ದೊಡ್ಡಬಳ್ಳಾಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅನುಪಸ್ಥಿತಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಕೇಂದ್ರದ ಪ್ರತಿನಿಧಿಯಾಗಿ ಆಗಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಅಸ್ಖಲಿತ ವಾಗ್ಝರಿ ಮತ್ತು ಪ್ರಖರ ವಾಕ್ ಪ್ರಹಾರಗಳಿಂದ ಮನ ಸೂರೆಗೊಂಡರು.
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆದ ರಾಜ್ಯ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಕನ್ನಡ ಮಾತಿನ ಮೂಲಕ ಭಾಷಣ ಆರಂಭಿಸಿ ಮನ ಗೆದ್ದರು.
ʼʼಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಿಂದ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿರುವ ನನ್ನೆಲ್ಲಾ ಪ್ರೀತಿಯ ಬಂಧುಗಳಿಗೆ ನಮಸ್ಕಾರಗಳುʼʼ ಎಂದು ಭಾಷಣ ಆರಂಭಿಸಿದರು.
ʻʻಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಈ ಪುಣ್ಯಭೂಮಿಗೆ ಬಂದಿರುವುದು ನಂಗೆ ತುಂಬಾ ಸಂತೋಷ ಆಗಿದೆ. ನಂದಿ ಬೆಟ್ಟದ ಭೋಗನಂದೀಶ್ವರ ಸ್ವಾಮಿ, ತಾಯಿ ಕೋಲಾರಮ್ಮ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸುತ್ತೇನೆ. ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ, ಸಿ.ಎನ್ನಾರ್ ರಾವ್, ಡಿವಿ ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇತ್ಯಾದಿ ಮಹಾಪುರುಷರಿಗೆ ಜನ್ಮ ನೀಡಿದ ಶ್ರೇಷ್ಠ ಭೂಮಿ ಇದುʼʼ ಎಂದು ಕನ್ನಡದಲ್ಲಿ ಮಾತನಾಡಿ ಬಳಿಕ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು.
ಪಕ್ಷದ ಸಂಘಟನೆಯನ್ನು ಸಶಕ್ತಗೊಳಿಸಲು ಶ್ರಮಿಸಿದ ದಿವಂಗತ ಸಚಿವ ಉಮೇಶ್ ಕತ್ತಿ ಹಾಗೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರಿಗೆ ಇರಾನಿ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಚರಣಗಳಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದು ನುಡಿದರು.
ಸ್ಮೃತಿ ಇರಾನಿ ಅವರಿಗೆ ದೊಡ್ಡಬಳ್ಳಾಪುರದ ಕೈಮಗ್ಗದ ನೆನಪಿಗಾಗಿ ಅವರಿಗೆ ಕೈಮಗ್ಗದ ಯಂತ್ರದ ಪ್ರತಿಕೃತಿಯನ್ನು ನೀಡಿ ಗೌರವಿಸಲಾಯಿತು. ಜತೆಗೆ ಅವರಿಗೆ ಕೈಮಗ್ಗದಲ್ಲಿ ನೇಯ್ದ ಸೀರೆಯನ್ನೂ ನೀಡಲಾಯಿತು.
ಇದನ್ನೂ ಓದಿ| BJP ಜನಸ್ಪಂದನ | ಇದು ಕೇವಲ ಸಂಕಲ್ಪದ ವೇದಿಕೆಯಲ್ಲ, ಸಂಗ್ರಾಮದ ರಣಕಣ: ರಾಜ್ಯ ಬಿಜೆಪಿಗೆ ಸ್ಫೂರ್ತಿ ತುಂಬಿದ ಇರಾನಿ