Site icon Vistara News

Karnataka Politics: ಬಿಜೆಪಿ ಸರ್ಕಾರದಲ್ಲಿ ಜಾರಿಯಾದ 485 ಕೋಟಿ ರೂ. ಯೋಜನೆಗಳು ರದ್ದು!

Construction work

ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ 485 ಕೋಟಿ ರೂ.ಗಳ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ (Karnataka Politics) ರದ್ದುಪಡಿಸಿದೆ. ಯೋಜನೆಗಳ ಜತೆಗೆ ಸಫಾಯಿ ಕರ್ಮಚಾರಿಗಳಿಗೆ ಸಮವಸ್ತ್ರ, ಸುರಕ್ಷತಾ ಸಾಧನಾ ಖರೀದಿಗೆ ಮೀಸಲಿಟ್ಟಿದ್ದ 15 ಕೋಟಿ ರೂ. ಅನುದಾನವನ್ನೂ ವಾಪಸ್‌ ಪಡೆದಿರುವುದು ಕಂಡುಬಂದಿದೆ.

ಹಲವು ಶಾಸಕರು ನಮ್ಮ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ನಡುವೆ ರಾಜರಾಜೇಶ್ವರಿ ನಗರ ಕ್ಷೇತ್ರ ಶಾಸಕ ಎಂ.ಮುನಿರತ್ನ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ, ಇತ್ತ ಕಾಂಗ್ರೆಸ್ ಸರ್ಕಾರ ಮಾತ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ರದ್ದುಪಡಿಸುತ್ತಿದೆ. ಮಿನರ್ವ ಸರ್ಕಲ್ ಫ್ಲೈಓವರ್ ಸೇರಿ ಸಫಾಯಿ ಕರ್ಮಚಾರಿಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಕಾಂಗ್ರೆಸ್ ಹಿಂಪಡೆದಿದೆ.

ಮಿನರ್ವ ವೃತ್ತ- ಹಡ್ಸನ್ ವೃತ್ತದವರೆಗಿನ ₹213 ಕೋಟಿಯ ಮೇಲ್ಸೇತುವೆ ರದ್ದು

ಬಿಬಿಎಂಪಿ ನಿರ್ವಹಿಸಬೇಕಿದ್ದ 20 ಕಾಮಗಾರಿಗಳನ್ನು ಕಾಂಗ್ರೆಸ್‌ ಸರ್ಕಾರ ರದ್ದು ಮಾಡಿದ್ದು, ಅದರ ಬದಲಿಗೆ ಅದೇ ಮೊತ್ತದ ಅನುದಾನದಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಆದೇಶಿಸಲಾಗಿದೆ. ಯಶವಂತಪುರ ಕ್ಷೇತ್ರವನ್ನು ಈ ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ. ಇನ್ನು ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ₹213 ಕೋಟಿ ರೂ. ವೆಚ್ಚದಲ್ಲಿ ಜೆ.ಸಿ. ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಇನ್ನೂ ಟೆಂಡರ್‌ ಕರೆಯದ ಕಾರಣದ ಈ ಯೋಜನೆಯನ್ನು ರದ್ದು ಮಾಡಲಾಗಿದೆ.

ಹೊರ ವರ್ತುಲ ರಸ್ತೆಯಲ್ಲಿ ₹45.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆಯಾಗಿದ್ದ ಇಟ್ಟುಮಡು ಜಂಕ್ಷನ್‌ ಹಾಗೂ ಕಾಮಾಕ್ಯ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಕಾರಿಡಾರ್‌ ಅನ್ನು ರದ್ದು ಮಾಡಲಾಗಿದೆ. ಮುಖ್ಯಮಂತ್ರಿಯವರ ವಿವೇಚನಾ ಅನುದಾನ ₹11.5 ಕೋಟಿ, ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಬಿಎಂಪಿ ನಿರ್ವಹಿಸಬೇಕಿದ್ದ ₹70 ಕೋಟಿ ಕಾಮಗಾರಿಗಳು ರದ್ದಾಗಿವೆ. ಇತ್ತ ಜಯನಗರ, ಚಿಕ್ಕಪೇಟೆ, ಆರ್‌.ಆರ್‌. ನಗರ, ಕೆ.ಆರ್‌. ಪುರ, ಮಹದೇವಪುರ, ಪದ್ಮನಾಭನಗರ, ದಾಸರಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಅನುಮೋದನೆಯಾಗಿದ್ದ ಸುಮಾರು ₹100 ಕೋಟಿ ಕಾಮಗಾರಿಗಳನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ | Karnataka Politics : ಡಿಕೆಶಿ ಕಾಲಿಗೆ ಬಿದ್ದಿದ್ದೇನೆ; ಅನುದಾನ ಕೊಡದಿದ್ದರೆ ಉಗ್ರ ಪ್ರತಿಭಟನೆ ಎಂದ ಮುನಿರತ್ನ

ಕೆಲ ವಿಧಾನಸಭೆ ಕ್ಷೇತ್ರಗಳಲ್ಲಿ ಚರಂಡಿ, ರಸ್ತೆ, ತೋಟಗಾರಿಕೆ ಇಲಾಖೆಯ ಸೌಂದರ್ಯೀಕರಣ, ಘನತ್ಯಾಜ್ಯ ಮೂಲಸೌಕರ್ಯ, ರಾಜಕಾಲುವೆ ಕಾಮಗಾರಿಗಳನ್ನು ನಿರ್ವಹಿಸಲು ಅನುಮೋದಿಸಲಾಗಿತ್ತು. ಈಗ ಇಲ್ಲಿನ‌ ಅನುದಾನವನ್ನ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಹಂಚಿಕೆ ಮಾಡಲಾಗಿದೆ. ಹಾಗೆಯೇ ಸರ್ಕಾರ 18 ಸಾವಿರ ಸಫಾಯಿ ಕರ್ಮಚಾರಿಗಳಿಗೆ ಸಮವಸ್ತ್ರ, ಸುರಕ್ಷತಾ ಸಾಧನಾ ಖರೀದಿಗೆ ಮೀಸಲಿಟ್ಟದ್ದ 15 ಕೋಟಿ ರೂ. ಅನುದಾನ ಹಿಂಪಡೆದು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ.

Exit mobile version