Site icon Vistara News

ಬಿಎಂಟಿಸಿ ಚಾಲಕ ಆತ್ಮಹತ್ಯೆ ಪ್ರಕರಣ; ಡಿಪೋ ಮ್ಯಾನೇಜರ್‌ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಶವವಿಟ್ಟು ಪ್ರತಿಭಟನೆ

ಬಿಎಂಟಿಸಿ ಚಾಲಕ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಬಿಎಂಟಿಸಿ ಚಾಲಕ ಹೊಳೆಬಸಪ್ಪ ಸಾವಿಗೆ ಡಿಪೋ ಮ್ಯಾನೇಜರ್‌ ಮಲ್ಲಿಕಾರ್ಜುನಯ್ಯ ನೀಡಿದ ಕಿರುಕುಳವೇ ಕಾರಣ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂದು ಒತ್ತಾಯಿಸಿ ಮೃತರ ಕುಟುಂಬಸ್ಥರು, ನೌಕರರು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು, ಆರ್‌ಆರ್ ನಗರ ಬಿಎಂಟಿಸಿ ಡಿಪೋ ಎದುರು ಹೊಳೆಬಸಪ್ಪ ಶವವಿಟ್ಟು ಮಂಗಳವಾರ ಪ್ರತಿಭಟನೆ ಮಾಡಿದರು.

ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಅವರನ್ನು ಇಷ್ಟರೊಳಗೇ ಪೊಲೀಸರು ವಶಕ್ಕೆ ಪಡೆಯಬೇಕಿತ್ತು. ಅಲ್ಲದೆ, ಮೇಲಧಿಕಾರಿಗಳು ಅವರನ್ನು ಅಮಾನತು ಮಾಡಬೇಕಿತ್ತು. ಆದರೆ, ಅವರಿಗೆ ಬೇರೆ ಡಿಪೋದಲ್ಲಿ ಡ್ಯೂಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದ ಮೃತ ಹೊಳೆಬಸಪ್ಪ ಹೆಂಡತಿ ಸೀಮಾ, ಇಬ್ಬರು ಮಕ್ಕಳು, ನೂರಾರು ನೌಕರರು ಘೋಷಣೆ ಕೂಗಿ, ಸಾರಿಗೆ ಸಚಿವ ಶ್ರೀರಾಮುಲು, ಬಿಎಂಟಿಸಿ ಎಂಡಿ ಜಿ. ಸತ್ಯವತಿ ಹಾಗೂ ಅಧ್ಯಕ್ಷ ನಂದೀಶ್ ರೆಡ್ಡಿ ಕೂಡಲೇ ಸ್ಥಳಕ್ಕೆ ಬಂದು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | ಚಾಲಕನ ನಿಯಂತ್ರಣ ತಪ್ಪಿ ತುಂಗಭದ್ರಾ ಕಾಲುವೆಗೆ ಉರುಳಿದ ಕಾರು, ಇಬ್ಬರು ಮೃತ್ಯು

ಪ್ರತಿಭಟನಾ ಸ್ಥಳಕ್ಕೆ ಬಂದ ಆರ್‌ಆರ್ ನಗರ ಪೊಲೀಸರು ಆಗಮಿಸಿ ಪ್ರತಿಭಟನೆ ಕೈ ಬಿಟ್ಟು, ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಹೋರಾಟ ಮುಂದುವರಿಸಿದರು.

ಆರ್‌ಆರ್‌ ನಗರ ಡಿಪೋ ಮ್ಯಾನೇಜರ್‌ ವಿರುದ್ಧ ಎಫ್‌ಐಆರ್
ಬಿಎಂಟಿಸಿ ನೌಕರ ಹೊಳೆಬಸಪ್ಪ ಆರ್‌ಆರ್‌ ನಗರ ಡಿಪೋ ಆವರಣದಲ್ಲಿ ಸಮವಸ್ತ್ರದಲ್ಲೇ ಸೋಮವಾರ ನೇಣಿಗೆ ಶರಣಾಗಿದ್ದರು. ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ನೊಂದು ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಡೆತ್‌ ನೋಟ್‌ನಲ್ಲಿ ಡಿಪೋ ಮ್ಯಾನೇಜರ್‌ ಕಿರುಕುಳ ನೀಡಿರುವ ಬಗ್ಗೆ ಉಲ್ಲೇಖವಾಗಿದೆ. ಹೀಗಾಗಿ ಡಿಪೋ ಮ್ಯಾನೇಜರ್‌ ಮಲ್ಲಿಕಾರ್ಜುನಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ನಿ ಸೀಮಾ ನೀಡಿದ ದೂರಿನ ಮೇರೆಗೆ ಆರ್‌ಆರ್‌ ನಗರ ಠಾಣೆಯಲ್ಲಿ ಮಲ್ಲಿಕಾರ್ಜುನಯ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಪಟ್ಟಭದ್ರರಿಂದ ಪಿತೂರಿ: 20ಕ್ಕೂ ಹೆಚ್ಚು ಮಠಾಧೀಶರ ಬೆಂಬಲ

Exit mobile version