Site icon Vistara News

Black Magic : ಕೊಡಗಿನ ದಟ್ಟಾರಣ್ಯದ ಮಧ್ಯೆ ವಾಮಾಚಾರ; ಬೆಟ್ಟತ್ತೂರು ಗ್ರಾಮದಲ್ಲಿ ಕೋಳಿ ಬಲಿ, ಗ್ರಾಮಸ್ಥರಲ್ಲಿ ಆತಂಕ

black magic in kodagu

ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿ ಬಳಿಯ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ವಾಮಾಚಾರ (Black Magic) ನಡೆದಿದ್ದು, ಆಗುಂತಕರು ರಾತ್ರಿ ವೇಳೆ ಪೂಜೆ ಮಾಡಿ ಮೂರು ಕೋಳಿಗಳನ್ನು ಬಲಿ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ವಿಭಿನ್ನ ದಿಕ್ಕುಗಳಲ್ಲಿ ಪೂಜೆ ಮಾಡಿರುವ ಕಿಡಿಗೇಡಿಗಳು ಕೋಳಿ, ಪಾಯಸ, ತೆಂಗಿನಕಾಯಿ, ಮೊಸರು, ಅವಲಕ್ಕಿ ಹಾಗೂ ಹಿಟ್ಟಿನಲ್ಲಿ ಮಾಡಿರುವ ಉಂಡೆಯಂತಹ ಪದಾರ್ಥವನ್ನು ಪೂಜೆಗೆ ಬಳಸಲಾಗಿದೆ. ಇದು ಸ್ಥಳೀಯರಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ವಾಮಾಚಾರ ಮಾಡಲ್ಪಟ್ಟ ಸ್ಥಳವು ದಿವಂಗತ ಕೂಪದಿರ ಮುತ್ತು ಎಂಬುವವರ ಸ್ವಾಧೀನದಲ್ಲಿರುವ ಜಾಗ ಇದಾಗಿದೆ. ಬೆಟ್ಟತ್ತೂರು ಮುಖ್ಯ ಜಂಕ್ಷನ್ ಬಳಿಯಿಂದ ೫೦೦ ಮೀಟರ್ ಕಾಡಿನ ಮೇಲ್ಭಾಗದಲ್ಲಿ ವಾಮಾಚಾರ ನಡೆಸಲಾಗಿದೆ. ವಾಮಾಚಾರ ಮಾಡಿರುವವರು ಈ ಜಾಗದ ಕುರಿತು ತಿಳಿದಿರುವವರೇ ಮಾಡಿರಬೇಕು ಎಂದು ಶಂಕಿಸಲಾಗಿದೆ.

ವಾಮಾಚಾರ ನಡೆದ ಸ್ಥಳದ ಪಕ್ಕದ ಜಾಗದಲ್ಲಿ ವಾಸವಾಗಿರುವ ಹೊಸಮನೆ ಪ್ರವೀಣ್ ಅವರು ಪತ್ನಿ ಕವಿತಾ ಜತೆ ಮನೆಗೆ ಹೋಗುವಾಗ ಈ ಘಟನೆ ಬೆಳಕಿಗೆ ಬಂದಿದೆ. ಮೊದಲು ಮದ್ಯದ ಬಾಟಲಿ ಹಾಗೂ ಕೆಲವು ಬಾಳೆ ಎಲೆಯನ್ನು ಕಂಡಿದ್ದಾರೆ. ಯಾರೋ ಯುವಕರು ಮೋಜು ಮಸ್ತಿ ಮಾಡಿರಬೇಕೆಂದುಕೊಂಡ ದಂಪತಿ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ತೋಟಕ್ಕೆ ತೆರಳುವ ವೇಳೆ ಮತ್ತೊಂದು ದಿಕ್ಕಿನಲ್ಲಿ ಕೋಳಿಯೊಂದರ ತಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲೇ ಮೂರು ಕಡೆಗಳಲ್ಲಿ ಬಾಳೆ ಎಲೆಯಲ್ಲಿ ಎಡೆಯಿಟ್ಟು ಪೂಜೆ ಮಾಡಿರುವುದು ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಪೂಜೆ ಮಾಡಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ. ಮೂರು ಕಡೆಗಳನ್ನು ಗೊತ್ತು ಮಾಡಿ ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ ಎಲ್ಲ ಮೂರು ಬಾಳೆ ಎಲೆಯಲ್ಲಿ ಮಣ್ಣಿನ ಸಣ್ಣ ಸಣ್ಣ ಮೂರು ಮಡಿಕೆಗಳನ್ನು ಇಡಲಾಗಿದೆ. ಜತೆಗೆ ಅಕ್ಕಿಯಿಂದ ಮಾಡಿರುವ ಉಂಡೆಯಾಕಾರದ ಹಳದಿ ಬಣ್ಣದ ಕಡುಬು, ಅವಲಕ್ಕಿ, ಲೋಟದಲ್ಲಿ ಪಾಯಸ ಹಾಗೂ ಮದ್ಯವನ್ನು ಇಡಲಾಗಿದೆ. ಪೂಜೆ ಮಾಡಲಾಗಿರುವ ಸ್ಥಳದ ಎಲ್ಲ ವಿರುದ್ಧ ದಿಕ್ಕಿನಲ್ಲಿ ಕೋಳಿ ತಲೆ ಒಂದು ಕಡೆ ಹಾಗೂ ಅದರ ದೇಹವನ್ನು ಪೂಜಾ ಸ್ಥಳದ ಹಿಂಬದಿಗೆ ಎಸೆಯಲಾಗಿದೆ.

ವಾಮಾಚಾರದ ಪೂಜೆಗೆ ಒಟ್ಟು ಮೂರು ಹುಂಜ ಕೋಳಿಗಳನ್ನು ಬಲಿ ನೀಡಲಾಗಿದೆ. ವಾಮಾಚಾರ ಮಾಡಿರುವ ಸ್ಥಳ ಕೂಪದಿರ ಮುತ್ತು, ರವಿಕುಮಾರ್, ಸತೀಶ್ ಹಾಗೂ ಪಳಂಗಪ್ಪ ಎಂಬುವವರ ಸ್ವಾಧೀನದಲ್ಲಿದೆ. ಕೆಲವು ವರ್ಷಗಳಿಂದ ಜಾಗದ ಜಗಳ ಇದೆ. ಎಲ್ಲ ನಾಲ್ವರು ಜಾಗವನ್ನು ತಮ್ಮ ತಮ್ಮ ಹೆಸರುಗಳಿಗೆ ವರ್ಗಾವಣೆ ಮಾಡಲು ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆಗಳನ್ನು ನೀಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಜಾಗವನ್ನು ವಶಪಡಿಸಿಕೊಳ್ಳಲು ನಾಲ್ವರಲ್ಲಿ ಒಬ್ಬರು ಹೀಗೆ ಮಾಡಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ | Murder Case | ಸಹೋದರಿಗೆ ಪದೇಪದೆ ಕಿರುಕುಳ ನೀಡುತ್ತಿದ್ದವನನ್ನು ಛತ್ರಿಯ ರಾಡ್‌ನಿಂದ ಇರಿದು ಕೊಂದ ಯುವಕ

Exit mobile version