ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Service) ಕಲ್ಪಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಒಟ್ಟು ಐದು ಗ್ಯಾರಂಟಿಗಳಲ್ಲಿ ಈ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಹೀಗೆ ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ನೀಡುತ್ತಿರುವುದನ್ನು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸ್ವಾಗತಿಸಿದ್ದಾರೆ. ಆದರೆ ಒಂದು ವಿಷಯಕ್ಕೆ ಗರಂ ಆಗಿದ್ದಾರೆ.
ಚಿಕ್ಕಮಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ‘ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಕಲ್ಪಿಸಿದ್ದು ಖುಷಿಯಾಗಿದೆ. ಒಳ್ಳೆಯದಾಗಲಿ. ನಮ್ಮ ಹೆಣ್ಣುಮಕ್ಕಳು ಪ್ರವಾಸ ಮಾಡಬಹುದು. ಬೇರೆ ಬೇರೆ ಪ್ರದೇಶಗಳನ್ನು ನೋಡಬಹುದು’ ಎಂದು ಹೇಳಿದ್ದಾರೆ. ‘ಆದರೆ ಶೋಭಾನಿಗೂ ಬಸ್ ಪ್ರಯಾಣ ಫ್ರೀ ಎಂದು ಕಾಂಗ್ರೆಸ್ ದುರಹಂಕಾರದ ಮಾತುಗಳನ್ನಾಡಿದೆ. ಇದಕ್ಕೆ ನಾನು ಉತ್ತರ ಕೊಡುವುದಿಲ್ಲ. ಜನರೇ ಉತ್ತರ ಕೊಡುತ್ತಾರೆ’ ಎಂದೂ ಅವರು ಗರಂ ಆಗಿ ಹೇಳಿದ್ದಾರೆ.
ಇದನ್ನೂ ಓದಿ: ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ’ಶಕ್ತಿ’ ಟಿಕೆಟ್ ಹಂಚಲಿರುವ ಸಿಎಂ ಸಿದ್ದರಾಮಯ್ಯ
ಇನ್ನು ಕಾಂಗ್ರೆಸ್ ಸರ್ಕಾರ ಮಕ್ಕಳ ಪಠ್ಯ ಪರಿಷ್ಕರಣೆಗೆ ಮುಂದಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ‘ಪಠ್ಯ-ಪುಸ್ತಕ ಎನ್ನುವುದು ಪಕ್ಷದ ವಿಷಯವಾಗಲೀ, ಜಾತಿ-ಧರ್ಮದ ವಿಚಾರವಾಗಲೀ ಅಲ್ಲ. ಒಂದು ಸರ್ಕಾರ ಬಂದಾಗ ಒಂದು ಪಠ್ಯ, ಇನ್ನೊಂದು ಸರ್ಕಾರ ಬಂದಾಗ ಇನ್ನೊಂದು ಪಠ್ಯ ಮಾಡುವುದು ಖಂಡಿತ ಸರಿಯಲ್ಲ. ಕಾಂಗ್ರೆಸ್ ಪಠ್ಯ, ಬಿಜೆಪಿ ಪಠ್ಯ ಎನ್ನುವುದಕ್ಕಿಂತ, ನಮ್ಮ ಮಕ್ಕಳು ಏನು ಅಭ್ಯಾಸ ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಮಕ್ಕಳ ಅಭಿವೃದ್ಧಿ, ಅಭ್ಯುದಯಕ್ಕೆ, ಅವರು ದೇಶವನ್ನು ಅರಿಯುವುದಕ್ಕೆ ಅಗತ್ಯವಿರುವ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಬೇಕು. ನಮ್ಮ ದೇಶಭಕ್ತರ. ಸ್ವಾತಂತ್ರ್ಯ ಹೋರಾಟಗಾರರ, ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸುವ ಅನಿವಾರ್ಯತೆ ತುಂಬ ಇದೆ. ಸಂವಿಧಾನಾತ್ಮಕವಾಗಿ ನಾವು ಏನನ್ನು ಒಪ್ಪಿಕೊಂಡಿದ್ದೇವೆಯೋ, ಅದನ್ನೇ ಮಕ್ಕಳಿಗೂ ಕಲಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಲೋಚನೆ ಮಾಡಲಿ’ ಎಂದು ಹೇಳಿದರು.