ಬೆಳಗಾವಿ/ಹಾವೇರಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಸಂಬಂಧ ಮಹಾರಾಷ್ಟ್ರದಲ್ಲಿ ಮರಾಠಿಗರ ಪುಂಡಾಟಿಕೆ ವಿರುದ್ಧ ರಾಜ್ಯದ ಹಲವು ಕಡೆ ಕರವೇ ಪ್ರತಿಭಟನೆ ನಡೆಸುತ್ತಿದೆ. ಮಂಗಳವಾರ (ನ. ೨೯) ಬೆಳಗಾವಿ ಹಾಗೂ ಹಾವೇರಿಯ ಸವಣೂರಿನಲ್ಲಿ ಪ್ರತಿಭಟಿಸಿದ್ದು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗಿದೆ. ಬೆಳಗಾವಿಯಲ್ಲಿ ಹೆದ್ದಾರಿ ತಡೆದು ಆಕ್ರೋಶವನ್ನು ಹೊರಹಾಕಲಾಗಿದೆ.
ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕರವೇ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಇದಾಗಿದ್ದು, ಕೆಲವು ಕಾಲ ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ಎಂಇಎಸ್, ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಲಾಯಿತು.
ಮಹಾರಾಷ್ಟ್ರ ಸರ್ಕಾರ ಮೊದಲು ತನ್ನ ನೆಲದ ಕನ್ನಡ ಭಾಷಿಕ ಪ್ರದೇಶಗಳನ್ನು ಅಭಿವೃದ್ಧಿ ಮಾಡಬೇಕು. ಮಹಾರಾಷ್ಟ್ರದ ಅನೇಕ ಕನ್ನಡ ಭಾಷಿಕ ಪ್ರದೇಶಗಳ ಅಭಿವೃದ್ಧಿಯು ಇನ್ನೂ ಸಾಧ್ಯವಾಗಿಲ್ಲ. ಅದರ ನಡುವೆ ಕರ್ನಾಟಕದ ಪ್ರದೇಶಗಳನ್ನು ಕೇಳುತ್ತಿರುವ ಮಹಾರಾಷ್ಟ್ರ ನಾಯಕರ ವರ್ತನೆ ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.
ಇದನ್ನೂ ಓದಿ | Border Dispute | ಎಂಇಎಸ್ ಪುಂಡರು, ಇನ್ಯಾವುದೇ ಎಸ್ ಪುಂಡರೇ ಇರಲಿ, ತರ್ಲೆ ಮಾಡಿದ್ರೆ ಕಠಿಣ ಕ್ರಮ: ಅಲೋಕ್ ಕುಮಾರ್
ಮಹಾರಾಷ್ಟ್ರ ಗಡಿ ಸಚಿವರ ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದು. ಅನುಮತಿ ನೀಡಿದರೆ ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಹೊರಬೇಕು ಎಂದು ಕರವೇ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಎಂಇಎಸ್ ರದ್ದುಗೊಳಿಸಲು ಆಗ್ರಹ
ಎಂಇಎಸ್ ಸಂಘಟನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಸವಣೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯ ಗಡಿ ಭಾಗದಲ್ಲಿ ಎಂಇಎಸ್ ಪುಂಡಾಟಿಕೆ ಮಿತಿಮೀರಿದೆ. ಇನ್ನು ಮಹಾರಾಷ್ಟ್ರದಲ್ಲಿ ಮರಾಠಿಗರು ಕರ್ನಾಟಕದ ಬಸ್‌ಗಳಿಗೆ ಕಪ್ಪು ಮಸಿ ಬಳಿದಿರುವುದನ್ನು ಕರವೇ ಕಾರ್ಯಕರ್ತರು ಖಂಡಿಸಿದ್ದಾರೆ.
ಸವಣೂರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿವರೆಗೆ ಸಾಗಿ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವಂತೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ | Border Dispute | ಮಹಾರಾಷ್ಟ್ರದ ಸಿದ್ಧನಾಥದಲ್ಲಿ ಮೊಳಗಿತು ಕನ್ನಡದ ಕಹಳೆ; ಗ್ರಾಪಂನಲ್ಲಿ ಕರ್ನಾಟಕಕ್ಕೆ ಸೇರುವ ಠರಾವು ಪಾಸ್