Site icon Vistara News

BITM Silver Jubilee | ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣದ ದಿಕ್ಸೂಚಿಯೇ ಬದಲು: ತಾಂತ್ರಿಕ ವಿವಿ ಕುಲಪತಿ ವಿದ್ಯಾಶಂಕರ್‌ ಅಭಿಮತ

BITM silver jubilee

ಬಳ್ಳಾರಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಕರ್ನಾಟಕದಲ್ಲಿ ಶಿಕ್ಷಣದ ದಿಕ್ಸೂಚಿ ಬದಲಾಗುತ್ತಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ ಅಭಿಪ್ರಾಯಪಟ್ಟರು. ನಗರದ ಬಿಐಟಿಎಂ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ರಜತ ಮಹೋತ್ಸವ (BITM Silver Jubilee) ಮತ್ತು ೨೫ ವರ್ಷಗಳ ಸಾರ್ಥಕ ಸೇವೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ʻʻನಮ್ಮ ವಿವಿಯು ಎನ್‌ಇಪಿ 2021ನ್ನು ಜಾರಿಗೆ ತಂದಿದೆ. ಹೊಸ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಾಧರಿತ ಶಿಕ್ಷಣವಾಗಿ ಹೊಸ ರೂಪ ನೀಡುತ್ತದೆ. ಇದನ್ನು ಹೊಸ ಮನ್ವಂತರ ಎನ್ನಬಹುದು. ಎನ್‌ಇಪಿಯಲ್ಲಿ ನರ್ಸರಿಯಿಂದ ಹಿಡಿದು ಪಿಎಚ್‌ಡಿ ವರೆಗೆ ಹೇಗೆ ಕಲಿಕೆಯ ಹಾದಿ ಇರಬೇಕು ಎಂಬ ಮಾಹಿತಿ ಇದೆ. ಇದರಲ್ಲಿ ಮಕ್ಕಳಿಗೆ ಮುಂದೆ ಕಲಿಯಬೇಕಾದ ಕೌಶಲಗಳು ಬಹಳ ಇವೆ. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮೈಸೂರಿನಲ್ಲಿ ಚಾಯ್ಸ್ ಬೇಸ್ (ಸ್ಕಿಲ್) ಸೆಂಟರ್ 16 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ನಮ್ಮ ಮಕ್ಕಳಿಗೆ ಐಐಟಿಯಲ್ಲಿ ನೀಡುತ್ತಿರುವ ಶಿಕ್ಷಣ ನೀಡಬೇಕುʼʼ ಎಂದರು.

ಮೈಂಡ್‌ಟ್ರೀ ಕಂಪನಿಯ ಸಹ ಸಂಸ್ಥಾಪಕ ಎನ್.ಎಸ್.ಪಾರ್ಥಸಾರಥಿ ಮಾತನಾಡಿ, ಉತ್ತಮ ಶಿಕ್ಷಣವನ್ನು ಒದಗಿಸುವ ಧ್ಯೇಯಕ್ಕೆ ನಾವು ಬದ್ಧವಾಗಿರಬೇಕು. ಭೌತಿಕ, ಡಿಜಿಟಲ್, ಬೌದ್ಧಿಕ ಹಾಗೂ ಭಾವನಾತ್ಮಕ ಮೂಲಸೌಕರ್ಯ ಇವೆಲ್ಲ ಇದ್ದರೆ ಮಾತ್ರ ಯಾವುದೇ ಸಂಸ್ಥೆ ಬೆಳೆಯಲಿದೆ. ಒಂದು ಕೊರತೆಯಾದರೂ ಬೆಳವಣಿಗೆಗೆ ಸಮಸ್ಯೆ ಆಗುತ್ತದೆ ಎಂದರು.

ಮ್ಯಾನೇಜಿಂಗ್ ಟ್ರಸ್ಟಿ ಯಶ್ವಂತ್ ಭೂಪಾಲ್ ಮಾತನಾಡಿ, ಕೇವಲ ೯೫ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಬಿಐಟಿಎಂ ಸಂಸ್ಥೆ ಇಂದು ೩,೮೦೦ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣವನ್ನು ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ, ಉದ್ಯೋಗವಕಾಶ ಮಾಡಿಕೊಟ್ಟು, ಅವರ ಜೀವನಕ್ಕೆ ಆಧಾರವಾಗಿದೆ. ಬಿಐಟಿಎಂ ಸಂಸ್ಥೆಯು ನ್ಯಾಷನಲ್ ಅಸೆಸ್‌ಮೆಂಟ್ ಅಕ್ರಿಡಿಟೇಷನ್ ಕೌನ್ಸಿಲ್ (ನ್ಯಾಕ್) ನಿಂದ ಎ+ ಗ್ರೇಡ್ ಪಡೆದಿದೆ ಎಂದರು.

ನನ್ನ ಬೆಳವಣಿಗೆಗೆ ಬಸವರಾಜೇಶ್ವರಿ ಅವರ ಆಶೀರ್ವಾದ ಕಾರಣ ಎಂದ ರಾಮುಲು
ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ನಾನು ಕೆಳ ಸಮುದಾಯದದಿಂದ ಬಂದ ವ್ಯಕ್ತಿ. ಆದರೆ ಅದನ್ನು ಲೆಕ್ಕಿಸದೆ. ಮೇಲ್ವರ್ಗದ ಲಿಂಗಾಯತ ಸಮುದಾಯದ ಬಸವರಾಜೇಶ್ವರಿ ಅವರು ತಮ್ಮ ಪುತ್ರರಲ್ಲಿ ಒಬ್ಬರನ್ನಾಗಿ ಬೆಳೆಸಿದರು. ರಾಮುಲು ದೊಡ್ಡಮಟ್ಟಕ್ಕೆ ರಾಜಕೀಯವಾಗಿ ಬೆಳೆದಿದ್ದರೆ ಅದಕ್ಕೆ ಅವರ ಆಶೀರ್ವಾದವೇ ಕಾರಣ ಎಂದರು.

ಈ ಭಾಗದಲ್ಲಿ ಶಿಕ್ಷಣ ಅಭಿವೃದ್ಧಿಗೆ ಈ ಸಂಸ್ಥೆಯ ಕೊಡುಗೆ ಮಹತ್ವದ್ದು. ೨೦೨೬ರ ಹೊತ್ತಿಗೆ ೧೯ ಲಕ್ಷ ಎಂಜಿನಿಯರ್‌ಗಳ ಕೊರತೆ ಆಗುತ್ತೆ ಎಂಬ ವರದಿ ಇದೆ. ಇಂತಹ ಸಂದರ್ಭದಲ್ಲಿ ಕೌಶಲಕ್ಕೆ ಒತ್ತು ನೀಡಬೇಕು. ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು ಶ್ರೀರಾಮುಲು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾದರಿ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಬದ್ದವಾಗಿದೆ. ೧೫೦ ಐಟಿಐ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲು ಈ ಬಾರಿಯ ಬಜೆಟ್ ನಲ್ಲಿ ೧೩೦ ಕೋಟಿ ರೂ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಆರ್.ಯಾವಗಲ್, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಟ್ರಸ್ಟ್‌ನ ಚೇರ್‌ಮನ್ ಎಸ್.ಜಿ.ವಿ.ಮಹಿಪಾಲ್, ಕಾಲೇಜಿನ ಪ್ರಮುಖರಾದ ಪೃಥ್ವಿರಾಜ್ ಭೂಪಾಲ್, ಆಶೋಕ್ ಭೂಪಾಲ್, ಅಮರ್‌ರಾಜ ಭೂಪಾಲ್, ವಿ.ಜೆ.ಭರತ್, ಪಿ.ಬಿ.ಕೊಟೂರ್, ಗಿರೀಶ ಶಿವಣ್ಣ, ಮೋಹನ್ ಕುಮಾರ್, ವೈ.ಎಂ.ರೆಡ್ಡಿ, ಇ.ಎಸ್.ರಾಂ, ಯಡವಳ್ಳಿ ಬಸವರಾಜ್, ಆಡಳಿತಾಧಿಕಾರಿ ಪಿ.ಅಮರೇಶಯ್ಯ ಹಾಗೂ ಇತರರಿದ್ದರು.

ಇದನ್ನೂ ಓದಿ | BITM Silver jubilee | ರಜತ ಮಹೋತ್ಸವದ ಸಂಭ್ರಮದ ಹೊಸ್ತಿಲಲ್ಲಿ ʼಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ʼ

Exit mobile version