ಬೆಂಗಳೂರು: ಬಿಎಂಟಿಸಿಯಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ಭಾರಿ ಅಕ್ರಮದ ಆರೋಪವೊಂದು (Bmtc Officers fraud) ಕೇಳಿ ಬಂದಿದೆ. ಕಂಡಕ್ಟರ್-ಡ್ರೈವರ್ ತಪ್ಪು ಮಾಡಿದರೆ ಸಸ್ಪೆಂಡ್ ಮಾಡುವ ಮೇಲಧಿಕಾರಿಗಳು, ಈಗ ಅಧಿಕಾರಿಗಳು ತಪ್ಪು ಮಾಡಿರುವುದು ಬೆಳಕಿಗೆ ಬಂದರೂ ನೋಟಿಸ್ ನೀಡಿ ಸುಮ್ಮನಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ನಿಗಮದಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ವಿಡಿಯೊ ಚಿತ್ರೀಕರಣ ಮಾಡುವುದು ಕಡ್ಡಾಯವಾಗಿದೆ. ಆದರೆ, ಅಧಿಕಾರಿಗಳು ಗುಜರಿ ವಸ್ತುಗಳ ತೂಕದ ವೇಳೆ ಅರ್ಧ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ತೂಕದಲ್ಲಿ ಗೋಲ್ಮಾಲ್ ಮಾಡಿರುವ ಭದ್ರತಾ ಜಾಗೃತ ದಳ ವಿಭಾಗದ ಭೂತರಾಜು, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಪಾಪಣ್ಣ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದೆ.
ಹಳೆ ಕಬ್ಬಿಣ, ತಾಮ್ರ, ಯರಕ ಮಾರಾಟದ ವೇಳೆ ತೂಕ ಮಾಡುವಾಗ ಈ ಅಧಿಕಾರಿಗಳು ವಿಡಿಯೊ ಚಿತ್ರೀಕರಿಸದೇ ತೂಕದ ಲೆಕ್ಕವನ್ನು ಯಾಮಾರಿಸಿದ್ದಾರೆ. ಅರ್ಧ ವಿಡಿಯೊ ಚಿತ್ರೀಕರಣ ಮಾಡಿ ನಿಗಮಕ್ಕೆ 32,89,052 ರೂ. ಆದಾಯ ತೋರಿಸಲಾಗಿದ್ದು, ನಂತರ ಚಿತ್ರೀಕರಣವನ್ನು ಆಫ್ ಮಾಡಲಾಗಿದೆ. ಬಳಿಕ ಬಿಎಂಟಿಸಿಗೆ 13,89,785 ರೂ. ಆದಾಯದ ಲೆಕ್ಕ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಾಕ್ಷಿ ಸಮೇತ ಅಧಿಕಾರಿಗಳ ಮೇಲೆ ದೂರು ದಾಖಲಾದರೂ, ಕೇವಲ ನೋಟಿಸ್ ನೀಡಿ ಬಿಎಂಟಿಸಿ ಸುಮ್ಮನಾಗಿದೆ.
ಇದನ್ನೂ ಓದಿ: ಮಲ್ಲೇಶ್ವರದಲ್ಲಿ ರಾತ್ರಿ ವೇಳೆ ಮಚ್ಚು ಹಿಡಿದು ಓಡಾಟ; ಸಿಕ್ಕ ಸಿಕ್ಕ ಕಾರುಗಳ ಮೇಲೆ ದಾಳಿ ನಡೆಸಿದ ಅಪರಿಚಿತ
ಹೊರಗುತ್ತಿಗೆ ನೌಕರರ ವಿಚಾರದಲ್ಲೂ ಗೋಲ್ಮಾಲ್
ಹೊರಗುತ್ತಿಗೆಗೆ ಬಂದ ಸಿಬ್ಬಂದಿ ಸಂಖ್ಯೆ ನಮೂದು ಮಾಡುವುದರಲ್ಲೂ ಅಕ್ರಮ ಎಸಗಲಾಗಿದೆ. ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಯ ಲೆಕ್ಕ ತಪ್ಪು ತೋರಿಸಿ ಲಕ್ಷ ಲಕ್ಷ ರೂಪಾಯಿ ಪೀಕಿದ್ದಾರೆ. ಬಿಎಂಟಿಸಿ ಸಿಬ್ಬಂದಿಯಾದ ಭೂತರಾಜು, ಪಾಪಣ್ಣ, ಬಸವರಾಜಪ್ಪ, ಸೌಮ್ಯ, ಉಮಾ, ಮಂಜುನಾಥ್, ಕಿಶೋರ್ ಕುಮಾರ್ ಎಂಬುವವರಿಗೆ ನೋಟಿಸ್ ನೀಡಿದ್ದಾರೆ. ಈ ಅಕ್ರಮದ ಬಗ್ಗೆ ವಿವರಣೆ ಕೊಡಲು ಬಿಎಂಟಿಸಿ ಸೂಚನೆ ನೀಡಿದೆ.