ಬೆಂಗಳೂರು: ದಕ್ಷಿಣ ಭಾರತದ ಬಹುತೇಕ ಎಲ್ಲಾ ಹಿರಿ-ಕಿರಿಯ ಸಾಹಿತಿಗಳನ್ನು ಒಳಗೊಂಡು ಬುಕ್ ಬ್ರಹ್ಮ ಸಂಸ್ಥೆ ಆಯೋಜಿಸಿರುವ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ -2024 ದೇಶದ ಅತಿ ದೊಡ್ಡ ಭಾಷಾ ಸಾಹಿತ್ಯ ಉತ್ಸವ. ಈ ಉತ್ಸವದಲ್ಲಿ ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಇಂಗ್ಲೀಷ್ ಭಾಷೆಯ ಸುಮಾರು 300 ಸಾಹಿತಿಗಳು 80ಕ್ಕಿಂತಲೂ ಹೆಚ್ಚು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹಿರಿಯ ಸಾಹಿತಿ, ಸಂಶೋಧಕ ನಾಡೋಜ ಹಂಪ ನಾಗರಾಜಯ್ಯ (Book Brahma Lit Fest) ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಆಯೋಜಿಸಲಾಗಿದ್ದ “ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024” ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಸಾಹಿತಿ ಉತ್ಸವದ ನಿರ್ದೇಶಕ ಸತೀಶ್ ಚಪ್ಪರಿಕೆ ಅವರೊಂದಿಗೆ ಪೋಸ್ಟರ್ ಬಿಡುಗಡೆಗೊಳಿಸಿ, ಬಳಿಕ ಅವರು ಮಾತನಾಡಿದರು.
ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಸಭಾಂಗಣ ಮತ್ತು ಆವರಣದಲ್ಲಿ ಆಗಸ್ಟ್ 9, 10 ಮತ್ತು 11ರಂದು ಈ ಸಾಹಿತ್ಯ ಉತ್ಸವ ನಡೆಯಲಿದೆ. ನಾಲ್ಕು ಗೋಷ್ಠಿಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿದ ದಕ್ಷಿಣ ಭಾರತದ ಶ್ರೇಷ್ಠ ಸಾಹಿತಿಗಳಾದ ಕೆ.ಸಚ್ಚಿದಾನಂದನ್, ಪೌಲ್ ಝಕಾರಿಯ, ಬಿ. ಜಯಮೋಹನ್, ಪೆರುಮಾಳ್ ಮುರುಗನ್, ಬೆನ್ಯಮಿನ್, ವೋಲ್ಗ, ಎಚ್.ಎಸ್. ಶಿವಪ್ರಸಾದ್, ವಿವೇಕ ಶಾನಭಾಗ, ಗಿರೀಶ್ ಕಾಸರವಳ್ಳಿ, ಮಮತಾ ಸಾಗರ್, ಎಸ್.ಜಿ. ವಾಸುದೇವ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: Uttara Kannada News: ಬಡ ಮೀನುಗಾರನ ಮಗಳು ಸಿಎ ಪರೀಕ್ಷೆಯಲ್ಲಿ ಪಾಸ್; ಸ್ಫೂರ್ತಿಯುತ ಸಾಧನೆ
ಡಾ. ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಈ ಹೊತ್ತಿನ ಕಾಲಘಟ್ಟ, ಸಾಂಸ್ಕೃತಿಕ ಸ್ಥಿತಿ-ಗತಿಯನ್ನು ಗಣನೆಗೆ ತೆಗೆದುಕೊಂಡರೆ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಅತ್ಯಂತ ಪ್ರಸ್ತುತ ಮತ್ತು ಅಗತ್ಯ. ವಿಶ್ವ ಸಾಹಿತ್ಯಕ್ಕೆ ಕನ್ನಡ, ತಮಿಳು, ಮಲೆಯಾಳಂ, ತೆಲುಗು ಭಾಷೆಗಳ ಕೊಡುಗೆ ಅಪಾರವಾಗಿದ್ದು, ಐತಿಹಾಸಿಕವಾಗಿ ಕೂಡ ಮಹತ್ವವಾದ 4 ಭಾಷೆಗಳನ್ನು ಒಂದೇ ವೇದಿಕೆಗೆ ಕರೆ ತಂದು ಪರಸ್ಪರ ಸಂವಾದಕ್ಕೆ ಅನುಕೂಲ ಮಾಡಿಕೊಡುವುದು ಈ ಉತ್ಸವದ ಉದ್ದೇಶ ಎಂದು ತಿಳಿಸಿದರು.
ನಾಲ್ಕು ಭಾಷೆಗಳನ್ನು ಒಗ್ಗೂಡಿಸುವ ಇಂತಹ ಒಂದು ಬಹು ದೊಡ್ಡ ಪ್ರಯತ್ನ ಇದುವರೆಗೆ ಭಾರತದಲ್ಲಿ ಎಲ್ಲೂ ನಡೆದಿಲ್ಲ. ಹಲವು ಮೊದಲುಗಳಿಗೆ ಸಾಕ್ಷಿಯಾಗಲಿರುವ ಬುಕ್ ಬ್ರಹ್ಮ ಸಾಹಿತ್ಯ ಕನ್ನಡದ ನೆಲದ ಹೆಮ್ಮೆಯಾಗಿ ರೂಪುಗೊಳ್ಳಲಿದೆ. ಸಾಹಿತಿಗಳ ಜತೆಯಲ್ಲಿ ದಕ್ಷಿಣ ಭಾರತದ ಪ್ರಕಾಶಕರ ಒಗ್ಗೂಡುವಿಕೆ ಕೂಡ ಇಲ್ಲಿ ಆಗಲಿದೆ. ಅಮೇರಿಕಾದ ಚಿಕಾಗೊ ವಿಶ್ವವಿದ್ಯಾಲಯದ ಪ್ರತಿನಿಧಿಗಳು ದಕ್ಷಿಣ ಭಾರತದ ಪ್ರಕಾಶಕರ ಜತೆ ದುಂಡುಮೇಜಿನ ಸಭೆ ನಡೆಸಲಿದ್ದಾರೆ.
ಭಾರತೀಯ ಭಾಷೆಗಳಲ್ಲಿನ ಮಹತ್ವದ ಸಾಹಿತ್ಯ ಕೃತಿಗಳನ್ನು ಗುರುತಿಸಿ, ಅವನ್ನು ಇಂಗ್ಲೀಷ್ ಭಾಷೆಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಕೈ ಹಾಕಿರುವ ಚಿಕಾಗೊ ವಿಶ್ವವಿದ್ಯಾಲಯ ಅದಕ್ಕಾಗಿಯೇ ಎಸ್‌ಎಎಲ್‌ಟಿ (SALT) ಎಂಬ ವಿಶೇಷ ಅಂಗವನ್ನೇ ರಚಿಸಿದೆ ಎಂದು ಹೇಳಿದರು.
ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಇದು ಕೇವಲ ಸಾಹಿತ್ಯ ಉತ್ಸವ ಮಾತ್ರವಲ್ಲ. ದಕ್ಷಿಣ ಭಾರತದ ಕಲೆ, ಸಂಸ್ಕೃತಿ, ಸಾಹಿತ್ಯ ಮಹಾಸಂಗಮ. ಉತ್ಸವದ ಮೂರು ದಿನಗಳ ಅವಧಿಯಲ್ಲಿ ಒಟ್ಟು 9 ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಪದ್ಮಶ್ರೀ ವೆಂಕಟೇಶ ಕುಮಾರ್, ಆರ್.ಕೆ.ಪದ್ಮನಾಭ, ಪ್ರಕಾಶ್ ರೈ, ಬಿಂದುಮಾಲಿನಿ, ಮಾನಸಿ ಸುಧೀರ್ ಮತ್ತು ಮೇಘನಾ ಚಂದ್ರಮೌಳಿ ಅವರಿಂದ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಮೈಸೂರಿನ ನಟನ, ಶ್ರೀರಂಗಪಟ್ಟಣದ ನಿರ್ದಿಗಂತ ರಂಗ ಪ್ರದರ್ಶನ ಮತ್ತು ಕೆರೆಮನೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ಕೂಡ ಇರಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: Bengaluru News: ಮಕ್ಕಳು ಪ್ರಶ್ನೆ ಮಾಡುವ ಸಾಮರ್ಥ್ಯ ಬೆಳಸಿಕೊಳ್ಳಿ: ಐಶ್ವರ್ಯ ಡಿಕೆಎಸ್ ಹೆಗ್ಡೆ
ಸೇಂಟ್ ಜಾನ್ಸ್ ಸಭಾಂಗಣದ ಆವರಣದಲ್ಲಿ ಐದು ಭಾಷೆಗಳ 60ಕ್ಕಿಂತಲೂ ಹೆಚ್ಚು ಪುಸ್ತಕದಂಗಡಿಗಳು ಇರಲಿವೆ. ಜತೆಗೆ ಉತ್ಸವಕ್ಕೆ ಪೋಷಕರ ಜತೆ ಬರುವ ಚಿಕ್ಕ ಮಕ್ಕಳಿಗಾಗಿ ಪ್ರತ್ಯೇಕ ಚಿಣ್ಣರ ಅಂಗಳ ಕೂಡ ಇರಲಿದೆ. ಇದರಲ್ಲೇ ಸುಮಾರು ಇಪ್ಪತ್ತು ಚಿತ್ರ ಕಲಾವಿದರ ಕೃತಿಗಳ ಪ್ರದರ್ಶನ, ಮಾರಾಟ ಕೂಡ ಏರ್ಪಡಿಸಲಾಗಿದೆ. ಒಟ್ಟಾರೆ ದಕ್ಷಿಣ ಭಾರತದ ಮನಸ್ಸುಗಳೆಲ್ಲಾ ಒಂದಾಗಿ ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತು ಪರಸ್ಪರ ತಮ್ಮ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಮಹತ್ವದ ವೇದಿಕೆಯಾಗಿ “ಬುಕ್ ಬ್ರಹ್ಮ ಸಾಹಿತ್ಯ ಉತ್ಸವ” ವನ್ನು ರೂಪಿಸುವ ಉದ್ದೇಶ ನಮ್ಮದು ಎಂದು ತಿಳಿಸಿದರು.
ನೋಂದಣಿ ಆರಂಭ, ಉಚಿತ
ಬುಕ್ ಬ್ರಹ್ಮ ಸಾಹಿತ್ಯ ಉತ್ಸವ -2024 ಕ್ಕೆ ಎಲ್ಲಾ ಸಾಹಿತ್ಯಾಸಕ್ತರಿಗೂ ಉಚಿತ ಪ್ರವೇಶವಿದೆ. ಆದರೆ ನೋಂದಣಿ ಕಡ್ಡಾಯವಾಗಿದ್ದು, ಈ ಸಾಹಿತ್ಯ ಉತ್ಸವದಲ್ಲಿ ಭಾವಹಿಸಲು ಇಚ್ಚಿಸುವ ಎಲ್ಲರೂ www.bookbrahmalitfest.com ವೆಬ್‌ಸೈಟ್ ಭೇಟಿ ನೀಡಿ, ತಮ್ಮ ಭಾಗವಹಿಸುವಿಕೆಯನ್ನು ನೋಂದಣಿ ಮಾಡಿಕೊಳ್ಳಿ. ನೋಂದಾವಣಿ ಮಾಡಿಕೊಂಡ ಪ್ರತಿಯೊಬ್ಬರಿಗೂ ಇಮೇಲ್ ಮೂಲಕ ನೋಂದಾವಣಿ ಸಂಖ್ಯೆ ಬಂದು ತಲುಪುತ್ತದೆ.
ಸಾಹಿತ್ಯ ಉತ್ಸವ ನಡೆಯುವ ದಿನ ಸೇಂಟ್ ಜಾನ್ಸ್ ಸಭಾಂಗಣದ ಆವರಣದಲ್ಲಿ ಇರುವ ರಿಜಿಸ್ಟ್ರೇಷನ್ ಡೆಸ್ಕ್‌ಗೆ ಬಂದು ಆ ಸಂಖ್ಯೆಯನ್ನು ಕೊಟ್ಟಲ್ಲಿ ಪ್ರತಿನಿಧಿ ಪಾಸ್ ಕೊಡಲಾಗುವುದು. ಪ್ರತಿನಿಧಿ ಪಾಸ್ ಹೊಂದಿದ ಎಲ್ಲರಿಗೂ ಗೋಷ್ಠಿಗಳು, ಕಲಾ ಪ್ರದರ್ಶನ, ಸಾಂಸ್ಕೃತಿಕ ಪ್ರದರ್ಶನ ಮತ್ತು ಪುಸ್ತಕ ಪ್ರದರ್ಶನಗಳಿಗೆ ಮುಕ್ತ ಅವಕಾಶ ಇರುತ್ತದೆ.
ಇದನ್ನೂ ಓದಿ: KEA Exam: ಕ್ಯಾಮೆರಾ ಕಣ್ಗಾವಲಿನಲ್ಲಿ ಕೆಇಎ ಸ್ಪರ್ಧಾತ್ಮಕ ಪರೀಕ್ಷೆ; ವೆಬ್ ಕಾಸ್ಟಿಂಗ್ ಪರಿಶೀಲಿಸಿದ ಉನ್ನತ ಶಿಕ್ಷಣ ಸಚಿವ
ಅಕಸ್ಮಾತ್ ನೋಂದಣಿ ಮಾಡಿಕೊಳ್ಳಲು ಮರೆತವರು, ಉತ್ಸವ ನಡೆಯುವ ಸ್ಥಳಕ್ಕೆ ಬಂದ ಮೇಲೆ ಕೂಡ ಕ್ಯೂ ಆರ್ ಕೋಡ್ ಬಳಸಿ, ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆ ಪಡೆದು ತೋರಿಸಿದಲ್ಲಿ ಅವರಿಗೆ ಆ ಸ್ಥಳದಲ್ಲಿಯೇ ಪ್ರತಿನಿಧಿ ಪಾಸ್ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.