Site icon Vistara News

ಬಿಜೆಪಿ ನನ್ನನ್ನು ಮೂಲೆಗುಂಪು ಮಾಡಿಲ್ಲ, ಟಿಪ್ಪು-ಹಿಜಾಬ್​ಗಳೆಲ್ಲ ಅನಗತ್ಯ ವಿಚಾರಗಳು: ಬಿ.ಎಸ್​.ಯಡಿಯೂರಪ್ಪನವರ ಮಾತುಗಳಿವು

B S Yediyurappa On Opposition Leader Selection

BJP Do Not Elect Karnataka Leader Of Opposition, BSY Says Will Take Two More Days

ಬೆಂಗಳೂರು: ಬಿಜೆಪಿ ಹಿರಿಯ, ಜನಮೆಚ್ಚಿದ ನಾಯಕ ಬಿ.ಎಸ್​.ಯಡಿಯೂರಪ್ಪ(BS Yediyurappa)ನವರು ಫೆ.27ರಂದು 80ನೇ ವರ್ಷದ ಜನ್ಮದಿನ ಆಚರಿಸಿಕೊಂಡರು. ಅವರ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಶಿವಮೊಗ್ಗ ಏರ್​ಪೋರ್ಟ್​ ಉದ್ಘಾಟಿಸಿದರು. ಯಡಿಯೂರಪ್ಪನವರಿಗೆ ಶುಭಕೋರಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಅಗತ್ಯವಿರುವ ‘ಬ್ರಹ್ಮಾಸ್ತ್ರ’ವನ್ನು ಬಿ.ಎಸ್​.ಯಡಿಯೂರಪ್ಪನವರ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಿಯೋಜಿಸಿದ್ದಾರೆ. ಇದೇ ಹೊತ್ತಲ್ಲಿ, ಬಿ.ಎಸ್.ಯಡಿಯೂರಪ್ಪನವರು ನ್ಯೂಸ್​ 18 ಮಾಧ್ಯಮಕ್ಕೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ.

ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದ ಯಡಿಯೂರಪ್ಪನವರು ಮುಂದಿನ ಯಾವುದೇ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಇನ್ನು ವಿಧಾನಸಭೆಗೂ ಬರುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು ‘ನಾನು ಇನ್ನೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಸದನಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದೇನೆ ಹೊರತು, ನಾನು ರಾಜಕಾರಣದಿಂದ ನಿವೃತ್ತಿ ಪಡೆದಿಲ್ಲ. ನನ್ನ ಆರೋಗ್ಯ ಸರಿಯಾಗಿದ್ದು, ಸಹಕರಿಸಿದ್ದೇ ಆದಲ್ಲಿ ಇನ್ನೂ 10 ವರ್ಷ ಪಕ್ಷಕ್ಕಾಗಿ ದುಡಿಯುತ್ತೇನೆ. ಬರೀ ವಿಧಾನಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ಲೋಕಸಭೆ ಚುನಾವಣೆಯಲ್ಲೂ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸುತ್ತೇನೆ. ಪ್ರತಿ ಚುನಾವಣೆಯಲ್ಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಸದಾ ಬದ್ಧನಾಗಿರುತ್ತೇನೆ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮುಖ್ಯವಾಗಿ ವಿವಾದಿತ ವಿಷಯಗಳಾದ ಟಿಪ್ಪು, ಹಿಜಾಬ್​, ಹಲಾಲ್​ಗಳ ಬಗ್ಗೆ ಮಾತನಾಡಿದ ಯಡಿಯೂರಪ್ಪ, ‘ಟಿಪ್ಪು ವಿಷಯ ಅನಗತ್ಯ. ಕೈಗೆತ್ತಿಕೊಂಡು ಬಗೆಹರಿಸಬೇಕಾದ ಸಮಸ್ಯೆಗಳು ಬೇರೆ ಸಾಕಷ್ಟಿವೆ. ಬಿಜೆಪಿಯೇ ಆಗಲಿ, ಇನ್ಯಾವುದೇ ರಾಜಕೀಯ ಪಕ್ಷವೇ ಆಗಲಿ, ಅವರು ಈ ರಾಜ್ಯದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಆಶಯ ಹೊಂದಿದೆ ಎಂದಾದ ಮೇಲೆ, ಅಲ್ಲಿ ಟಿಪ್ಪು ಆಗಲಿ ಅಂಥ ಅನಗತ್ಯ ವಿಷಯವನ್ನಾಗಲಿ ದೊಡ್ಡದು ಮಾಡಬಾರದು‘ ಎಂದು ಹೇಳಿದರು.

ಹಿಜಾಬ್​, ಹಲಾಲ್​ನಂಥ ವಿಷಯಗಳೇ ಮುಸ್ಲಿಂ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್.ಯಡಿಯೂರಪ್ಪ ‘ಬಿಜೆಪಿಯಾಗಲೀ, ಈ ಪಕ್ಷದ ಹಿರಿಯ ನಾಯಕರೇ ಆಗಲಿ ಎಂದಿಗೂ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸಿಸಲ್ಲ ಮತ್ತು ದೂರ ಇಟ್ಟಿಲ್ಲ. ಸಮಾಜವನ್ನು ವಿಭಜಿಸಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಎಂದಿಗೂ ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡಿಲ್ಲ. ಈ ವಿಚಾರದಲ್ಲಿ ಏನೇ ಸಮಸ್ಯೆಯಿದ್ದರೂ ಪರಿಹಾರ ಮಾಡೋಣ’ ಎಂದು ಹೇಳಿದರು.

ಪಕ್ಷ ನನ್ನನ್ನು ಎಂದಿಗೂ ಬದಿಗೊತ್ತಿಲ್ಲ

ಬಿ.ಎಸ್.ಯಡಿಯೂರಪ್ಪನವರನ್ನು ಪಕ್ಷದಲ್ಲಿಯೇ ಮೂಲೆಗುಂಪು ಮಾಡಲಾಗಿದೆ ಎಂಬ ಮಾತು ಮೊದಲಿನಿಂದಲೂ ಇದೆ. ಅದನ್ನು ಆಗಾಗ ಎತ್ತಿ ಆಡುವವರು ವಿರೋಧ ಪಕ್ಷದವರು. ಕಳೆದವಾರ ಸದನದಲ್ಲಿ ಮಾತನಾಡುವಾಗಲೂ ಬಿಎಸ್​ವೈ ಈ ವಿಷಯವನ್ನು ಪ್ರಸ್ತಾಪಿಸಿ, ನನ್ನನ್ನು ಎಂದಿಗೂ ಬಿಜೆಪಿ ವರಿಷ್ಠರು ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿದ್ದರು. ಈಗ ಅದೇ ವಿಷಯವನ್ನು ನ್ಯೂಸ್​ 18ಗೆ ಕೊಟ್ಟ ಸಂದರ್ಶನದಲ್ಲೂ ಪುನರುಚ್ಚರಿಸಿದರು. ‘ನನ್ನನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ. ಬಿಜೆಪಿ ಹೈಕಮಾಂಡ್ ನನಗೆ ಸಾಕಷ್ಟು ಪ್ರಾಮುಖ್ಯತೆ ನೀಡಿದೆ. ನಾನು ಚುನಾವಣಾ ಸಮಿತಿಯಲ್ಲಿ ಇದ್ದೇನೆ, ಕೋರ್​ ಕಮಿಟಿಯಲ್ಲಿ ಇದ್ದೇನೆ. ಪ್ರಧಾನಿ ಮೋದಿಯವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ನನ್ನನ್ನು ಎಲ್ಲಿ ಮೂಲೆಗುಂಪು ಮಾಡಿದ್ದಾರೆ?‘ಎಂದು ಬಿಎಸ್​ವೈ ಹೇಳಿದರು.

ಲಿಂಗಾಯತರು ಮತ್ತು ಬಿಜೆಪಿ ನಡುವೆ ಕೊಂಡಿಯಾಗಬಲ್ಲರು ಬಿಎಸ್​ವೈ

ಸದ್ಯ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಮತ ಇರುವ ಸಮುದಾಯ ಲಿಂಗಾಯತ. ಸದ್ಯ ಪ್ರತ್ಯೇಕ ಮೀಸಲಾತಿ ವಿಷಯದಲ್ಲಿ, ಬಿಜೆಪಿ ಮತ್ತು ಲಿಂಗಾಯತ ಸಮುದಾಯದ ಮಧ್ಯೆ ಸಣ್ಣ ಬಿರುಕು ಮೂಡಿದೆ. ಲಿಂಗಾಯತ ಮತ ಬಿಜೆಪಿಗೇ ಪಕ್ಕಾ ಎಂದಿತ್ತು. ಆದರೀಗ ಅದೇ ಸಮುದಾಯವೇ ಬಿಜೆಪಿ ಸರ್ಕಾರದ ವಿರುದ್ಧ ಮೀಸಲಾತಿ ವಿಷಯಕ್ಕೆ ತಿರುಗಿಬಿದ್ದಿದೆ. ಇದೇ ಹೊತ್ತಲ್ಲಿ ಯಡಿಯೂರಪ್ಪನವರನ್ನು ಬಿಜೆಪಿ ಮುಂದೆಬಿಟ್ಟಿದೆ. ಲಿಂಗಾಯತ ಮತ ಸೆಳೆಯಲು ಯಡಿಯೂರಪ್ಪನವರಿಂದ ಸಾಧ್ಯ ಎಂಬುದು ಅವರ ನಂಬಿಕೆ.

ಈ ಬಗ್ಗೆಯೂ ಮಾತನಾಡಿದ ಬಿಎಸ್​ವೈ ‘ಲಿಂಗಾಯತ ಸಮುದಾಯವನ್ನು ಮನವೊಲಿಸಲು ನಾವು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತೇವೆ. ಅವರ ಬೇಡಿಕೆಗಳು ಏನಿವೆಯೆಂದು ನೋಡಿ, ಅದನ್ನು ಪೂರೈಸಲು ಪ್ರಯತ್ನ ಮಾಡುತ್ತೇವೆ. 101 ಪರ್ಸೆಂಟ್​ ಅವರು ನಮ್ಮೊಂದಿಗೆ ಇದ್ದಾರೆ ಎಂಬ ನಂಬಿಕೆ ನನಗೆ ಇದೆ. ಬಿಜೆಪಿಗೆ ಬೆಂಬಲಿಸಿ, ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಅವರ ಬಳಿ ಮನವಿ ಮಾಡುತ್ತೇನೆ’ ಎಂದು ಹೇಳಿದರು.

ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡ ಹೊತ್ತಲ್ಲೇ, ಕಾಂಗ್ರೆಸ್​ ಅದರ ಲಾಭ ಪಡೆಯಲು ಮುಂದಾಗುತ್ತಿದೆ. ಲಿಂಗಾಯತ ಪ್ರಮುಖ ನಾಯಕ ಯಡಿಯೂರಪ್ಪನವರನ್ನು ಬಿಜೆಪಿ ನಿರ್ಲಕ್ಷಿಸಿದ್ದು ಮಾತ್ರವಲ್ಲ, ಲಿಂಗಾಯತ ಸಮುದಾಯಕ್ಕೂ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್​ ಪ್ರಚಾರ ಮಾಡುತ್ತಿದೆ. ಈ ಮೂಲಕ ಆ ಸಮುದಾಯ ಮತ ಸೆಳೆಯಲು ಯತ್ನಿಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ ‘ಯಡಿಯೂರಪ್ಪನವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಯಾವತ್ತೂ ಲಿಂಗಾಯತರು ಭಾವಿಸಲೇಬಾರದು. ಸಿಎಂ ಸ್ಥಾನಕ್ಕೆ ನಾನೇ ರಾಜೀನಾಮೆ ಕೊಟ್ಟೆ, ಈಗ ಶಾಸಕನ ಸ್ಥಾನಕ್ಕೂ ನಾನೇ ರಿಸೈನ್ ಮಾಡಿದೆ. ಇವೆರಡೂ ನನ್ನ ವೈಯಕ್ತಿಕ ನಿರ್ಧಾರಗಳು. ಆದರೆ ಈಗ ಡಿ.ಕೆ.ಶಿವಕುಮಾರ್​ ಮತ್ತು ಸಿದ್ಧರಾಮಯ್ಯನವರಿಗೆ ನನ್ನ ಮೇಲೆ ಯಾಕಿಷ್ಟು ಪ್ರೀತಿ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನನ್ನು ಯಾರೂ ನಿಗ್ಲೆಕ್ಟ್​ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಬೊಮ್ಮಾಯಿ ಕಠಿಣ ಪರಿಶ್ರಮಿ

ಈಗಿನ ರಾಜ್ಯ ಸರ್ಕಾರದ ಆಡಳಿತಕ್ಕೆ ಎಷ್ಟು ಅಂಕ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಯಡಿಯೂರಪ್ಪ ‘ ಬಸವರಾಜ ಬೊಮ್ಮಾಯಿ ನಿಜಕ್ಕೂ ಒಬ್ಬರು ಪರಿಶ್ರಮಿ. ಅವರ ಕೆಲಸಕ್ಕೆ ನಾನು ಎ ಪ್ಲಸ್​ ಅಂಕ ಕೊಡುತ್ತೇನೆ. ಅವರು ಈ ರಾಜ್ಯಕ್ಕಾಗಿ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

Exit mobile version