ಬೆಳಗಾವಿ: ನಗರದಲ್ಲಿ ಮಹಾಮೇಳಾವ್ ಆಯೋಜನೆಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸರು ಅನುಮತಿ ನೀಡದ್ದನ್ನು ವಿರೋಧಿಸಿ ಮಹಾರಾಷ್ಟ್ರದ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು, ಮಹಾರಾಷ್ಟ್ರದ ಶಿನೋಳ್ಳಿ ಗ್ರಾಮದ ಬಳಿ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಿದರು. ಇದರಿಂದ ಗಡಿ ಭಾಗದಲ್ಲಿ (Border Dispute) ಸುಮಾರು ಮೂರು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡದ ಪೊಲೀಸರು ಹಾಗೂ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಮಹಾರಾಷ್ಟ್ರದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಇದಕ್ಕೆ ಎಂಇಎಸ್ ಕಾರ್ಯಕರ್ತರೂ ಸಾಥ್ ನೀಡಿದ್ದು ಕಂಡುಬಂತು. ಮಹಾ ಪುಂಡರ ಪುಂಡಾಡಿಕೆಗೆ ಕರ್ನಾಟಕ-ಮಹಾರಾಷ್ಟ್ರ ಮಾರ್ಗದಲ್ಲಿ ಕಿ.ಮೀಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಹಾರಾಷ್ಟ್ರ ಪೊಲೀಸರ ಮನವೊಲಿಕೆ ನಂತರ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದಿದ್ದರಿಂದ ವಾಹನ ಸಂಚಾರ ಪುನರಾರಂಭವಾಯಿತು.
ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್ ಕಾರ್ಯಕರ್ತರು ನಿರ್ಧರಿಸಿದ್ದರು. ಇದಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾಗ ಮೊದಲಿಗೆ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಬೆಳಗಾವಿ ಗಡಿ ಭಾಗದಲ್ಲಿ ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಪ್ರವೇಶಕ್ಕೆ ಪೊಲೀಸರು ತಡೆಯೊಡ್ಡಿ ಹಿಮ್ಮೆಟ್ಟಿಸಿದ್ದರು. ಹೀಗಾಗಿ ಮಹಾ ವಿಕಾಸ ಅಘಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯದ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಠಾಣೆಯಿಂದ ಹೊರಬರುತ್ತಿದ್ದಂತೇ ಬಾಲಬಿಚ್ಚಿದ ಎಂಇಎಸ್ ಕಾರ್ಯಕರ್ತರು
ಬೆಳಗಾವಿ: ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದಂತೇ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಬಾಲ ಬಿಚ್ಚಿದ್ದಾರೆ. ಬೆಳಗಾವಿ-ಬೀದರ್ ಸೇರಿ ಇತರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗುವ ಮೂಲಕ ಉದ್ಧಟತನ ಮೆರೆದಿದ್ದಾರೆ.
ಸೋಮವಾರ ಬೆಳಗ್ಗೆ ಮಹಾಮೇಳಾವ್ ಮಾಡಲು ಹೋಗುತ್ತಿದ್ದಾಗ ಎಂಇಎಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಐದು ಗಂಟೆಗಳ ಕಾಲ ಎಪಿಎಂಸಿ ಠಾಣೆಯಲ್ಲಿ ಇರಿಸಿಕೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಎಪಿಎಂಸಿ ಠಾಣೆಯಿಂದ ಹೊರಬರುತ್ತಿದ್ದಂತೆ ಮುಖಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ | Border Dispute | ಎಂಇಎಸ್ ಮಹಾಮೇಳಾವ್‌ಗೆ ರಾಜ್ಯ ಸರ್ಕಾರ ಬ್ರೇಕ್; ನಿಪ್ಪಾಣಿ ಗಡಿಗೆ ಬಂದಿದ್ದ ಮಹಾ ನಾಯಕರ ಹಿಮ್ಮೆಟ್ಟಿದ ಪೊಲೀಸರು