Site icon Vistara News

ತುಂಬು ಗರ್ಭಿಣಿಯರು ಊಟ ಮಾಡಲು ಅಂಗನವಾಡಿಗೆ ಹೊಗಬೇಕು ಅಂದ್ರೆ ಹೇಗ್ರಿ? ಬಿಜೆಪಿ ಶಾಸಕಿಯರಿಂದಲೇ ತೀವ್ರ ತರಾಟೆ

annapoorna

ವಿಧಾನ ಪರಿಷತ್‌: ಗರ್ಭಿಣಿಯರಿಗೆ ಉತ್ತಮ ಪೋಷಕಾಂಶವುಳ್ಳ ಆಹಾರ ನೀಡುವ ಉದ್ದೇಶ ಹೊಂದಿರುವ ಮಾತೃಪೂರ್ಣ ಯೋಜನೆಗೆ ಸಂಬಂಧಿಸಿ ವಿಧಾನಪರಿಷತ್‌ನಲ್ಲಿ ಆಡಳಿತ ಪಕ್ಷದ ಶಾಸಕರೇ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಮಾತೃಪೂರ್ಣ ಯೋಜನೆಯ ಅವ್ಯವಸ್ಥೆ ಬಗ್ಗೆ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆ ಕೇಳಿದ್ದರು. ಆದರೆ, ಅವರ ಬೆಂಬಲಕ್ಕೆ ನಿಂತಿದ್ದು ಬಿಜೆಪಿ ಸದಸ್ಯರೇ. ಮಾತೃಪೂರ್ಣ ಯೋಜನೆಯಡಿಯಲ್ಲಿ ನೀಡುವ ಆಹಾರವನ್ನು ಪಡೆಯಲು ಗರ್ಭಿಣಿಯರು ಪ್ರತಿದಿನ ಅಂಗನವಾಡಿಗೆ ಬರಬೇಕು, ಇದು ಅವರಿಗೆ ಕಷ್ಟವಾಗುತ್ತಿದೆ. ಅವರಿಗೆ ಊಟ ಕೊಡುವ ಬದಲು ಪೋಷಕಾಂಶಯುಕ್ತ ಆಹಾರ ವಸ್ತುಗಳನ್ನು ಮನೆಗೇ ಒದಗಿಸಬಹುದು ಎಂಬ ಸಲಹೆಯ ರೂಪದಲ್ಲಿ ಚರ್ಚೆ ಇತ್ತು. ಈ ಹಂತದಲ್ಲಿ ಬಿಜೆಪಿ ಶಾಸಕಿಯರೇ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ʻʻಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಊಟವನ್ನು ಕೊಡಲಾಗ್ತಿದೆ. ಆದರೆ ಅವರು ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಹೇಳಲಾಗಿದೆ. ಇದು ಎಷ್ಟು ಸರಿ? ನಮ್ಮ ಸಂಪ್ರದಾಯದಲ್ಲಿ ಪಕ್ಕದ ಮನೆಯಲ್ಲಿ ಗರ್ಭಿಣಿ ಇದ್ದಾಳೆ ಅಂದ್ರೆ, ಒಳ್ಳೆಯ ಅಡುಗೆ ಮಾಡಿಕೊಂಡು ತೆಗೆದುಕೊಂಡು ಹೋಗಿ ಕೊಡಲಾಗುತ್ತದೆ. ಆದರೆ, ಅಂಗನವಾಡಿಗೆ ಬಂದು ಊಟ ಮಾಡಿಕೊಂಡು ಹೋಗಿ ಅನ್ನೋದು ಯಾವ ಪದ್ಧತಿʼʼ ಎಂದು ಪ್ರಶ್ನಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು, ತಮ್ಮದೇ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಭಾರತಿ ಶೆಟ್ಟಿ ಅವರಿಗೆ ತೇಜಸ್ವಿನಿ ಗೌಡ ದನಿಗೂಡಿಸಿದರು.

ʻʻಮೊದಲು ಕೋವಿಡ್ ಸಾಂಕ್ರಾಮಿಕ ಇದ್ದ ವೇಳೆ ಮನೆಮನೆಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿತ್ತು. ನಂತರ ಅಂಗನವಾಡಿ ಕೇಂದ್ರಗಳು ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಲಾರಂಭಿಸಿದ್ದರಿಂದ ಅಂಗನವಾಡಿ ಕೇಂದ್ರದಲ್ಲೇ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆʼʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಹಾಲಪ್ಪ ಆಚಾರ್‌ ಹೇಳಿದರು.

ಅಂತಿಮವಾಗಿ ಮಾತೃಪೂರ್ಣ ಯೋಜನೆಯ ಲೋಪದೋಷಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಹಾಲಪ್ಪ ಆಚಾರ್ ಭರವಸೆ ಕೊಟ್ಟರು.

ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ಇಲ್ಲ
ʻʻರಾಯಚೂರಿನ ಕೆಲವು ಭಾಗಗಳಲ್ಲಿ ಅಂತ್ಯಕ್ರಿಯೆ ನಡೆಸಲು ಸೂಕ್ತ ವ್ಯವಸ್ಥೆ ಗಳಿಲ್ಲ. ಮಾಧ್ಯಮದಲ್ಲಿ ಈ ಕುರಿತು ವರದಿ ಬರುತ್ತಿದೆ. ಸೂಕ್ತ ವ್ಯವಸ್ಥೆ ಮಾಡಬೇಕುʼʼ ಎಂದು ಶಾಸಕ ತಳವಾರ ಸಾಬಣ್ಣ ಆಗ್ರಹಿಸಿದರು. ಆರೋಗ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಉತ್ತರಿಸಿದರು.

ಇದನ್ನೂ ಓದಿ | ಸಿದ್ದರಾಮಯ್ಯ ಬೋಟ್‌ನಲ್ಲಿ ಹೋದಾಗ ಎಷ್ಟು ನೀರಿತ್ತು?: ಮೊಣಕಾಲುದ್ದ ನೀರಿಗೆ ಇದು ಬೇಕಿತ್ತ ಎಂದ ಸಿಎಂ

Exit mobile version