ಬೆಳಗಾವಿ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದಾಗ ಇಡೀ ರಾಜ್ಯ ಸರಕಾರವೇ ಬೆಳಗಾವಿಯಲ್ಲಿತ್ತು. ಆದರೂ ಮುಖ್ಯಮಂತ್ರಿ, ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು ಘಟನಾ ಸ್ಥಳಕ್ಕೆ ಹೋಗಲಿಲ್ಲ ಜತೆಗೆ ಸಂತ್ರಸ್ತೆಯನ್ನು ಭೇಟಿ ಮಾಡಲಿಲ್ಲವೆಕ್ಕೆ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ (BJP sathyashodhana committee) ಆಕ್ಷೇಪ ವ್ಯಕ್ತಪಡಿಸಿತು.
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಶನಿವಾರ (ಡಿ.16) ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯರು ಬೆಳಗಾವಿಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು. ದೌರ್ಜನ್ಯ ನಡೆಸಿ ನಗ್ನಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆಯ ಮಾಹಿತಿ ಸಂಗ್ರಹಿಸಿತು.
ದೆಹಲಿಯಿಂದ ಸಂಸದರಾದ ಅಪರಾಜಿತಾ ಸಾರಂಗಿ, ಸುನಿತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಅವರೆಲ್ಲರೂ ಮೊದಲು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಆಗಮಿಸಿದರು.
ಬಳಿಕ ಪ್ರತಿಕ್ರಿಯಿಸಿದ ಸಂಸದೆ ಅಪರಾಜಿತಾ ಸಾರಂಗಿ ರಾಷ್ಟ್ರವೇ ತಲೆತಗ್ಗಿಸುವ ಪ್ರಕರಣವಿದು. ಹೀಗಿದ್ದಾಗ ಸರಕಾರದ ಪ್ರಮುಖರು ಸಂತ್ರಸ್ತೆಯನ್ನು ಯಾಕೆ ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಘಟನೆ ನಡೆದು 2 ಗಂಟೆ ಕಳೆದರೂ ಪೊಲೀಸರು ಸ್ಥಳಕ್ಕೆ ಹೋಗಿರಲಿಲ್ಲ. ಸ್ಥಳಕ್ಕೆ ಹೋಗಬೇಕಾದಷ್ಟು ಮಹತ್ವದ ಪ್ರಕರಣ ಎಂದು ಅನಿಸಲಿಲ್ಲವೇ? ದಲಿತ ಮಹಿಳೆಯ ಮೇಲಿನ ದೌರ್ಜನ್ಯ ಇದಾಗಿದ್ದರೂ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಲಿಲ್ಲವೇಕೆ ಎಂದು ಪ್ರಶ್ನೆ ಮಾಡಿದರು. ಮಹಿಳೆಯರ ಸುರಕ್ಷತೆಯು ರಾಜ್ಯ ಸರಕಾರದ ಮೊದಲ ಆದ್ಯತೆ ಆಗಬೇಕು. ಇಂತಹ ಘಟನೆ ನಡೆದಾಗ ರಾಜ್ಯ ಸರಕಾರವು ಸ್ಪಂದಿಸಬೇಕಿತ್ತು. ಆದರೆ ವಿಳಂಬ ಧೋರಣೆಯನ್ನೇ ತೋರಿದ್ದು ಸರಿಯಲ್ಲ ಎಂದರು
ಇದನ್ನೂ ಓದಿ: Ayodhya temple : ಅಯೋಧ್ಯೆ ರಾಮ ಮಂದಿರದಲ್ಲಿ ಕೇಳಿಸಲಿದೆ ಬೆಂಗಳೂರಿನ ಘಂಟಾ ನಾದ
ಬಳಿಕ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ವಸ್ತುಸ್ಥಿತಿ ತಿಳಿಯಲು ಇಲ್ಲಿ ಬಂದಿದ್ದೇವೆ. ಮಧ್ಯರಾತ್ರಿ ಅಸಹಾಯಕ ಮಹಿಳೆಯ ಮೇಲೆ ಆಕ್ರಮಣ ನಡೆಸಲಾಗಿದೆ. ಮಹಿಳೆಯನ್ನು ಪರೇಡ್ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ತಡವಾಗಿ ಪೊಲೀಸರು ಆಗಮಿಸಿದ್ದಾರೆ. ಠಾಣೆ ಬಹಳ ದೂರದಲ್ಲಿ ಇಲ್ಲ, ಕೇವಲ 10-15 ನಿಮಿಷದಲ್ಲಿ ಅಲ್ಲಿಗೆ ಧಾವಿಸಬೇಕಿತ್ತು. ಆದರೂ ಪೊಲೀಸರು ಸ್ಪಂದಿಸಿಲ್ಲ. ಇದು ನಿಜಕ್ಕೂ ನೋವಿನ ಸಂಗತಿ ಎಂದರು.
ಕಾಂಗ್ರೆಸ್ ಅವಧಿಯಲ್ಲಿ 43 ಸಾವಿರ ಕ್ರಿಮಿನಲ್ ಕೇಸ್ಗಳು ದಾಖಲು
ಈ ಘಟನೆ ಬಗ್ಗೆ ಠಾಣಾಧಿಕಾರಿ ಇಷ್ಟು ನಿರ್ಲಕ್ಷ್ಯ ವಹಿಸಲು ಹೇಗೆ ಸಾಧ್ಯ? ಎಂದು ಆಶಾ ಲಾಕ್ರಾ ಕಿಡಿಕಾರಿದರು. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಠಾಣಾಧಿಕಾರಿಯ ನಿರ್ಲಕ್ಷ್ಯವು ಕಾಂಗ್ರೆಸ್ ಸರಕಾರದ ಮಾನಸಿಕತೆಯ ಪ್ರತೀಕ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 43 ಸಾವಿರ ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದರು
ಜತೆಗೆ ದೆಹಲಿಯಿಂದ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಉಪ ನಿರ್ದೇಶಕ ಆರ್.ಕೆ ದುಬೆ, ಹಿರಿಯ ತನಿಖಾಧಿಕಾರಿ ಅಮೃತಾ ಸೋಲಂಕಿ, ವಿಶೇಷ ತನಿಖಾಧಿಕಾರಿ ರಾಧಾಕಾಂತ್ ತ್ರಿಪಾಟಿ ಕೂಡ ಭೇಟಿ ನೀಡಿದರು. ಬೆಳಗಾವಿ ಸಂಸದೆ ಮಂಗಲ್ ಅಂಗಡಿ, ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನಾಚೆ ಸಾಥ್ ನೀಡಿದರು.
ಮಹಿಳೆಯರನ್ನು ರಕ್ಷಣೆ ಮಾಡುವ ಕೆಲಸ ಆಗ್ಬೇಕು
ಇನ್ನೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಡೆಲ್ಲಿನಾ ಕೊಂಗಡುಪ್ ನೇತೃತ್ವದ ತಂಡವು ಬೆಳಗಾವಿಗೆ ಆಗಮಿಸಿತ್ತು. ಮಹಿಳಾ ಆಯೋಗಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿ ಹಲವು ಅಧಿಕಾರಿಗಳ ಸಾಥ್ ನೀಡಿದರು. ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು.
ಸಂತ್ರಸ್ತೆ ಭೇಟಿ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಕೊಂಗಡೂಪ್ ಪ್ರತಿಕ್ರಿಯಿಸಿ, ಮಹಿಳೆಯನ್ನು ಹೀಗೆ ವಿವಸ್ತ್ರಗೊಳಿಸಿರುವ ಘಟನೆ ನಿಜಕ್ಕೂ ದುರದೃಷ್ಟಕರ. ಇಡೀ ನಾಗರಿಕ ಸಮಾಜವು ತನ್ನ ಮನಸ್ಥಿತಿಯನ್ನು ಬದಲಿಸಬೇಕಿದೆ. ಮಹಿಳೆಯರನ್ನು ರಕ್ಷಿಸುವ ಕೆಲಸ ಸಮಾಜದಿಂದಲೇ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗವು ಇಂಥಹ ಘಟನೆಯನ್ನು ಎಂದಿಗೂ ಸಹಿಸುವುದಿಲ್ಲ. ಸದ್ಯ ಪೊಲೀಸರ ತನಿಖೆಯೂ ನಡೆಯುತ್ತಿದೆ. ಈ ಪ್ರಕರಣ ಸಂಬಂಧ ಆಯೋಗಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಬಾಲಾಪರಾಧಿ ಸೇರಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆ
ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮತ್ತೆ ಮೂವರನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಬಾಲಾಪರಾಧಿ ಸೇರಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಬಿಜೆಪಿ ರಾಷ್ಟ್ರೀಯ ಸತ್ಯಶೋಧನಾ ಸಮಿತಿ, ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ ಹಿನ್ನೆಲೆ ಬೆಳಗಾವಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ