-ಶ್ರೇಯಾಂಕ ಎಸ್ ರಾನಡೆ
ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ, ಹೆಚ್ಚಿನ ಪ್ರಮಾಣದ ತೆರಿಗೆ ವಸೂಲಾಗಿದೆ. ಕೋವಿಡ್ ಮೂರನೇ ಅಲೆ ಭೀತಿ ಕಡಿಮೆಯಾಗಿದೆ, ಚುನಾವಣೆ ಹತ್ತಿರದಲ್ಲಿದೆ. ಆರ್ಥಿಕ ಹಿಂಜರಿತದ ಸಮಯದಲ್ಲಿದ್ದರೂ ಕಳೆದ ಬಾರಿ ಹೆಚ್ಚು ಸಾಲ ಮಾಡದ ಕಾರಣ (Off budget borrowing) ರಾಜಸ್ವ ನಿಧಿಯ ಬಳಕೆಯಲ್ಲಿ ಬೊಮ್ಮಾಯಿ ಸರಕಾರಕ್ಕೆ ಹೆಚ್ಚಿನ ಅವಕಾಶವಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಚುನಾವಣೆಗೆ ಘೋಷಿಸುತ್ತಿರುವ ಉಚಿತ ಯೋಜನೆಗಳು ಈ ಸರಕಾರದ ಮೇಲೂ ಪರೋಕ್ಷ ಒತ್ತಡವನ್ನು ಹೇರುತ್ತಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್ (Karnataka Budget 2023 ) ಅನ್ನು ನೋಡಬೇಕಿದೆ.
ಇದು ೨೦೨೩ರ ವಿಧಾನಸಭಾ ಚುನಾವಣೆಯ ಮುನ್ನ ೧೫ನೇ ವಿಧಾನಸಭೆಯ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಕೊನೆಯ ಬಜೆಟ್. ಹಾಗಾಗಿ ಇದು ಪೂರ್ಣಾವಧಿ ಬಜೆಟ್ ಅಲ್ಲವೇ ಅಲ್ಲ. ಮುಂದೆ ಯಾವುದೇ ಸರಕಾರ ಆರಿಸಿ ಬಂದರೂ ಹೊಸ ಬಜೆಟ್ ಮಂಡಿಸುತ್ತಾರೆ. ಹಾಗಾಗಿ ಸಹಜವಾಗಿ ಇದು ಏಪ್ರಿಲ್-ಮೇ ಎರಡು ತಿಂಗಳುಗಳಿಗೆ ಸೀಮಿತವಾಗಬಲ್ಲ ಮತ್ತು ಕೇವಲ ಚುನಾವಣೆಯನ್ನೇ ಪ್ರಧಾನವಾಗಿರಿಸಿಕೊಂಡ ಮಹತ್ವಾಕಾಂಕ್ಷಿ ಬಜೆಟ್ ಆಗಿರಲಿದೆ. ಪ್ರಾರಂಭದಿಂದ ಕೊನೆವರೆಗೂ ಇದು ಚುನಾವಣಾ ಭಾಷಣದಂತೆಯೇ ಕಾಣಲಿದೆ. ಎರಡು-ಮೂರು ವರ್ಷಗಳ ಕಾಲ ಸರಕಾರ ಏನು ಮಾಡಿದೆ, ಮುಂದೆ ಮರಳಿ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂಬುದನ್ನು ವಿವರಿಸುವ ಶ್ವೇತಪತ್ರವೆಂದರೂ ತಪ್ಪಾಗದು. ಒಟ್ಟಾರೆ ಭರವಸೆ, ಹೆಚ್ಚು ಜನಪ್ರಿಯ ಮತ್ತು ಎಲ್ಲಾ ಪ್ರದೇಶ, ಸಮುದಾಯಗಳನ್ನು, ವರ್ಗಗಳನ್ನು ಸಂತೈಸುವ ಬಜೆಟ್ ಆಗಿರಲಿದೆ. ನಾವದನ್ನು ಹಾಗೇ ನೋಡಬೇಕು.
ಈಗಾಗಲೇ ಅಂದಾಜಿಸಿರುವಂತೆ ಬಜೆಟ್ ಗಾತ್ರ ೩ ಲಕ್ಷ ಕೋಟಿಗೂ ಅಧಿಕವಾಗುವ ನಿರೀಕ್ಷೆಯಿದೆ. ಜನವರಿ ತಿಂಗಳೊಂದರಲ್ಲಿಯೇ ಸುಮಾರು ೬,೦೦೦ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ವಾಣಿಜ್ಯ ತೆರಿಗೆ ೭೦,೦೦೦ ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದು ಸರ್ಕಾರದ ಕೈಯನ್ನು ಗಟ್ಟಿಗೊಳಿಸಿದೆ. ಜೆ.ಎಸ್.ಟಿ. ಸಂಗ್ರಹ ಉತ್ತಮವಾಗಿದ್ದರೂ, ಜಿ.ಎಸ್.ಟಿಯಿಂದ ಉತ್ಪಾದನಾ ರಾಜ್ಯಗಳಿಗೆ ಆಗಿರುವ ನಷ್ಟ ಭರಿಸಲು ನೀಡುತ್ತಿದ್ದ ಕೇಂದ್ರದ ಪರಿಹಾರವನ್ನು ಈ ವರ್ಷದಿಂದ ನಿಲ್ಲಿಸಲಾಗುತ್ತದೆ. ಹಾಗಾಗಿ ಇದಕ್ಕೆ ಬೇಕಾದ ಆರ್ಥಿಕ ಸ್ಥಳಾವಕಾಶವನ್ನು ಸರ್ಕಾರ ಮಾಡಿಕೊಳ್ಳಲೇಬೇಕು. ಹೊಸ ಯೋಜನೆಗಳ ಅನಿವಾರ್ಯತೆ ಒಂದೆಡೆ, ಹಳೆ ಯೋಜನೆಗಳನ್ನು ಮುಂದುವರಿಸುವ ಬಾಧ್ಯತೆ ಮತ್ತೊಂದೆಡೆ.
ರಾಜ್ಯದ ದೂರಗಾಮಿ ಅಭಿವೃದ್ಧಿಗೆ ಹೂಡಿಕೆ ಅನಿವಾರ್ಯ. ಚುನಾವಣೆ ಗೆಲ್ಲಲು ಜನಪ್ರಿಯ ಯೋಜನೆಗಳೇ ಆಧಾರ. ಈಗಾಗಲೇ ಘೋಷಿಸಿರುವಂತೆ ಕಾಂಗ್ರೆಸ್ ಪಕ್ಷದ ಮಹಿಳೆಯರಿಗೆ ೨,೦೦೦ ರೂಪಾಯಿಗಳ ಸಹಾಯಧನದ ಪ್ರತಿಯಾಗಿ ಬೊಮ್ಮಾಯಿ ಸರಕಾರ ಅದೇ ಮಾದರಿಯ ಯೋಜನೆ ನೀಡುವುದಾಗಿ ಹೇಳಿದ್ದಾರೆ. ಇಂತಹ ಅನೇಕ ಯೋಜನೆಗಳಿಗೆ ಹಣ ಕಾಯ್ದಿರಿಸುವುದೂ ಅನಿವಾರ್ಯ. ಮುಂದೆ ಇವುಗಳಲ್ಲಿ ಆರ್ಥಿಕ ಪರಿಸ್ಥಿತಿ, ರಾಜಕೀಯ ಪರಿಸ್ಥಿತಿಗಳಿಗನುಗುಣವಾಗಿ ಬದಲಾವಣೆಗಳಾಗಬಹುದು. ಹೆಚ್ಚಿನ ಘೋಷಣೆಗಳು ಜಾರಿಯಾಗದೇ ಉಳಿದುಬಿಡಬಹುದು. ಇದು ಎಲ್ಲಾ ಸರಕಾರಗಳಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ.
ಕೇಂದ್ರ ಸರಕಾರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರೂಪಾಯಿಗಳು ಮತ್ತು ರೈಲ್ವೆ ಯೋಜನೆಗಳಿಗೆ ೭,೫೬೧ ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಅದರೊಂದಿಗೆ ವಲಯವಾರು ಹಂಚಿಕೆಯಲ್ಲಿಯೂ ಕರ್ನಾಟಕಕ್ಕೆ ಹೆಚ್ಚಿನ ಹಣಕಾಸು ಒದಗಿಸಲಾಗಿದೆ. ಇವೆಲ್ಲ ಕರ್ನಾಟಕಕ್ಕೆ ಇತ್ತೀಚಿನ ವರ್ಷಗಳಲ್ಲಿ ಕೊಟ್ಟ ಅತಿ ಹೆಚ್ಚು ಅನುದಾನಗಳಾಗಿವೆ. ಈ ಬಾರಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಹಂಚಿಕೆಯಲ್ಲಿ ೫೨,೨೮೧ ಕೋಟಿ ರೂಪಾಯಿ ನೀಡಲಾಗಿದೆ. ೧೫ನೇ ಹಣಕಾಸು ಆಯೋಗ ರಾಜ್ಯಕ್ಕೆ ತೆರಿಗೆಯ ಪ್ರಮಾಣವನ್ನು ೪.೭%ನಿಂದ ೩.೬%ಕ್ಕೆ ಇಳಿಸಿದ ಹೊರತಾಗಿಯೂ ರಾಜ್ಯದ ಬೊಕ್ಕಸಕ್ಕೆ ಕೊರತೆಯಾಗಿಲ್ಲ. ಇವು ಬಸವರಾಜ ಬೊಮ್ಮಾಯಿಯವರಿಗೆ ಇತರ ಯೋಜನೆಗಳತ್ತ ಗಮನಹರಿಸಲು ಸಹಾಯವಾಗಲಿದೆ. ಆದರೂ ಈ ಬಜೆಟ್ ಹೆಚ್ಚು ಕಡಿಮೆ ಕೇಂದ್ರ ಮಂಡಿಸಿರುವ ಬಜೆಟ್ ಹಾದಿಯಲ್ಲಿಯೇ ಸಾಗಲಿದೆ. ಹಿಂಜರಿತದ ಹೊತ್ತಲ್ಲಿ ಸರಕಾರದ ಹೂಡಿಕೆಯೇ ಪ್ರಧಾನವಾಗಿರಲಿದೆ.
ನೀರೀಕ್ಷಿತ ಗುರಿ ತಲುಪಲು ಜಲ್ ಜೀವನ್ ಮಿಶನ್ ನಂತಹ ಮಹತ್ವಾಕಾಂಕ್ಷಿ ಯೋಜನೆಗಳು, ನಮ್ಮ ಕ್ಲಿನಿಕ್ ಗಳು, ಉದ್ಯೋಗ ಖಾತ್ರಿಯಂತಹ ಯೋಜನೆಗಳಿಗೆ ರಾಜ್ಯವೇ ಹೆಚ್ಚಿನ ಹಣಕಾಸನ್ನು ಹೊಂದಿಸುವ ಅಗತ್ಯವಿದೆ. ಕೇಂದ್ರದ ಕೆಲವು ಯೋಜನೆಗಳಿಗೆ ಅನುದಾನ ಕಡಿತವಾಗುತ್ತಿರುವ ಹೊತ್ತಿನಲ್ಲಿ ಅದರ ಭಾರವೂ ರಾಜ್ಯದ ಮೇಲೇ ಇರುತ್ತದೆ. ಈ ಯೋಜನೆಗಳ ಜೊತೆಗೆ ರಾಜ್ಯ ತನ್ನ ಯೋಜನೆಗಳನ್ನು ಮುನ್ನಡೆಸಬೇಕು, ಹೊಸ ಯೋಜನೆಗಳನ್ನು ಘೋಷಿಸಬೇಕು. ಹಾಗಾಗಿ ಹೆಚ್ಚುವರಿ ಸಾಲದ ಮೊರೆ ಹೋದರೂ ಅಚ್ಚರಿಯಿಲ್ಲ. ಆರ್ಥಿಕ ಹಿಂಜರಿತ ತಪ್ಪಿಸಲು ಮಾಡಿದ ಸಾಲವನ್ನು ಮೂಲ ಸೌಕರ್ಯ ಅಭಿವೃದ್ಧಿ ಹೂಡಿಕೆಯತ್ತ ಕೇಂದ್ರೀಕರಿಸಿದರೆ ಸಾಲ ಪೋಲಾಗದೆ, ಅದರ ಲಾಭ ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಒದಗುತ್ತದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಿದೆ. ಚುನಾವಣೆ, ಜನಪ್ರಿಯ ಘೋಷಣೆಗಳು ಎಷ್ಟೇ ಮುಖ್ಯವಾದರೂ ರಾಜ್ಯದ ಬೆಳವಣಿಗೆಯೂ ಅಷ್ಟೇ ಮುಖ್ಯ. ಕಲೆದ ಬಜೆಟ್ ನಲ್ಲಿ ಮತ್ತು ಸರಕಾರದ ಇತರ ಕಾರ್ಯಕ್ರಮಗಳಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ. ಅದು ಈ ಭಾರಿಯೂ ಮುಂದುವರೆಯಲಿದೆ.
ಕೃಷಿ, ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ, ಕೈಗಾರಿಕೆ, ಜನಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು ೧೦,೦೦೦ ಕೋಟಿಗಳಷ್ಟು ಹೆಚ್ಚುವರಿ ಅನುದಾನ ಒದಗಿಸುವ ಸಾಧ್ಯತೆಯಿದೆ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾದ ಆರ್ಥಿಕ ಬೆಳವಣಿಗೆ, ಅಭಿವೃದ್ಧಿಗೆ ಕಾರಣವಾಗಲಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಕೊಡಲಾಗುವ ಮೊತ್ತ ೪೦,೦೦೦ ಕೋಟಿ ದಾಟಬಹುದು ಎಂದು ಅಂದಾಜಿಸಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ೧೦,೦೦೦ ಸಾವಿರ ಕೋಟಿ ಅನುದಾನವನ್ನು ಕೇಳಲಾಗಿದೆ. ವಿಶ್ವದ ಐಟಿ ಹಬ್ ಆಗುವ ಸಾಮರ್ಥ್ಯವಿರುವ ಬೆಂಗಳೂರು ಅಭಿವೃದ್ಧಿಗೆ ಗಮನ ಕೊಡುವಷ್ಟೇ ಮಳೆಬಂದಾಗ ಮುಳುಗಡೆಯಾಗುವ, ಸಂಚಾರ ದಟ್ಟಣೆಯಂತಹ ಮೂಲಭೂತ ಸಮಸ್ಯೆಗಳತ್ತವೂ ಗಮನಹರಿಸಬೇಕು. ಬೆಂಗಳೂರು ಬೆಳವಣಿಗೆಯಾಗಬೇಕು ನಿಜ ಆದರೆ ಅದರ ಜೊತೆಗೆ ಸಮಾನಾಂತರ ನಗರಗಳನ್ನು ಅಭಿವೃದ್ಧಿಪಡಿಸದ ಹೊರತು ಬೆಳವಣಿಗೆ ಅರ್ಥವಿರುವುದಿಲ್ಲ. ಮುಂದೇ ಇದೇ ಗಂಭೀರ ಸಮಸ್ಯೆಯಾಗಬಹುದು.
ಹಿಂದುಳಿದ ಪ್ರದೇಶಗಳತ್ತ ನೀರಾವರಿ, ರಸ್ತೆ, ಗುಡಿ ಕೈಗಾರಿಕೆ, ಜವಳಿ ಪಾರ್ಕ್, ಕೌಶಲಾಭಿವೃದ್ಧಿ ಯೋಜನೆಗಳ ಮೂಲಕವೇ ಗಮನಹರಿಸಬೇಕು. ಪ್ರಾದೇಶಿಕ ಅಸಮತೋಲನ ಯಾವುದೇ ರಾಜ್ಯದ ಬೆಳವಣಿಗೆಗೆ ಪೂರಕವಲ್ಲ. ಜಿಲ್ಲೆಗೊಂದು ವಸ್ತು ಸೇರಿದಂತೆ ಸ್ಥಳೀಯ ಕೈಗಾರಿಕೆ, ಆಹಾರ ಪ್ರೊಸೆಸಿಂಗ್ ಯುನಿಟ್‌ಗಳನ್ನು ಸ್ಥಾಪಿಸುವ ಮೂಲಕ ಕೃಷಿ, ಕೈಗಾರಿಕೆ, ಉದ್ಯಮ ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದು ಶಾಧ್ಯ. ಆದರೆ ಅದಕ್ಕೆ ಹೆಚ್ಚಿನ ಗಮನ ಅಗತ್ಯ. ಒಟ್ಟಾರೆ ಕಳೆದ ಕೆಲವಾರು ವರ್ಷಗಳಿಂದ ಇಂತಹ ಆಕರ್ಷಕವೆನಿಸುವ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಆದರೆ ಅದರ ಅನುಷ್ಠಾನ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಅದಾಗದ ಹೊರತು ಬಜೆಟ್ ಕೇವಲ ಘೊಷಣಾ ಪತ್ರವಾಗಿ ಉಳಿದುಹೋಗುವ ಅಪಾಯವಿದೆ.
ತಂತ್ರಜ್ಞಾನಗಳು ಬದುಕನ್ನು ಬದಲಾಯಿಸುತ್ತಿರುವಂತೆ ನಿರೀಕ್ಷಿತ ಮಟ್ಟದ ಆಡಳಿತ ಸುಧಾರಣೆ ತರದಿರುವುದು ವಿಷಾದನೀಯ. ಇ-ಆಡಳಿತವಿದ್ದರೂ ಭ್ರಷ್ಟಾಚಾರ ತಗ್ಗದಿರುವುದು ಇಂತಹ ಕಾಯಕಲ್ಪಗಳಿಗೆ ಬೆಲೆಯಿಲ್ಲ ಎನ್ನುವುದನ್ನು ಸಾರುತ್ತದೆ. ಕಂದಾಯ ಕಾವೇರಿ೨.೦ ಅನುಷ್ಠಾನವಾಗುತ್ತಿದೆ, ಆದರೂ ಪಾರದರ್ಶಕವಾಗಿ ಕಂದಾಯ ಕೆಲಸಗಳು ಆಗುವುದಿಲ್ಲ ಎಂಬುದು ಅನೇಕ ತಬರರ ನೋವಿನ ಕಥೆ. ಇದೊಂದು ಉದಾಹರಣೆ. ಎಲ್ಲಾ ಇಲಾಖೆಗಳಲ್ಲೂ ಇದು ತಪ್ಪದ ತಲೆನೋವು. ಇದೇ ಕಾರಣಕ್ಕೆ ಅನೇಕ ಕಾರ್ಪೊರೆಟ್ ಕಂಪನಿಗಳು, ಹೊಸ ಉದ್ಯಮಗಳು ಇಲ್ಲಿ ನೆಲೆಯೂರುವುದಕ್ಕೆ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿರುವುದು. ವಿದೇಶಿ ಸಂಸ್ಥೆಗಳು ಅದಾನಿ ಸಂಸ್ಥೆ ಬಗ್ಗೆ ಪ್ರಶ್ನೆ ಮಾಡುತ್ತಿವೆ. ಆದರೆ ವ್ಯವಸ್ಥೆ ಮತ್ತು ಆಡಳಿತ ನಿಯಂತ್ರಣ ವ್ಯವಸ್ಥೆಯ ಮಿತಿಗಳನ್ನೇ ಎಲ್ಲಾ ದೊಡ್ಡ ದೊಡ್ಡ ಉದ್ದಿಮೆದಾರರು ಬಳಸಿಕೊಳ್ಳ್ಳುತ್ತಾರಷ್ಟೇ ಎಂಬುದನ್ನು ಮರೆತಿರುತ್ತೇವೆ. ಬಜೆಟ್ ನಲ್ಲಿ ಶುದ್ಧ ಆಡಳಿತ ಎನ್ನುವ ಸರಕಾರಗಳು, ಶುದ್ಧವಾಗಿಯೇ ಜಾರಿಯಾಗಬೇಕೆಂದು ಟೊಂಕಕಟ್ಟಿ ನಿಲ್ಲದಿರುವುದು ಅನೇಕ ಯೋಜನೆಗಳ ಹಳ್ಳಹಿಡಿಯುವಿಕೆಗೆ ಸಾಕ್ಷಿ. ಸರ್ಕಾರ ಇದಕ್ಕೆ ಹೊಸ ಯೋಜನಾ ಮಾನದಂಡಗಳನ್ನು ಹಾಕಿಕೊಳ್ಳದ ಹೊರತು ಪ್ರಯತ್ನಗಳೆಲ್ಲ ದಂಡವಾಗುತ್ತವೆ.
ಒಂದೆಡೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುವುದು, ಮತ್ತೊಂದೆಡೆ ಜನರು ಕಟ್ಟುವ ಅದೇ ತೆರಿಗೆಯಿಂದ ಜನರಿಗೆ ಸೌಲಭ್ಯ ಒದಗಿಸುವ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸುವುದು. ಇದೆಲ್ಲ ಚುನಾವಣಾ ಆಡುಂಬೋಲವಾಗಿಬಿಟ್ಟಿದೆ. ಇದಕ್ಕಿಂತ ತೆರಿಗೆಯನ್ನು ಕಡಿಮೆಗೊಳಿಸಿದರೆ, ಇಂಧನ ದರ ತಗ್ಗಿಸಿದರೆ ಇದರಿಂದ ಎಲ್ಲರಿಗೂ ನೇರ ಲಾಭವಾಗಲಿದೆ. ದೂರದೃಷ್ಟಿಯಿಲ್ಲದೆ ಹೆಚ್ಚು ಹೆಚ್ಚು ಉಚಿತ ಯೋಜನೆಗಳನ್ನು ಘೋಷಿಸುವುದು, ಅವುಗಳನ್ನು ಪೂರೈಸಲು ಹೆಚ್ಚುವರಿ ಸಾಲ ಮಾಡುವುದು. ಭಾರತದ ಆರ್ಥಿಕ ಭವಿಷ್ಯವನ್ನು ಅತಂತ್ರದತ್ತ ದೂಡುವುದು. ಇದೊಂದು ಟ್ರೆಂಡ್ ಆಗಿ ಬಿಟ್ಟಿದೆ.
ಇತ್ತೀಚೆಗೆ ಬಜೆಟ್ ಮಂಡಿಸಿದ ತೆಲಂಗಾಣ ಸರಕಾರ ಈಗಾಗಲೇ ರಾಜ್ಯಗಳಿಗೆ ಇರುವ ಮಿತಿಯನ್ನು ಲೆಕ್ಕಿಸದೆ ತನ್ನ ಉಚಿತ ಯೋಜನೆಗಳಿಗೆ ಯಥೇಚ್ಛ ಸಾಲವನ್ನು ಮಾಡಿದೆ. ಅದನ್ನು ತೀರಿಸುವುದಕ್ಕೆ ಯೋಜನಾ ದೂರದೃಷ್ಟಿಯಿಲ್ಲ. ಆದರೆ ತನಗೆ ಹೆಚ್ಚುವರಿ ಸಾಲ ಮಾಡುವುದಕ್ಕೆ ಕೇಂದ್ರ ಅವಕಾಶ ನೀಡುತ್ತಿಲ್ಲ ಎಂಬ ಚುನಾವಣಾ, ಭಾವನಾತ್ಮಕ ಟೀಕೆಯನ್ನು, ದೂಷಣೆಯನ್ನು ಮಾಡಿದೆ. ಅದೇ ರೀತಿ ಕೇರಳ ರಾಜ್ಯ ಕೂಡ ಸುಧಾರಣೆಯ ಹೆಸರಲ್ಲಿ ಸಾಲದ ಹೊರೆ ಏರಿಸುತ್ತಿದೆ. ಏರಿರುವ ತೆರಿಗೆ ಪ್ರಮಾಣದ ಕಾರಣದಿಂದ ಗಡಿ ಭಾಗದ ಜನರು ಕರ್ನಾಟಕಕ್ಕೆ ಬಂದು ಇಂಧನ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಇವು ಯಾವ ಮಾದರಿಯ ಅಭಿವೃದ್ಧಿಗಳು? ಇವು ಕೇವಲ ಅಧಿಕಾರದಲ್ಲಿರುವ ತಂತ್ರಗಳು.
ಈ ಬಾರಿಯ ಬಜೆಟ್ ಎಲ್ಲಾ ರೀತಿಯಲ್ಲಿಯೂ ಚುನಾವಣಾ ಭಾಷಣವೇ ಆಗಿರಲಿದೆ. ಸುಧಾರಣೆ, ಹೊಸ ಯೋಜನೆಗಳು, ಬಡ, ಮಹಿಳಾ, ಕೃಷಿಕ ಮತ್ತು ಹೊಸ ತಲೆಮಾರಿನ ಆಶೊತ್ತರಗಳನ್ನು ಈಡೇರಿಸುವ ಮಹತ್ವಾಕಾಂಕ್ಷೆಗಳಿಂದ ಕೂಡಿರಲಿದೆ. ಇದನ್ನು ಆರ್ಥಿಕ ತಜ್ಞರು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆಯಿಲ್ಲ. ಚುನಾವಣೆ ಮುಗಿದ ಮೇಲೆ ಬದಲಾದ ಸನ್ನಿವೇಶದಲ್ಲಿ ಇದೇ ಸರಕಾರ ಬಂದರೂ ಬೇರೆ ಸರಕಾರ ಬಂದರೂ ಇದರಲ್ಲಿ ಬದಲಾವಣೆ ಆಗುವುದು ಖಚಿತ. ಆದರೂ ಸರಕಾರದ ಪಾಲಿಗೆ ಕಳೆದ ಕೆಲವಾರು ತಿಂಗಳುಗಳಿಂದ ಎದುರಾಗುತ್ತಿರುವ ನಿರಂತರ ಆರೋಪ, ರಾಜಕೀಯ ಟೀಕೆಗಳಿಗೆ ಉತ್ತರಿಸಿ, ಇಡೀ ಚುನಾವಣಾ ಅಖಾಡವನ್ನು ತಮ್ಮತ್ತ ಮಾಡಿಕೊಳ್ಳಲು ಇರುವ ಉತ್ತಮ ಮತ್ತು ಕೊನೆಯ ಅವಕಾಶ.
ಇದನ್ನೂ ಓದಿ : Karnataka Budget 2023 : ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ನೀಡುತ್ತಾರಾ ಜನಪ್ರಿಯ ಬಜೆಟ್?
ಯಡಿಯೂರಪ್ಪ ರಾಜಿನಾಮೆ ನೀಡಿದ ಬಳಿಕ ಮುಖ್ಯಮಂತ್ರಿಯಾಗಿ ಬಂದ ಬಸವರಾಜ ಬೊಮ್ಮಾಯಿ ಎಲ್ಲರನ್ನೂ ಸರಿದೂಗಿಸಿಕೊಂಡು, ನಿಭಾಯಿಸಿಕೊಂಡು ಹೋಗುವ ಕಲೆಯನ್ನು ತೋರಿಸಿದ್ದಾರೆ. ಸರಕಾರ ಬೀಳದಂತೆ ನೋಡಿಕೊಳ್ಳಲು ಇದು ಉತ್ತಮ ನಡೆಯಾದರೂ, ಇದರಿಂದ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸುವುದು ಕಷ್ಟ. ಚುನಾವಣಾ ವರ್ಷದ ಬಜೆಟ್ ನಲ್ಲಿಯೂ ಎಲ್ಲರನ್ನೂ ಸರಿದೂಗಿಸುವ ಮಧ್ಯಮ ಮಾರ್ಗವನ್ನು ಹಿಡಿಯುತ್ತಾರಾ ಅಥವಾ ಎಲ್ಲರಿಗೂ ಅಚ್ಚರಿ ತರಬಲ್ಲ ಬದಲಾವಣೆಗಳ ಭರವಸೆಯನ್ನು ಹೊತ್ತು ತರುತ್ತಾರಾ ಎಂಬುದನ್ನು ಕಾದು ನೋಡಬೇಕು. ಸರಕಾರಗಳಿಗೆ ಚುನಾವಣೆ ಗೆಲ್ಲುವುದೇ ಮುಖ್ಯ. ಆಗಲೇ ಏನಾದರೂ ಮಾಡಲು ಸಾಧ್ಯ. ಜನರನ್ನು ಮೆಚ್ಚಿಸಿ, ಒಪ್ಪಿಸಲು ಇದೊಂದು ಕಡೆಯ ಆಟ. ಇದರ ನಂತರ ನಡೆಯುವುದೆಲ್ಲವೂ ಚುನಾವಣಾ ರಾಜಕಾರಣದ ಬಯಲಾಟ. ಭರಫೂರ ಭರವಸೆಗಳನ್ನು ಹೊತ್ತು ಬರುವ ಬಜೆಟ್ ಚುನಾವಣಾ ಅಖಾಡಕ್ಕೆ ನೇರ ಭೂಮಿಕೆಯನ್ನು ಸಿದ್ಧಪಡಿಸಲಿದೆ.
(ಬಜೆಟ್ ವಿಶೇಷ ಲೇಖನ)