ಬೆಳಗಾವಿ: ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಅಲ್ಲಿನ ಕನ್ನಡಿಗರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದ್ದು, ಕರ್ನಾಟಕ ರಾಜ್ಯಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ (Border Dispute) ಇರುವ ಬೆನ್ನಲ್ಲೇ ಅವರ ರಾಜ್ಯಕ್ಕೆ ಹೋಗಿ ಕರವೇ ಆಹ್ವಾನ ನೀಡಿದೆ.
ಈ ನಿಮಿತ್ತ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬಾಲಗಾಂವ ಗ್ರಾಮಕ್ಕೆ ತೆರಳಿರುವ ಕರವೇ ಕಾರ್ಯಕರ್ತರು, ಅಲ್ಲಿಯ ಕನ್ನಡಿಗರನ್ನು ಕರ್ನಾಟಕಕ್ಕೆ ಆಹ್ವಾನಿಸಿದರು.
ಮೂಲಭೂತ ಸೌಕರ್ಯ ವಂಚಿತ ಜತ್ತ ತಾಲೂಕಿನ 42 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಅಲ್ಲಿ ಹೋರಾಟ ಆರಂಭವಾಗಿದೆ. ಕುಡಿಯಲು ಸಮರ್ಪಕ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸುವಂತೆ ಪ್ರತಿಭಟನೆಗಳು ನಡೆದಿವೆ. ಅಲ್ಲದೆ, ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಗ್ರಾಪಂಗಳಲ್ಲಿ ಠರಾವು ಪಾಸ್ ಮಾಡಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಕಾಗವಾಡದಿಂದ ಬಾಲಗಾಂವ ಗ್ರಾಮಕ್ಕೆ ತೆರಳಿದ ಕರವೇ ಕಾರ್ಯಕರ್ತರು ಆಹ್ವಾನ ನೀಡಿದರು. ಕಾಗವಾಡ ತಾಲೂಕು ಕರವೇ ಅಧ್ಯಕ್ಷ ಸಿದ್ದು ಒಡೆಯರ್ ನೇತೃತ್ವದಲ್ಲಿ ಭೇಟಿ ನೀಡಿದ ಕಾರ್ಯಕರ್ತರು, “ಕರ್ನಾಟಕಕ್ಕೆ ಬನ್ನಿ” ಎಂದು 42 ಗ್ರಾಮದ ಜನರಿಗೆ ಆಹ್ವಾನ ನೀಡಿದ್ದಾರೆ. ತಾಯಿ ಭುವನೇಶ್ವರಿ ದೇವಿಯ ಫೋಟೊವನ್ನು ನೀಡುವ ಮೂಲಕ ಆಮಂತ್ರಿಸಿದ್ದಾರೆ. ಈ ವೇಳೆ ಮಹಾರಾಷ್ಟ್ರದಲ್ಲಿ ತಮಗೆ ಉಂಟಾಗಿರುವ ಸಂಕಷ್ಟಗಳ ಬಗ್ಗೆ ಅಳಲು ತೋಡಿಕೊಂಡರು.
ಇದನ್ನೂ ಓದಿ | Border Dispute | ಗಡಿ ರಕ್ಷಣೆ ಆಯೋಗದ ಮೊದಲ ಸಭೆ ನಡೆಸಿದ ಸಿಎಂ ಬೊಮ್ಮಾಯಿ; ಈ ವಾರದಲ್ಲಿ ಸರ್ವಪಕ್ಷ ಸಭೆಯ ಭರವಸೆ