೆಕಾನಿಕಲ್ ಎಂಜಿನಿಯರಿಂಗ್, 4) ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, 5) ಸಿವಿಲ್ ಎಂಜಿನಿಯರಿಂಗ್, 6) ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, 7) ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್), 8) ಕಂಪ್ಯೂಟರ್ ಸೈನ್ಸ್ (ಆರ್ಟಿಫಿಸಿಲ್ ಇಂಟೆಲಿಜೆನ್ಸ್)ನಲ್ಲಿ ಸುಮಾರು 3800 ವಿದ್ಯಾಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಎಂಬಿಎ ಮತ್ತು ಒಂಬತ್ತು ಸಂಶೋಧನಾ ಕೇಂದ್ರಗಳನ್ನೂ ಈ ಶಿಕ್ಷಣ ಸಂಸ್ಥೆ ಹೊಂದಿದೆ.

95 ರಿಂದ ೩೫೦೦ ಸಾವಿರ ಗಡಿದಾಟಿದ ವಿದ್ಯಾರ್ಥಿ ಬಳಗ
ಬಿಐಟಿಎಂ, ಬಳ್ಳಾರಿಯು ಕೇವಲ 95 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು, ಇಂದು 3,800 ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ, ಉದ್ಯೋಗಾವಕಾಶ ಮಾಡಿ ಕೊಟ್ಟು, ಅವರ ಜೀವನಕ್ಕೆ ಆಧಾರವಾಗಿರುವುದು, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರುಮುಖದಲ್ಲಿ ಸಾಗಲು ಕಾರಣವಾಗಿದೆ.

BITM Silver jubilee

ಸಂಸ್ಥೆಯ ಸಾರಥಿಗಳಿವರು
ದಿ.ಶ್ರೀಮತಿ ಬಸವರಾಜೇಶ್ವರಿಯವರ ನೇತೃತ್ವದಲ್ಲಿ ಟ್ರಸ್ಟ್ ಪ್ರಾರಂಭಗೊಂಡಿದ್ದು, ಪ್ರಸ್ತುತ ಟ್ರಸ್ಟ್‌ನ ಅಧ್ಯಕ್ಷರಾಗಿ ಡಾ.ಎಸ್.ಜೆ.ವಿ.ಮಹಿಪಾಲ್ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಬಿಐಟಿಎಂ ಕಾಲೇಜಿನ ಅಧ್ಯಕ್ಷರಾಗಿ ಡಾ.ಯಶವಂತ ಭೂಪಾಲ್, ಟ್ರಸ್ಟಿ, ಗೌರವ ಕಾರ್ಯದರ್ಶಿ ಹಾಗೂ ಬಿಐಟಿಎಂನ ಉಪನಿರ್ದೇಶಕರಾದ ವೈ.ಜೆ.ಪೃಥ್ವಿರಾಜ್ ಭೂಪಾಲ್, ಹಾಗೂ ಟ್ರಸ್ಟಿಗಳಾದ ಎಸ್.ಬಿ.ಅಶೋಕ್ ಭೂಪಾಲ್, ಡಾ.ವಿ.ಜೆ.ಭರತ್ ಮತ್ತು ಅಮರರಾಜ್ ಭೂಪಾಲ್‌ ಅವರು ಸಂಸ್ಥೆಯ ಸಾರಥಿಗಳಾಗಿ ಮುನ್ನಡೆಸುತ್ತಿದ್ದಾರೆ.

ಉತ್ಕೃಷ್ಟ ಆಡಳಿತ ಮಂಡಳಿ
ಬಿಐಟಿಎಂ ಕಾರ್ಯಚಟುವಟಿಕೆಗಾಗಿ ಮಾರ್ಗದರ್ಶನ ಮತ್ತು ಸಲಹೆ ನೀಡಲು ಉತ್ಕೃಷ್ಟವಾದ ಆಡಳಿತ ಮಂಡಳಿಯನ್ನು ಹೊಂದಿದ್ದು, ಇದರಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು, ಬಹುರಾಷ್ಟ್ರಿಯ ಕಂಪನಿಗಳ ಮುಖ್ಯಸ್ಥರು ಹಾಗೂ ಉನ್ನತ ಶ್ರೇಣಿಯ ಅಧಿಕಾರಿಗಳು, ರಾಜ್ಯದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಚಾರ್ಯರು ಹಾಗೂ ಪ್ರೊಫೆಸರ್‌ಗಳು, ಖ್ಯಾತ ಲೆಕ್ಕ ಪರಿಶೋಧಕರು ಇರುತ್ತಾರೆ.

ಉತ್ತಮ ಫಲಿತಾಂಶದಲ್ಲೂ ಸೈ
ಫಲಿತಾಂಶದಲ್ಲೂ ರಾಜ್ಯದ ಯಾವುದೇ ಪ್ರತಿಷ್ಠಿತ ಕಾಲೇಜಿಗೂ ಕಡಿಮೆ ಇಲ್ಲ ಎನ್ನುವುದು ಕಾಲೇಜಿನ ಫಲಿತಾಂಶದ ಇತಿಹಾಸದಿಂದ ತಿಳಿಯುತ್ತದೆ. ಶೇ.90-95ರಷ್ಟು ಫಲಿತಾಂಶವನ್ನು ಹೊಂದಿದ್ದು, ಕಾಲೇಜಿನ ಗುಣಮಟ್ಟವನ್ನು ಸಾರಿ ಹೇಳುತ್ತವೆ. ಕಳೆದ ಐದು ವರ್ಷದಲ್ಲಿ ವಿಶ್ವವಿದ್ಯಾಲಯದ 10 ರ‍್ಯಾಂಕ್‌ಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಇನ್ನು ಕ್ರೀಡೆಯಲ್ಲಿ ಕಾಲೇಜಿನ ಕ್ರೀಡಾಪಟುಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದು, “ಯುನಿವರ್ಸಿಟಿ ಬ್ಲೂ” ಎಂದು ಗುರುತಿಸಲ್ಪಟ್ಟು, ಹಲವಾರು ಕ್ರೀಡೆಗಳಲ್ಲಿ ವಿಶ್ವವಿದ್ಯಾನಿಲಯವನ್ನು ಸಹ ಪ್ರತಿನಿಧಿಸಿದ್ದಾರೆ

ವಿದ್ಯಾರ್ಥಿಗಳ ಉದ್ಯೋಗದ ವಿವರಗಳು
ಈವರಗೆ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಶೇ.78ರಷ್ಟು ವಿದ್ಯಾರ್ಥಿಗಳು ಬಹುರಾಷ್ಟೀಯ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಪಡೆಯುವ ಅತ್ಯಧಿಕ ಪ್ಯಾಕೇಜ್ ವರ್ಷಕ್ಕೆ 27.70 ಲಕ್ಷ ರೂ ಆಗಿದ್ದು, ಸರಾಸರಿ ಪ್ಯಾಕೇಜ್ ವರ್ಷಕ್ಕೆ ರೂ.4.50 ಲಕ್ಷಗಳು ಆಗಿವೆ.

ಇವರೇ ನಮ್ಮ ಶ್ರೇಯಸ್ಸು
ಡಾ. ಯಡವಳ್ಳಿ ಬಸವರಾಜ್, ಪ್ರಾಚಾರ್ಯರು, ಡಾ. ಬಿ.ಎಸ್. ಖೇಣೇದ, ಉಪಪ್ರಾಚಾರ್ಯರು ಮತ್ತು ಡೀನ್ (ಅಕಾಡೆಮಿಕ್ಸ್), ಡಾ. ಯು. ಈರಣ್ಣ, ಡೀನ್ (ವಿದ್ಯಾರ್ಥಿ ಮತ್ತು ಅಧ್ಯಾಪಕ ವ್ಯವಹಾರಗಳು), ಡಾ. ವಿ.ಸಿ.ಪಾಟೀಲ್, ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ), ಆಡಳಿತಾಧಿಕಾರಿಯಾಗಿ ಪಿ.ಅಮರೇಶಯ್ಯ, ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಕಾಲೇಜಿನ ಮುಖ್ಯ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ನುರಿತ ಮತ್ತು ಅಪಾರ ಅನುಭವ ಹೊಂದಿದ 24 ಪ್ರಾಧ್ಯಾಪಕರು, 22 ಅಸೋಸಿಯೇಟ್ ಪ್ರಾಧ್ಯಾಪಕ, 199 ಸಹಾಯಕ ಪ್ರಾಧ್ಯಾಪಕರ ಬಳಗವನ್ನು ಸಂಸ್ಥೆ ಹೊಂದಿದೆ. 48 ಜನರು ಡಾಕ್ಟರೇಟ್ ಪದವಿ, 196 ಸ್ನಾತಕೋತ್ತರ ಪದವಿ ಪಡೆದವರಾಗಿದ್ದು, ಇದರಲ್ಲಿ ಪ್ರಸ್ತುತ 68 ಸಿಬ್ಬಂದಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಧ್ಯಾಪಕರ ಪ್ರಕಟಣೆಗಳು
ಕಳೆದ ಐದು ವರ್ಷಗಳಲ್ಲಿ ನಮ್ಮ ಅಧ್ಯಾಪಕ ವೃಂದದ ಪ್ರಕಟಣೆಗಳು: ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಕಟಣೆ: 620, ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಕಟಣೆ: 50, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಸ್ತುತಪಡಿಸಲಾದ ಪ್ರಬಂಧಗಳು: 166, ಪ್ರಕಟಿತ ಪುಸ್ತಕಗಳ ಸಂಖ್ಯೆ: 05.

ನಮ್ಮ ದೇವಾಲಯ ಎಂಬ ವಿದ್ಯಾಲಯದ ವಿಸ್ತೀರ್ಣ
ಮಹಾವಿದ್ಯಾಲಯವು 15.00 ಎಕರೆ ವಿಸ್ತೀರ್ಣದ ಕ್ಯಾಂಪಸ್ ಹೊಂದಿದ್ದು, ಹಸಿರು ಗಿಡಗಳು ಮತ್ತು ವಿವಿಧ ರೀತಿಯ ಹೂಬಳ್ಳಿ ಉದ್ಯಾನವನಗಳಿಂದ ಕೂಡಿದ ಸುಂದರ ಪರಿಸರದಲ್ಲಿ 28,000 ಚದರ ಮೀಟರ್‌ನಷ್ಟು ಸುಸಜ್ಜಿತ ಕಟ್ಟಡಗಳಾದ ಅಡ್ಮಿನ್ & ಪಿಜಿ ಬ್ಲಾಕ್, ಮಿಲ್ಲೇನಿಯಂ ಬ್ಲಾಕ್, ರಾಜಶೇಖರ್ ರೆಡ್ಡಿ ಎಲೆಕ್ಟ್ರಿಕಲ್ ಬ್ಲಾಕ್, ಡಾ. ರಾಜ್ ಗೋಪಾಲ್ ಮೆಕಾನಿಕಲ್ ಬ್ಲಾಕ್ ಮತ್ತು ಸಿ.ವಿ.ರಾಮನ್ ಬ್ಲಾಕ್ ನಿರ್ಮಿಸಲಾಗಿದೆ.

ನಮ್ಮ ತಂತ್ರಜ್ಞಾನ ಮತ್ತು ಪುಸ್ತಕ ಸಂಪತ್ತು
ಈಗಿನ ಶೈಕ್ಷಣಿಕ ಗುಣಮಟ್ಟಕ್ಕೆ ಅನುಗುಣವಾಗಿ ಅತ್ಯಾಧುನಿಕ ಕಂಪ್ಯೂಟರ್‌ಗಳು, ಎಲೆಕ್ಟಾನಿಕ್ಸ್, ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕಾನಿಕಲ್ ಉಪಕರಣಗಳು, ಪ್ರಯೋಗಾಲಯಗಳು ಮತ್ತು ಡಿಜಿಟಲ್ ತರಗತಿಗಳು, ಸೆಮಿನಾರ್ ಹಾಲ್, ಭವ್ಯವಾದ ಸಭಾಂಗಣ, ಅತ್ಯುತ್ತಮ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು ಲಭ್ಯವಿದೆ. ಕಾಲೇಜಿನ ಗ್ರಂಥಾಲಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಮೇಲ್ಪಟ್ಟು ಪುಸ್ತಕಗಳು (ಸಂಪುಟಗಳ ಹಾಗೂ ಶೀರ್ಷಿಕೆಗಳು) ಮತ್ತು ರಾಷ್ಟ್ರೀಯ/ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಲಭ್ಯವಿದೆ. ಕಾಲೇಜಿನ ಆವರಣದಲ್ಲಿಯೇ ಸುಸಜ್ಜಿತ ಸುಮಾರು 1400 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ವಾಸಿಸಲು ಅನುಕೂಲವಾಗುವ ತುಂಗಾ, ಭದ್ರ, ಕೃಷ್ಣ, ಕಾವೇರಿ ಮತ್ತು ನೇತ್ರಾವತಿ ವಿದ್ಯಾರ್ಥಿ ವಸತಿ ನಿಲಯಗಳಿವೆ.

ಇದನ್ನೂ ಓದಿ | Bernard Arnault | ಈಗ ವಿಶ್ವದ ಅತ್ಯಂತ ಶ್ರೀಮಂತ ಎಲಾನ್‌ ಮಸ್ಕ್‌ ಅಲ್ಲ, ಬರ್ನಾರ್ಡ್‌ ಅರ್ನಾಲ್ಟ್! ಅದಾನಿ ನಂ.3

Exit mobile version