ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಸಕಲ ಸಿದ್ಧತೆ ನಡೆಸುತ್ತಿದೆ. ಇದೇ ಚುನಾವಣೆ ರಣಕಹಳೆಯ ಭಾಗವಾಗಿ ನವೆಂಬರ್ 7, 8 ಹಾಗೂ 9ರಂದು ‘ಜನಸಂಕಲ್ಪ ಯಾತ್ರೆ’ ಕೈಗೊಳ್ಳಲು ತೀರ್ಮಾನಿಸಿದೆ. ಈ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.
“ನವೆಂಬರ್ 7 ರಂದು ಕಾಪು ಮತ್ತು ಬೈಂದೂರು, 8 ರಂದು ಶಿರಹಟ್ಟಿ ಮತ್ತು ಬ್ಯಾಡಗಿ, 9 ರಂದು ಬೆಳಗಾವಿ ಉತ್ತರ, ರಾಯಭಾಗ ಮತ್ತು ಖಾನಾಪೂರದಲ್ಲಿ “ಜನಸಂಕಲ್ಪ ಯಾತ್ರೆ” ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಸಂಸದರು, ಮಾಜಿ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಿಸಿದ ಅವರು, “ರಾಜ್ಯದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿಸಲು, ಸದ್ವಿಚಾರ ಚಿಂತನೆ, ಒತ್ತಡಗಳಿಂದ ಮುಕ್ತವಾಗಿ ಜ್ಞಾನಾರ್ಜನೆ, ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಲು ಕ್ರಮ ಕೈಗೊಂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
“ಕಾಂಗ್ರೆಸ್ ಟಿಕೆಟ್ ಪಡೆಯಲು 2 ಲಕ್ಷ ರೂಪಾಯಿ ನೀಡಿ ಅರ್ಜಿ ಸಲ್ಲಿಸಬೇಕೆಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ ಎರಡೇ ದಿನದಲ್ಲಿ ಇಬ್ಬರು ಮಾಜಿ ಸಂಸದರಾದ ಮುದ್ದಹನುಮೇಗೌಡ, ಶಶಿಕುಮಾರ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೋ, ಅದರ ವಿರುದ್ಧವಾಗುತ್ತದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ ಓಡಾಡಿದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಕೆಲದಿನಗಳ ಹಿಂದೆ ವಿಜಯಪುರ ಮಹಾನಗರ ಪಾಲಿಕೆ ಮತ್ತು ಕೊಳ್ಳೆಗಾಲ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿರುವುದು ರಾಜ್ಯ ಚುನಾವಣೆಯ ದಿಕ್ಸೂಚಿಯಾಗಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೇರಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ | ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ: ಎಂಎಲ್‌ಸಿ ಎನ್.ರವಿಕುಮಾರ್