ದಾವಣಗೆರೆ: ಬಿಜೆಪಿಯವರು ಬಡವರ ಬದುಕನ್ನು ಸರ್ವ ನಾಶ ಮಾಡಿದ್ದಾರೆ. ನಾವು ಸರಕಾರದ ಸಂಪತ್ತನ್ನು ಬಡವರಿಗೆ ಹಂಚಿ ಅವರಲ್ಲಿ ಸಶಕ್ತತೆಯನ್ನು ತುಂಬಿದರೆ ಬಿಜೆಪಿಯವರು ಕೋಟ್ಯಂತರ ಬಡವರ ಹಣವನ್ನು ದೋಚಿ ಹತ್ತು ಮಂದಿ ಶ್ರೀಮಂತರಿಗೆ ವರ್ಗಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ೭೫ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ʻʻಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರಕಾರ ಜನೋಪಯೋಗಿಯಾಗಿ ಹತ್ತಾರು ಕೆಲಸಗಳನ್ನು ಮಾಡಿದೆ. ಅನ್ನ ಭಾಗ್ಯ, ಆರೋಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಕಾರ್ಯಕ್ರಮ ಕೊಟ್ಟಿತ್ತು. ಇದೇ ವೇಳೆ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಾದ ಆಹಾರದ ಹಕ್ಕು, ಉದ್ಯೋಗ ಖಾತ್ರಿ, ಕೃಷಿಕರ ಸಾಲ ಮನ್ನಾ ಜನರ ಬದುಕನ್ನು ಹಸನು ಮಾಡಿದೆ. ಮಾಹಿತಿ ಹಕ್ಕು ನಾವು ಕೊಟ್ಟ ಅತಿ ದೊಡ್ಡ ಶಕ್ತಿ. ಆದರೆ, ಈಗಿನ ಸರಕಾರ ಏನು ಕೊಟ್ಟಿದೆ. ಬಿಜೆಪಿಯ ಅತಿದೊಡ್ಡ ಸಾಧನೆ ಎಂದರೆ ಸಾಧನೆ ನೋಟು ಅಮಾನ್ಯೀಕರಣʼʼ ಎಂದರು ರಾಹುಲ್ ಗಾಂಧಿ.
ʻʻನೋಟು ಅಮಾನ್ಯೀಕರಣದಿಂದ ಅವರು ಸಣ್ಣ ವ್ಯಾಪಾರಗಳನ್ನು, ಕೃಷಿಕರನ್ನು ನಾಶ ಮಾಡಿದರು. ಡಿಮಾನಿಟೈಸೇಷನ್ ಎನ್ನುವುದು ಕೋಟ್ಯಂತರ ಬಡವರಲ್ಲಿರುವ ಹಣವನ್ನು ಐದರಿಂದ ಹತ್ತು ಜನ ಶ್ರೀಮಂತರಿಗೆ ವರ್ಗಾಯಿಸಲು ಮಾಡಿದ ಹುನ್ನಾರʼʼ ಎಂದು ಆರೋಪಿಸಿದರು.
ʻʻಬಿಜೆಪಿ ಸರಕಾರ ಮೂರು ಕೃಷಿ ಕಾಯಿದೆಯನ್ನು ಜಾರಿಗೆ ತಂದಿತು. ನಿಜವೆಂದರೆ, ಕಾಂಗ್ರೆಸ್ ಸರಕಾರ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ರೈತರಿಗೆ ೭೦೦೦೦ ಕೋಟಿ ರೂ.ಯನ್ನು ನೀಡಿತ್ತು. ಕೇಂದ್ರ ಬಿಜೆಪಿ ಕೃಷಿ ಕಾಯಿದೆಗಳ ಮೂಲಕ ರೈತರನ್ನು ಕೊಳ್ಳೆ ಹೊಡೆಯಲು ಮುಂದಾಯಿತು. ಅವರ ಭೂಮಿಯನ್ನು ಶ್ರೀಮಂತರು, ಉದ್ಯಮಿಗಳು ವಶಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತುʼ ಎಂದು ಹೇಳಿದರು.
ʻʻಮನರೇಗಾ ಯೋಜನೆ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಯೋಚನೆ ಮಾಡಿ. ಅದು ಸಂಪತ್ತನ್ನು ಬಡವರಿಗೆ ಕೊಡುತ್ತದೆ. ಉದ್ಯೋಗದ ಮೂಲಕ ಹಣವನ್ನು ಕೊಡುತ್ತದೆ. ಕಾಂಗ್ರೆಸ್‌ನ ಪ್ರತಿಯೊಂದು ಕಾರ್ಯಕ್ರಮವೂ ಸರಕಾರದ ಹಣವನ್ನು ಜನರಿಗೆ ಹಂಚುತ್ತದೆ. ಆದರೆ, ಬಿಜೆಪಿ ಸರಕಾರ ಅದನ್ನು ಕೊಳ್ಳೆ ಹೊಡೆಯುತ್ತದೆ. ಕೆಲವೇ ಕೆಲವು ಉದ್ಯಮಿಗಳಿಗೆ ನೀಡುತ್ತದೆʼʼ ಎಂದರು ರಾಹುಲ್.