Site icon Vistara News

Border Dispute | ಲಾಥೂರ್‌, ಸೊಲ್ಲಾಪುರ, ಕೊಲ್ಹಾಪುರವನ್ನೂ ಕರ್ನಾಟಕಕ್ಕೆ ಸೇರಿಸಿ: ಕನ್ನಡಪರ ಸಂಘಟನೆಗಳ ಪ್ರತಿಭಟನೆ

karave in chikkodi ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ

ಚಿಕ್ಕೋಡಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ವಾದ-ಪ್ರತಿವಾದಗಳು ಜೋರಾಗಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಭಾಗದ ತಾಲೂಕುಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಕೂಗು ಜೋರಾಗಿದೆ. ಈ ಸಂಬಂಧ ವಿವಿಧ ಕನ್ನಡಪರ ಸಂಘಟನೆ ಹಾಗೂ ಕರವೇ ಕಾರ್ಯಕರ್ತರು ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಪ್ರತಿಭಟನೆ ನಡೆಸಿದ್ದಾರೆ.

karave in chikkodi ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ

ಮಹಾರಾಷ್ಟ್ರದ ಲಾಥೂರ್‌, ಸೊಲ್ಲಾಪುರ, ಕೊಲ್ಹಾಪುರ ಜಿಲ್ಲೆಗಳು ಹಾಗೂ ಸಾಂಗ್ಲಿಯಲ್ಲಿರುವ ಜತ್ತ ತಾಲೂಕಿನ ಭಾಗಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಜಿಲ್ಲೆಯ ಅಥಣಿ ಪಟ್ಟಣದ ಹಲ್ಯಾಳ ವೃತ್ತದಲ್ಲಿ ಕನ್ನಡಪರ ಸಂಘಟನೆಯವರು ಪ್ರತಿಭಟನೆ ನಡೆಸಿದ್ದಾರೆ.

ಅಥಣಿ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ಕೈಗೊಂಡಿರುವ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರಿಗೆ ಕನ್ನಡ ಶಾಲು ಹಾಕಿ, ಧ್ವಜ ಹಿಡಿಸಿದರು. ಈ ಮೂಲಕ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ವಾಸವುಳ್ಳ ಪ್ರಾಂತ್ಯಗಳು ನಮ್ಮ ಕರ್ನಾಟಕಕ್ಕೇ ಸೇರಿದ್ದು ಎಂಬ ಸಂದೇಶವನ್ನು ರವಾನಿಸಿದರು.

ಇದನ್ನೂ ಓದಿ | Border Dispute | ಮಹಾರಾಷ್ಟ್ರ ಕನ್ನಡಿಗರಿಗೆ ಕರವೇ ಬೆಂಬಲ; ತಾಯಿ ಭುವನೇಶ್ವರಿ ಫೋಟೊ ನೀಡಿ ರಾಜ್ಯಕ್ಕೆ ಆಹ್ವಾನ

ಶಿಂಧೆ ಭಾವಚಿತ್ರಕ್ಕೆ ಚಪ್ಪಲಿ ಹಾರ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಭಾವಚಿತ್ರಕ್ಕೆ ಚಪ್ಪಲಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ ಕನ್ನಡಿಗರು, ಕನ್ನಡಿಗರ ಭಾವನೆಗಳನ್ನು ಕೆಣಕಬಾರದು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಎಂಇಎಸ್, ಶಿವಸೇನೆ ಮತ್ತು ಮರಾಠಿ ಪುಂಡರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

karave in chikkodi ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ

ಮಹಾರಾಷ್ಟ್ರ ಸರ್ಕಾರಕ್ಕೆ ಧಿಕ್ಕಾರ
ಗಡಿ ವಿವಾದವನ್ನು ಹುಟ್ಟುಹಾಕಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಕರವೇ ಕಾರ್ಯಕರ್ತರು ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದ ಗೂಂಡಾ ಸರ್ಕಾರ ಎಂದು ಕಿಡಿಕಾರಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂಧೆಗೆ ಧಿಕ್ಕಾರ ಕೂಗಿದ್ದಾರೆ.

ಜತ್ತ-ಜಾಂಬೋಟಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಸುಮಾರು ಅರ್ಧ ಗಂಟೆಯವರೆಗೂ ರಸ್ತೆ ತಡೆ ನಡೆಸಲಾಗಿದೆ. ಕಾಗವಾಡ ಪೊಲೀಸರಿಂದ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾಗವಾಡ ಕರವೇ ಅಧ್ಯಕ್ಷ ಸಿದ್ದು ಒಡೆಯರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಇದನ್ನೂ ಓದಿ | Border Dispute | ಗಡಿ ರಕ್ಷಣೆ ಆಯೋಗದ ಮೊದಲ ಸಭೆ ನಡೆಸಿದ ಸಿಎಂ ಬೊಮ್ಮಾಯಿ; ಈ ವಾರದಲ್ಲಿ ಸರ್ವಪಕ್ಷ ಸಭೆಯ ಭರವಸೆ

Exit mobile version