Site icon Vistara News

Karnataka Election : ಯಾದಗಿರಿಗೆ ಬನ್ನಿ, 1 ಕೋಟಿ ರೂ. ಕೊಡ್ತೀನಿ ; ಸಿದ್ದರಾಮಯ್ಯಗೆ ಬಿಜೆಪಿ ಮುಖಂಡನ ಆಹ್ವಾನ

Chandrayya Nagarala

#image_title

ಯಾದಗಿರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದೆಲ್ಲೆಡೆ ಡಿಮ್ಯಾಂಡ್‌ (Karnataka Election) ಹೆಚ್ಚಾಗಿದೆ. ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದರೂ ರಾಜ್ಯದ ಬೇರೆ ಬೇರೆ ಕಡೆಯಿಂದ ಆಹ್ವಾನ ಬರುತ್ತಲೇ ಇದೆ. ಜಮೀನು ಮಾರಿ ಕೋಟಿ ಹಣ ಕೊಡುತ್ತೇವೆ ಎಂದು ಹಲವು ಅಭಿಮಾನಿಗಳು ಘೋಷಿಸಿದ್ದಾರೆ. ಈ ಬಾರಿ ಇನ್ನೂ ವಿಚಿತ್ರವಾದ ಆಮಂತ್ರಣವೊಂದು ಬಂದಿದೆ.

ಈ ಬಾರಿಯೂ ಬಂದಿದ್ದು ಕೋಟಿ ರೂ.ಗಳ ಕೊಡುಗೆ. ಆದರೆ ಕೊಟ್ಟಿದ್ದು ಕಾಂಗ್ರೆಸ್‌ನವರಲ್ಲ. ಬದಲಾಗಿ ಬಿಜೆಪಿ ಮುಖಂಡ!

ಸಿದ್ದರಾಮಯ್ಯನವರೇ ನೀವು ಯಾದಗಿರಿಯಿಂದ ಸ್ಪರ್ಧೆ ಮಾಡಬೇಕು. ನಿಮಗೆ ನಾನು ಒಂದು ಕೋಟಿ ರೂ. ಕೊಡುತ್ತೇನೆ ಎಂದು ಬಿಜೆಪಿಯ ಮುಖಂಡ ಚಂದ್ರಯ್ಯ ನಾಗರಾಳ ಆಹ್ವಾನ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಯ್ಯ ನಾಗರಾಳ ಅವರು, ೨೦ ಲಕ್ಷ ರೂ.ಗಳ ಐದು ಚೆಕ್‌ಗಳನ್ನು ಹಿಡಿದುಕೊಂಡೇ ಬಂದಿದ್ದರು.

ಚಂದ್ರಯ್ಯ ನಾಗರಾಳ ಅವರು ಕೆಲವು ದಿನಗಳ ಹಿಂದೆಯೇ ಇದನ್ನು ಘೋಷಣೆ ಮಾಡಿದ್ದರು. ಜಾಗ ಮಾರಾಟ ಮಾಡಿ ದೇಣಿಗೆ ಕೊಡುತ್ತೇನೆ ಎಂದಿದ್ದರು. ಇದೀಗ ಪತ್ರಿಕಾಗೋಷ್ಠಿಗೆ ಬರುವ ಹೊತ್ತಿಗೆ ತಮ್ಮ ಏಳು ಎಕರೆ ಭೂಮಿಯನ್ನು ಒಂದು ಕೋಟಿ ೫ ಲಕ್ಷ ರೂ.ಗಳಿಗೆ ಮಾರಾಟ ಮಾಡಿ, ಪ್ರಗತಿ ಕೃಷ್ಣಾ ಬ್ಯಾಂಕಿನ ಚೆಕ್ ತೆಗೆದುಕೊಂಡೇ ಬಂದಿದ್ದರು.

ʻʻನಾಳೆ ಸಿದ್ದರಾಮಯ್ಯ ಅವರು ಯಾದಗಿರಿ ಜಿಲ್ಲೆಗೆ ಬರುತ್ತಿದ್ದಾರೆ. ಅವರಿಗೆ ಭೇಟಿ ಆಗುತ್ತೇವೆ ಎಂದು ಹೇಳಿದ ಚಂದ್ರಯ್ಯ ಅವರು, ʻʻಸಿದ್ದರಾಮಯ್ಯ ಸ್ಪರ್ಧಿಸಿ ಅವರು ಒಂದು ಕೋಟಿ ರೂ. ಪಡೆಯಲಿ. ಸಿದ್ರಾಮಯ್ಯ ಅವರು ದಿನಾಂಕ ಹಾಕಿ ಚೆಕ್ ತೆಗೆದುಕೊಳ್ಳಲಿ. ಅವರು ಯಾದಗಿರಿಯಿಂದ ಸ್ಪರ್ಧಿಸಿದ್ರೆ ಮಾತ್ರ ಚೆಕ್ ಕೊಡ್ತೀವಿʼʼ ಎಂದು ಹೇಳಿದರು.

ಚಂದ್ರಯ್ಯ ಅವರು ಕೃಷ್ಣಾ ನದಿ ಬಳಿ ಇರುವ 14 ಎಕರೆ ಜಮೀನಿನಲ್ಲಿ 7 ಎಕರೆ ಜಮೀನನ್ನು ಅಡಮಾನ ಇಟ್ಟು ಒಂದು ಕೋಟಿ ರೂ. ಪಡೆದಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯ ಅವರು ತೆಗೆದುಕೊಳ್ಳದೆ ಇದ್ದರೆ ಭೂಮಿಯನ್ನು ಮರಳಿ ಪಡೆಯುವ ಒಪ್ಪಂದವೂ ಇದೆ ಎನ್ನಲಾಗಿದೆ.

ಬಿಜೆಪಿ ನಾಯಕನಿಗೇಕೆ ಸಿದ್ದು ಮೋಹ!?

ಬಿಜೆಪಿ ನಾಯಕರಾಗಿರುವ ಚಂದ್ರಯ್ಯ ನಾಗರಾಳ ಅವರಿಗೆ ಸಿದ್ದರಾಮಯ್ಯ ಅವರ ಮೇಲೆ ಯಾಕಿಷ್ಟು ಮೋಹ ಎಂದು ಕೇಳಿದರೆ ವಿಚಿತ್ರ ರಾಜಕಾರಣ ಬೆಳಕಿಗೆ ಬರುತ್ತಿದೆ. ಚಂದ್ರಯ್ಯ ಅವರು ಬಿಜೆಪಿಯಲ್ಲಿದ್ದರೂ ಸಿದ್ದರಾಮಯ್ಯನಂಥ ನಾಯಕರು ಬಂದರೆ ಕಾಂಗ್ರೆಸ್‌ಗೆ ಜಿಗಿಯುವ ಆಸೆಯನ್ನೂ ಹೊತ್ತಿದ್ದಾರೆ. ಸಿದ್ದರಾಮಯ್ಯ ಅವರು ಬಂದರೆ ಜಿಲ್ಲೆ ಅಭಿವೃದ್ಧಿಯಾದೀತು ಎನ್ನುವ ಆಸೆಯೂ ಇದೆಯಂತೆ. ಒಟ್ಟಾರೆಯಾಗಿ ಕುರುಬರು ಸಾಕಷ್ಟು ಸಂಖ್ಯೆಯಲ್ಲಿರುವ ಯಾದಗಿರಿಯ ಬಗ್ಗೆ ಸಿದ್ದರಾಮಯ್ಯ ಅವರ ಗಮನ ಸೆಳೆದು ತನ್ನನ್ನೂ ಗುರುತಿಸುವಂತೆ ಮಾಡಬೇಕು ಎನ್ನುವುದು ಅವರ ಪ್ರಯತ್ನ ಎಂಬಂತೆ ಕಾಣುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ : Karnataka Election : ಸಿದ್ದರಾಮಯ್ಯ ಹೊಸಪೇಟೆಯಿಂದ ಸ್ಪರ್ಧಿಸಿದರೆ ಹೊಲ ಮನೆ ಮಾರಿ ಕೋಟಿ ರೂ. ಕೊಡ್ತೇನೆ ಎಂದ ಅಭಿಮಾನಿ

Exit mobile version