ಬೆಂಗಳೂರು: ಬಿಜೆಪಿಯಲ್ಲಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಮತ್ತು ಬಿಎಸ್‌ವೈ ಅವರದೇ ಹೇಳಿಕೆಯನ್ನು ಬಳಸಿಕೊಂಡು ಕಮಲ ಪಕ್ಷಕ್ಕೆ ಬಾಣ ಬಿಟ್ಟಿದೆ ಕಾಂಗ್ರೆಸ್. ಕೊಪ್ಪಳದಲ್ಲಿ ಗುರುವಾರ ನಡೆದ ಬಿಜೆಪಿಯ ಬೃಹತ್ ಕಾರ್ಯಕ್ರಮಕ್ಕೆ ಸಂಬಂಧಿಸಿ ಬುಧವಾರ ಸಂಜೆಯವರೆಗೂ ಯಡಿಯೂರಪ್ಪ ಅವರಿಗೆ ಆಮಂತ್ರಣ ನೀಡಲಾಗಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಅವಸರದಿಂದ ಆಮಂತ್ರಣ ನೀಡಲಾಯಿತು. ಗುರುವಾರ ಬೆಳಗ್ಗೆ ಯಡಿಯೂರಪ್ಪ ಅವರು ಕೊಪ್ಪಳಕ್ಕೆ ಹೋಗಿದ್ದಾರೆ. ಅಲ್ಲಿ ಅವರನ್ನು ಹಾಡಿ ಹೊಗಳಲಾಗಿದೆ. ಇದು ಸಿಟ್ಟುಗೊಂಡಿರುವ ಅವರನ್ನು ಶಾಂತಗೊಳಿಸಲು ಮಾಡಿರುವ ಪ್ರಯತ್ನ ಎಂದು ಮೇಲ್ನೋಟಕ್ಕೆ ಕಾಣಿಸಿದೆ. ಇದೆಲ್ಲದರ ಆಧಾರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯೊಳಗಿನ (Karnataka Election) ಅಂತಃಕಲಹವನ್ನು ಟ್ವೀಟ್‌ಗಳ ಮೂಲಕ ಪ್ರಶ್ನಿಸಿದೆ. ಅದಕ್ಕೆ ಬಿಎಸ್‌ವೈ ಮುಕ್ತ ಬಿಜೆಪಿ ಎಂದು ಹ್ಯಾಷ್ ಟ್ಯಾಗ್ ಹಾಕಿದೆ.
ಕಾಂಗ್ರೆಸ್ ಮಾಡಿದ ಟ್ವೀಟ್‌ಗಳಿವು
ಆಡ್ವಾಣಿ ಅವರನ್ನೇ ಬಿಟ್ಟಿಲ್ಲ, ಬಿಎಸ್‌ವೈ ಅವರನ್ನು ಬಿಡುವುದೇ?
ಅನೈತಿಕ ಮಾರ್ಗದಲ್ಲಿಯಾದರೂ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ್ದು ಬಿ.ಎಸ್. ಯಡಿಯೂರಪ್ಪ ಅವರು ಅವರು, ಆದರೆ ಅದೇ BSYಗೆ ಬಿಜೆಪಿ ಸಲ್ಲಿಸಿದ ಕೊಡುಗೆ – ಜೈಲು, ಕಣ್ಣೀರು, ದ್ರೋಹ! ಅಡ್ವಾಣಿಯಂತಹ ನಾಯಕರನ್ನೇ ಮುಗಿಸಿದ ಬಿಜೆಪಿ BSY ಅವರನ್ನು ಬಿಡುವುದೇ? ಹತ್ತಿದ ಏಣಿಯನ್ನು ಒಡೆಯುವುದು, ತಿಂದ ತಟ್ಟೆಗೆ ಮಣ್ಣು ಹಾಕುವುದು ಬಿಜೆಪಿಯ ಹುಟ್ಟುಗುಣ.
ಗುರುವಿಗೇ ತಿರುಮಂತ್ರ ಹಾಕುತ್ತಿದ್ದಾರೆ ಬೊಮ್ಮಾಯಿ
ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ ನಾಯಕನನ್ನೇ ಮುಂದೆ ಬಿಡುವುದು ಸಂಘದ ಕುತ್ಸಿತ ಕಾರ್ಯತಂತ್ರ. ಅದರಂತೆಯೇ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಟಾಸ್ಕ್‌ನ್ನು RSS ಬಿ.ಎಸ್. ಬೊಮ್ಮಾಯಿ ಅವರ ಹೆಗಲಿಗೇರಿಸಿದೆ. ಕುರ್ಚಿ ಉಳಿಸಿಕೊಳ್ಳಲು ಬೊಮ್ಮಾಯಿಯವರು ಗುರುವಿಗೇ ತಿರುಮಂತ್ರ ಹಾಕುತ್ತಿದ್ದಾರೆ.
ಮೀರ್ ಸಾದಿಕ್ ಪಾತ್ರಧಾರಿ ಬಸವರಾಜ ಬೊಮ್ಮಾಯಿ
ಬಿ.ಎಸ್. ಯಡಿಯೂರಪ್ಪ ಅವರ ಕೃಪೆಯಿಂದ ಸಿಎಂ ಹುದ್ದೆಗೇರಿದ ಬಸವರಾಜ ಬೊಮ್ಮಾಯಿ ಅವರು ಈಗ ಗುರುವನ್ನೇ ಮೂಲೆಗೆ ತಳ್ಳಲು “ಮೀರ್ ಸಾದಿಕ್” ಪಾತ್ರ ನಿರ್ವಹಿಸುತ್ತಿದ್ದಾರೆ! ಸಿಎಂ ಸ್ಥಾನ ಗಟ್ಟಿಯಾಗುವವರೆಗೆ ವಾರಕ್ಕೊಮ್ಮೆ ದವಳಗಿರಿಗೆ ಹೋಗಿಬರುತ್ತಿದ್ದವರು ಈಗ ಕೇಶವ ಕೃಪಾಗೆ ಹೋಗ್ತಿದಾರೆ. ಬಿ.ಎಲ್ ಸಂತೋಷ್ ಅವರ ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನಕ್ಕೆ ಬೊಮ್ಮಾಯಿಯವರೂ ಕೈಜೋಡಿಸಿದ್ದಾರೆ.
ಸಿರಿವಂತರ ಪಾಲಿಗೆ ರಾಬಿನ್ ಹುಡ್ ಮೋದಿ!
ಈ ನಡುವೆ, ಮೋದಿ ಅವರನ್ನೂ ಟಾರ್ಗೆಟ್ ಮಾಡಿದೆ ಕರ್ನಾಟಕ ಕಾಂಗ್ರೆಸ್. ಮೋದಿ ಅವರನ್ನು ಸಿರಿವಂತರ ಪಾಲಿನ ರಾಬಿನ್‌ಹುಡ್ ಎಂದಿದೆ.
ಕಳೆದ 5 ವರ್ಷದಲ್ಲಿ ರೈಟಾಫ್ ಮಾಡಿದ 10 ಲಕ್ಷ ಕೋಟಿ ಜನ ಸಾಮಾನ್ಯರನ್ನು ಸುಲಿಗೆ ಮಾಡಿದ ಹಣ ಅಲ್ಲವೇ ಕರ್ನಾಟಕ ಬಿಜೆಪಿ? ಮೋದಿ ಆಳ್ವಿಕೆಯಲ್ಲಿ ಉದ್ಯಮಿಗಳು ಸಾಲ ಮರುಪಾವತಿ ಮಾಡದಷ್ಟು ದಿವಾಳಿಯಾದರೆ? ಅಥವಾ ಇದು ಯೋಜಿತ ಕಾನೂನಾತ್ಮಕ ಹಗರಣವೇ? ಮೋದಿಯವರು ಜನರನ್ನು ಸುಲಿದು, ಉದ್ಯಮಿಗಳ ಹೊಟ್ಟೆ ತುಂಬಿಸುವ “ಸಿರಿವಂತರ ರಾಬಿನ್ ಹುಡ್” ಆಗಿರುವರೆ?- ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಳೆದ 5 ವರ್ಷದಲ್ಲಿ ಸುಮಾರು 10 ಲಕ್ಷ ಕೋಟಿ ಉದ್ಯಮಿಗಳ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. 10 ಲಕ್ಷ ಕೋಟಿಗೆ ಎಳ್ಳುನೀರು ಬಿಟ್ಟಿದ್ದರೂ ವಸೂಲಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂಬ ಕೇಂದ್ರ ಸರ್ಕಾರದ ಸುಳ್ಳಿನ ಸಮರ್ಥನೆ ಬೇರೆ. ಜನಸಾಮಾನ್ಯರ EMI ಬಡ್ಡಿ ಏರಿಸುವ ಬಿಜೆಪಿ ಸರ್ಕಾರಕ್ಕೆ ಉದ್ಯಮಿಗಳ ಸಾಲ ವಸೂಲಿಗೆ ಮನಸು ಮಾಡುವುದಿಲ್ಲವೇಕೆ? ಎಂದು ಅದು ಕೇಳಿದೆ.
ಇದನ್ನೂ ಓದಿ | Karnataka Election |ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನನ್ನನ್ನು ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ