ಭಟ್ಕಳ: ಪರ್ಯಾಯ ವ್ಯವಸ್ಥೆ ಇಲ್ಲದ ದಾನವೆಂದರೆ ರಕ್ತದಾನ (Blood donation) ಮಾತ್ರ. ರಕ್ತದಾನಕ್ಕೆ ಒಂದು ಜೀವ ಉಳಿಸಬಲ್ಲ ಶಕ್ತಿ ಇದ್ದು, ಎಲ್ಲರೂ ರಕ್ತವನ್ನು ದಾನ ಮಾಡಿ ಸಾರ್ಥಕತೆ ಮೆರೆಯಿರಿ ಎಂದು ಕೊಂಕಣ ರೈಲ್ವೆ ವಿಭಾಗದ ಒಬಿಸಿ ರೈಲ್ವೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಮಹಾಜನ ಹೇಳಿದರು.
ಅಖಿಲ ಭಾರತೀಯ ಒಬಿಸಿ ರೈಲ್ವೆ ನೌಕರರ ಸಂಘ ಕೊಂಕಣ ರೈಲ್ವೆ, ತಾಲೂಕು ಆಸ್ಪತ್ರೆ ಭಟ್ಕಳ ಮತ್ತು ಉಡುಪಿ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಭಟ್ಕಳದ ಕೊಂಕಣ ರೈಲ್ವೆ ತರಬೇತಿ ಕೇಂದ್ರ ಆವರಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೊಂಕಣ ರೈಲ್ವೆ ನೌಕರರ ಸಂಘಟನೆ ಕಾರ್ಯದರ್ಶಿ ಉದಯ ಸಾರಂಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನ ಯಾವುದೇ ಅಂಗಾಂಗಗಳು ನಿಷ್ಕ್ರಿಯಗೊಂಡಾಗ ವೈದ್ಯರ ಸಲಹೆ ಮೇರೆಗೆ ಆ ಅಂಗವನ್ನು ಜೋಡಣೆ ಮಾಡುವಾಗ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿಯೊಂದು ಔಷಧವನ್ನು ಎಲ್ಲಿ ಬೇಕಾದರೂ ಕೊಂಡುಕೊಳ್ಳಬಹುದು. ಆದರೆ, ರಕ್ತ ಮಾತ್ರ ಎಲ್ಲಿಂದಲೋ ಪಡೆಯಲು ಸಾಧ್ಯವಿಲ್ಲ. ಅದು ಮಾನವನ ದೇಹದಲ್ಲಿ ಕಂಡುಕೊಳ್ಳಲು ಮಾತ್ರ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಅಂಗಾಂಗಗಳ ದಾನಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ತೀರಾ ಇದ್ದು, ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವುದರಿಂದ ಇನ್ನೊಂದು ವ್ಯಕ್ತಿಗೆ ಜೀವ ದಾನ ನೀಡಬಹುದಾಗಿದೆ. ರಕ್ತದಾನ, ನೇತ್ರ ದಾನದಂತೆ ಅಂಗಾಂಗ ದಾನಗಳ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ಮೂಡಿಸಿದರೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಮುಂದೆ ಬರುತ್ತಾರೆ ಎಂದರು.
ಇದನ್ನೂ ಓದಿ | KR Market Flyover : ಕೆ.ಆರ್. ಮಾರ್ಕೆಟ್ ಬಳಿ ದುಡ್ಡಿನ ಮಳೆಗರೆದ ಅರುಣ್ ಯಾರು?; ಇಲ್ಲಿದೆ ಅವನ ಫುಲ್ ಡಿಟೇಲ್ಸ್!
ಕೊಂಕಣ ರೈಲ್ವೆ ವಿಭಾಗದ ಅಧಿಕಾರಿ ಎಲ್.ಎಂ.ಹೆಗ್ಡೆ, ಉಡುಪಿ ಬ್ಲಡ್ ಬ್ಯಾಂಕ್ ವೈದ್ಯ ಡಾ. ವೀಣಾ ಕುಮಾರಿ, ಅಖಿಲ ಭಾರತೀಯ ಒಬಿಸಿ ರೈಲ್ವೆ ನೌಕರರಾದ ಸಂಘದ ಕಾರ್ಯಕಾರಿಣಿ ಅಧ್ಯಕ್ಷ ಮಂಜುನಾಥ ದೇವಾಡಿಗ, ಸಂಘಟನೆ ಕಾರ್ಯದರ್ಶಿ ಸದಾನಂದ ನಾಯ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಒಟ್ಟು 35 ಬಾಟಲ್ ರಕ್ತವನ್ನು ಸಂಗ್ರಹಿಸಲಾಯಿತು.