ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಮುಗಿದು ಒಂದು ತಿಂಗಳಾದರೂ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಇಲ್ಲದಂತಾಗಿದೆ. ಈ ಸಲ ವಿರೋಧ ಪಕ್ಷವಾಗಿರುವ ಬಿಜೆಪಿ (BJP Karnataka) ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಸದ್ಯ ಆಂತರಿಕ ಜಗಳ, ಪಕ್ಷದೊಳಗಿನ ಗೊಂದಲ, ಪರಸ್ಪರರ ಮೇಲಿನ ವಾಗ್ದಾಳಿಯಿಂದ ಅವ್ಯವಸ್ಥೆಗೊಂಡಿರುವ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಇಂದು (ಜುಲೈ 2) ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಆದರೆ ಇಂದು ಕೂಡ ಸಭೆ ನಡೆಯುತ್ತಿಲ್ಲ. ಈ ಶಾಸಕಾಂಗ ಪಕ್ಷ (BJP Legislative Party Meeting)ದ ಸಭೆಯನ್ನು ನಾಳೆ (ಜು.3)ಗೆ ಮುಂದೂಡಲಾಗಿದೆ. ಅದಕ್ಕೂ ಮುನ್ನ, ಇಂದು ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ದೆಹಲಿಗೆ ಹೊರಟಿದ್ದಾರೆ. ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಅವರು ಬಿಜೆಪಿ ವರಿಷ್ಠರ ಜತೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕ, ನೂತನ ರಾಜ್ಯಾಧ್ಯಕ್ಷ ಸೇರಿ ಇನ್ನೂ ಕೆಲವು ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡಬೇಕಾಗಿದೆ. ಆದರೆ ಈ ಹುದ್ದೆಗಳಿಗೆ ಹಲವು ನಾಯಕರು ಆಕಾಂಕ್ಷಿಗಳಾಗಿದ್ದು ಒಂದಷ್ಟು ಜನ ಈಗಾಗಲೇ ಬಾಯ್ಬಿಟ್ಟು, ತಾವು ವಿಪಕ್ಷ ನಾಯಕ/ರಾಜ್ಯಾಧ್ಯಕ್ಷನ ಹುದ್ದೆ ಆಕಾಂಕ್ಷಿಗಳು ಎಂಬುದನ್ನೂ ಹೇಳಿಕೊಂಡಿದ್ದಾರೆ. ಹೀಗೆ ಹಲವರಿಗೆ ಹುದ್ದೆಯ ಆಸೆ ಇದ್ದ ಕಾರಣ, ಈಗಾಗಲೇ ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿರುವ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಹುದ್ದೆಗಳಿಗೆ ನಾಯಕರನ್ನು ಆಯ್ಕೆ ಮಾಡುವುದೂ ಕಗ್ಗಂಟಾಗಿದೆ. ಇನ್ನು ಸದ್ಯ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಇದ್ದಾರೆ. ಹಿಂದೊಮ್ಮೆ ಅವರು ರಾಜೀನಾಮೆ ಕೊಟ್ಟಿದ್ದಾಗಿ ಸುದ್ದಿಯಾಗಿತ್ತು. ಆದರೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನಾನಿನ್ನೂ ರಾಜೀನಾಮೆ ಕೊಟ್ಟಿಲ್ಲ ಎಂದಿದ್ದಾರೆ.
ಇದನ್ನೂ ಓದಿ: BJP Karnataka : ಪ್ರತಿಪಕ್ಷ ನಾಯಕ, ರಾಜ್ಯ ಅಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಬೇಡಿ: ಬಿಜೆಪಿ ನಾಯಕರಿಗೆ ನಳಿನ್ ಕಟೀಲ್ ಸೂಚನೆ
ಬಿಜೆಪಿ ಈ ಸಲ ವಿಧಾನಸಭೆ ಚುನಾವಣೆಯಲ್ಲಿ ಸೋತಿದೆ. ಅದರ ಬೆನ್ನಲ್ಲೇ ಈಗ ಕೆಲವು ನಾಯಕರು ಸೋಲಿಗೆ ಕಾರಣವೇನು ಎಂಬ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸುತ್ತಿದ್ದಾರೆ. ಅವರಾಡುವ ಮಾತುಗಳು ಪಕ್ಷಕ್ಕೆ ಮುಜುಗರ ತಂದೊಡ್ಡಿದ ಪರಿಣಾಮ ಈಗಾಗಲೇ ಪಕ್ಷದ 11 ಪ್ರಮುಖರಿಗೆ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಹೀಗೆ ನೋಟಿಸ್ ಕೊಟ್ಟ ಮೇಲೆ ಕೂಡ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಿಜೆಪಿ ಕಲಹವನ್ನು ಕಾಂಗ್ರೆಸ್ನವರು ಆಡಿಕೊಳ್ಳುತ್ತಿದ್ದಾರೆ. ಗೆದ್ದಿರುವ ಕಾಂಗ್ರೆಸ್ ಸೋತ ಪಕ್ಷದ ಬಿಜೆಪಿಯೊಳಗಿನ ಕಲಹವನ್ನು ಇನ್ನಷ್ಟು ಹೆಚ್ಚಿಸುವಂಥ ಹೇಳಿಕೆಗಳನ್ನು ನೀಡುತ್ತಿದೆ.