ಕಲಬುರಗಿ: ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಮನೆಗೆ ಬಿಜೆಪಿ ನಿಯೋಗ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. ಜಿಲ್ಲೆಯ (Kalaburagi News) ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಶಿವಕುಮಾರ್ ತಾಯಿ ಸುಶೀಲಾಬಾಯಿ, ಪತ್ನಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಬಿಜೆಪಿ ನಾಯಕರು, ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ, ಎಂಎಲ್‌ಸಿ ಎನ್. ರವಿಕುಮಾರ್, ಸಂಸದ ಉಮೇಶ್ ಜಾಧವ್ , ಶಾಸಕ ಬಸವರಾಜ್ ಮತ್ತಿಮೂಡ್, ಎಂಎಲ್‌ಸಿ ಬಿ.ಜಿ. ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಮತ್ತಿತರರು ಬಿಜೆಪಿ ನಿಯೋಗದಲ್ಲಿದ್ದರು.
ಈ ವೇಳೆ ಕೇಂದ್ರ ಸಚಿವ ಭಗವಂತ್ ಖೂಬಾ ಮಾತನಾಡಿ, ಶಿವಕುಮಾರ್ ಆತ್ಮಹತ್ಯೆಗೂ ಮುನ್ನ ವಾಯ್ಸ್ ರೆಕಾರ್ಡ್ ಮಾಡಿದ್ದಾನೆ. ಆಡಿಯೊದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಹೆಸರು ಹೇಳಿದ್ದಾನೆ. ರಾಜ್ಯದಲ್ಲಿ ಅವರದೇ ಸರ್ಕಾರ ಇದೆ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಸಿಬ್ಬಂದಿ ಬಂದು ಪಂಚನಾಮೆ ಮಾಡಿಲ್ಲ. ಆಡಿಯೊ ರೆಕಾರ್ಡ್ ಮಾಡಿದ್ದ ಮೊಬೈಲ್ ನಾಪತ್ತೆಯಾಗಿದೆ. ಕೈ ಮುಖಂಡ ಜಗದೀಶ್ ಪಾಟೀಲ್ ಹಾಗೂ ಶಿವಕುಮಾರ್ ಪೂಜಾರಿ ಪತ್ನಿ ಸಹೋದರ ರಾಜು ಅವರಿಗೆ ಮಂಪರು ಪರೀಕ್ಷೆ ಮಾಡಬೇಕು. ಹಾಗೆಯೇ ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | BJP Ticket Fraud : ಮತ್ತೊಂದು ಬಿಜೆಪಿ ಟಿಕೆಟ್ ಮೋಸ; 2.55 ಕೋಟಿ ರೂ. ವಂಚನೆ ಸಂಬಂಧ FIR ದಾಖಲು!
ಎಂಎಲ್‌ಸಿ ಎನ್. ರವಿಕುಮಾರ್ ಮಾತನಾಡಿ, ಕಲಗುರ್ತಿ ಹಾಗೂ ಶಿರೋಳ್ಳಿ ಗ್ರಾಮ ಎರಡೂ ಕಡೆ ಬಿಜೆಪಿ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾರಣ ಎಂದು ಶಿವಕುಮಾರ್ ಹೇಳಿದ್ದಾನೆ. ಆದರೆ, ಕಾಂಗ್ರೆಸ್‌ನ ಜಗದೀಶ್ ಪಾಟೀಲ್, ಬಾಬು ಪೂಜಾರಿ ಯಾಕೆ ಶವ ಇಳಿಸಿದರು. ಶಿವಕುಮಾರ್ ಬರೆದಿಟ್ಟ ಪತ್ರಗಳು ಮೊಬೈಲ್ ಎಲ್ಲಿ ಹೋದವು? ಸತ್ತಿದ್ದ ಜಾಗದಿಂದ ಮೃತದೇಹ ಬೇರೆ ಜಾಗಕ್ಕೆ ಯಾಕೆ ಶಿಫ್ಟ್ ಆಯ್ತು ಎಂದು ಪ್ರಶ್ನಿಸಿದರು.
ಎಲ್ಲಾ ಕಾರ್ಯ ಮುಗಿದ ಮೇಲೆ ಪೊಲೀಸರಿಗೆ ಬರಲು ಹೇಳಿದ್ದೀರಾ? ಇದೆಲ್ಲಾ ಪ್ಲ್ಯಾನ್ ಮಾಡಿ ಹತ್ಯೆ ಮಾಡಿರುವುದು. ಪೊಲೀಸರು ಯಾಕೆ ಪಂಚನಾಮೆ ಮಾಡಿಲ್ಲ, ನೀವು ಅವರ ಏಜೆಂಟ್‌ಗಳಾ? ಶರಣ ಪ್ರಕಾಶ್ ಪಾಟೀಲ್ ಅವರ ಆಣತಿಯಂತೆ ಮಾಡುತ್ತೀರಾ, ನಿಮ್ಮ ಕೆಲಸ ಯಾಕೆ ಸರಿಯಾಗಿ ಮಾಡ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸಚಿವ ಪ್ರಭಾವ ಬೀರಿ ತನಿಖೆಗೆ ಅಡ್ಡಿಯಾಗಬಹುದು, ಹೀಗಾಗಿ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಕಲಗುರ್ತಿಯಲಲ್ಲಿ ಅರ್ಚನಾ ಎನ್ನುವ ಯುವತಿಯ ಅಪಹರಣವಾಗಿತ್ತು. ಆಗ ದೇವಾನಂದ ಕಾರಣ ಎಂದು ಹೇಳಿದ್ದರು, ಆತ ಕೋಲಿ ಸಮಾಜದ ಯುವಕ. ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳಕ್ಕೆ ದೇವಾನಂದ ಕೊರಬಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು
ಅರ್ಚನಾ ಹೇಳುತ್ತಿದ್ದಾರೆ. ಕೈ ಮುಖಂಡ ಶಿವರಾಜ್ ಗೌಡ ದೇವಾನಂದ ಕೊರಬಗೆ ಸಾಕಷ್ಡು ಹೆದರಿಸಿದ್ದಾರೆ. ಆದರೆ ಅವರನ್ನು ಬಿಟ್ಟು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣ ದಾರಿ ತಪ್ಪಿದರೆ ಸಚಿವ ಪ್ರೀಯಾಂಕ ಖರ್ಗೆ ಕಾರಣ ಎಂದು ಕಿಡಿಕಾರಿದರು.
ಇದನ್ನೂ ಓದಿ | HD Kumaraswamy : ಜನ ಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ನೋಡುತ್ತಿದ್ದ! ಸಿಎಂ – ಎಚ್‌ಡಿಕೆ ವಾರ್
ಶಿವರಾಜ್ ಗೌಡನನ್ನು ಯಾಕೆ ಅರೆಸ್ಟ್ ಮಾಡಿಲ್ಲ. ಮುಡಬಾಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಶಿವರಾಜ್ ಗೌಡ ಅವರೇ ಕಾರಣ ಎಂದು ತಿಳಿಸಲಾಗಿದೆ. ನಮ್ಮ ಕೋಲಿ ಸಮಾಜದವರು 26 ದಿನದಿಂದ ಧರಣಿ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಬಂದು ಭೇಟಿಯಾಗಿಲ್ಲ. ಎರಡು ಕಡೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಸಚಿವರಾದ ಪ್ರೀಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ್ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.