ಬೆಂಗಳೂರು: ಬಿಎಂಟಿಸಿ ಬಸ್ (Bmtc bus) ಅಗ್ನಿಗೆ (Bmtc Fire tragedy) ಆಹುತಿಯಾದ ಪರಿಣಾಮ ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕರೊಬ್ಬರು ಸಜೀವ ದಹನಗೊಂಡ ಘಟನೆ ಲಿಂಗಧೀರನಹಳ್ಳಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿತ್ತು. ನಗರದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಮಾಮೂಲಿ ಆಗಿದೆ. ಈ ಹಿಂದೆಯೂ ಚಲಿಸುತ್ತಿದ್ದ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದಿದೆ.
ಬೆಂಕಿ ಅವಘಡ ಇದು ಮೊದಲೇನಲ್ಲ, ಎಲ್ಲೆಲ್ಲಿ ನಡೆದಿತ್ತು?
1) ಜನವರಿ 21, 2022ರಂದು ಹೊಸಕೆರೆಹಳ್ಳಿ ಬಳಿ ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.
2) ಫೆಬ್ರವರಿ 2, 2022 ರಂದು ಜಯನಗರದ ಸೌತ್ ಎಂಡ್ ಸರ್ಕಲ್‌ನ ನಂದ ಟಾಕೀಸ್ ಸಮೀಪ ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಮೆಜೆಸ್ಟಿಕ್‌ನಿಂದ ಬನಶಂಕರಿ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿತ್ತು.
3) ಜನವರಿ 21, 2022 ಚಾಮರಾಜಪೇಟೆಯ ಮಕ್ಕಳಕೂಟದ ಬಳಿ ಬಿಎಂಟಿಸಿ ಬಸ್ ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದಿತ್ತು. ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದ ಹಾಗೇ ಎಲ್ಲರೂ ಬಸ್‌ನಿಂದ ಇಳಿದು ಬಚಾವ್ ಆಗಿದ್ದರು.
4) ಏಪ್ರಿಲ್ 9, 2022 ರಂದು ಶೇಷಾದ್ರಿ ರಸ್ತೆಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕಿಡಿ ಬಳಿಕ ಪೂರ್ತಿ ಸುಟ್ಟು ಕರಕಲಾಗಿತ್ತು.
5) ಜನವರಿ 30, 2015ರಂದು ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಿಎಂಟಿಸಿ ಲಗ್ಗೆರೆ ಮೇಲ್ಸೇತುವೆ ರಿಂಗ್ ರಸ್ತೆ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಎಂಜಿನ್ ಸೀಟಿನಲ್ಲಿ ಬೆಂಕಿ ಬರುವುದು ತಿಳಿಯುತ್ತಿದ್ದಂತೆ ಚಾಲಕ ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನೆಲ್ಲ ಕೆಳಗೆ ಇಳಿಸಿದ್ದರು. ಬಳಿಕ ಕೆಲವೇ ಸೆಕೆಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಬೂದಿಯಾಗಿತ್ತು.
6) ಚಲಿಸುತ್ತಿದ್ದ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಇತ್ತೀಚೆಗೆ ಚಿಕ್ಕೋಡಿಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಬಳಿ ಎನ್‌ಎಚ್ 4ರಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ (Fire Accident) ಕಾಣಿಸಿಕೊಂಡ ಘಟನೆ ನಡೆದಿತ್ತು. ಸಂಕೇಶ್ವರದಿಂದ ಬೆಳಗಾವಿಗೆ ಹೊರಟಿದ್ದ ಸರ್ಕಾರಿ ಬಸ್‌ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ತನ್ನ ಸಮಯ ಪ್ರಜ್ಞೆ ಮೆರೆದಿದ್ದು, ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಇದರಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.
2014ರಲ್ಲಿ ಬೆಂಗಳೂರಿನ ವಿವಿಧೆಡೆ ಬಿಎಂಟಿಸಿ ಬಸ್ ಮಾತ್ರವಲ್ಲದೆ ಖಾಸಗಿ ಹಾಗೂ ವೋಲ್ವೋ ಬಸ್ ಸೇರಿ 14 ಬಸ್‌ಗಳು ಬೆಂಕಿಗೆ ಆಹುತಿಯಾಗಿದೆ. 2015ರಲ್ಲಿ 3ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಹೋಗಿವೆ. 2022ರಲ್ಲಿ 5ಕ್ಕೂ ಹೆಚ್ಚು ಬಿಎಂಟಿಸಿ ಬಸ್ ಬೆಂಕಿ ಕಾಣಿಸಿಕೊಂಡಿದೆ.
ಸಿಬ್ಬಂದಿ-ಪ್ರಯಾಣಿಕರ ಜೀವದ ಜತೆ ಚೆಲ್ಲಾಟ
ಬಿಎಂಟಿಸಿ ಬಸ್‌ವೊಂದು ಅಗ್ನಿ ಆಹುತಿಯಾಗಿದ್ದು, ಕಂಡಕ್ಟರ್‌ವೊಬ್ಬರು ಸಜೀವ ದಹನವಾಗಿದ್ದಾರೆ. ಈ ಘಟನೆಯಿಂದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಸಿಬ್ಬಂದಿ, ಪ್ರಯಾಣಿಕರ ಜೀವದ ಜತೆ ಬಿಎಂಟಿಸಿ ಚೆಲ್ಲಾಟವಾಡುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.
ಕಾರಣ ಬಹುತೇಕ ಬಿಎಂಟಿಸಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಅಗ್ನಿ ನಿರೋಧಕ ಸಿಲಿಂಡರ್ ನಿರ್ವಹಣೆಯೂ ಅಷ್ಟಕಷ್ಟೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಹಲವು ಬಾರಿ ಅಗ್ನಿ ಅವಘಡ ನಡೆದರೂ ಬಿಎಂಟಿಸಿ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಲ್ಲಿ ಔಷಧಗಳು ಇಲ್ಲ, ಸಿಲಿಂಡರ್ ಖಾಲಿ ಖಾಲಿ ಆಗಿರುವ ದೃಶ್ಯ ವಿಸ್ತಾರ ಕ್ಯಾಮೆರಾದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: Fire tragedy: ಬಿಎಂಟಿಸಿ ಬಸ್ಸಿಗೆ ಬೆಂಕಿ, ಕಂಡಕ್ಟರ್ ಸಜೀವ ದಹನ
ಅವಘಡ ಸಂಬಂಧ ಪ್ರತಿಕ್ರಿಯಿಸಿರುವ ಬಿಎಂಟಿಸಿ ಆಂತರಿಕ ಭದ್ರತೆಯ ಹಿರಿಯ ಅಧಿಕಾರಿ ರಾಧಿಕಾ, 2017ರ ಮಾಡೆಲ್‌ನ ಬಸ್ ಇದಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ಫೆಬ್ರವರಿಯಲ್ಲಿ ಎಲ್ಲ ಬಸ್‌ಗಳ ಪರೀಕ್ಷೆ ಮಾಡಲಾಗಿದೆ. ಹೀಗಿದ್ದರೂ ಈ ಮಾಡೆಲ್‌ಗಳಲ್ಲಿ ಸಮಸ್ಯೆ ಇದೆಯಾ ಎಂಬುದು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್.ಎಸ್.ಎಲ್ ಟೀಂ ಕರೆಸಿ ತನಿಖೆ ಮುಂದುವರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ