ಬೆಳಗಾವಿ: ಇಲ್ಲಿನ ಗಡಿಭಾಗದಲ್ಲಿ (Border dispute) ಕೆಲ ಮರಾಠಿಗರ ಪುಂಡಾಟ ಮುಂದುವರಿದಿದ್ದು, ಬಸ್‌ಗೆ ಮಸಿ ಬಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕದ ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆಯುತ್ತಿರುವುದು ಈಗ ರಾಜ್ಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಅಖಿಲ ಭಾರತೀಯ ಮರಾಠ ಸಂಘದ ಕಾರ್ಯಕರ್ತರು ಮಸಿ ಬಳಿದು ಪುಂಡಾಟ ಮೆರೆದಿದ್ದು, ಮಹಾರಾಷ್ಟ್ರ ಬಸ್‌ಗಳಿಗೂ ಕಪ್ಪು ಮಸಿ ಬಳಿಯುವ ಭೀತಿ ಹಿನ್ನೆಲೆ ಏಕಾಏಕಿ 300ಕ್ಕೂ ಅಧಿಕ ಬಸ್‌ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಗಿತ ಮಾಡಿದೆ. ಇತ್ತ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಬಸ್‌ಗಳು ತೆರಳುತ್ತಿವೆ.
ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಮಸಿ ಬಳಿದ ಪ್ರಕರಣ ನಡೆಯುತ್ತಿದ್ದಂತೆ ಕರ್ನಾಟಕದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ನಿಪ್ಪಾಣಿಯ ಬಸ್ ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಒಂದು ಡಿಆರ್ ತುಕಡಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದ ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸರು ಕ್ರಮ ವಹಿಸಿದ್ದಾರೆ.
ಒಂದಿಂಚೂ ನೆಲವನ್ನು ಬಿಡುವುದಿಲ್ಲ
ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ನೆಲವನ್ನು ಬಿಡುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಕರ್ನಾಟಕದ ಬಸ್ ತಡೆಹಿಡಿದು ಕಪ್ಪು ಮಸಿಯನ್ನು ಬಳಿದಿದ್ದಾರೆ. ನಿಪ್ಪಾಣಿ – ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಮಸಿ ಬಳಿದರು. ಬಸ್ಸಿನ ಮೇಲೆ ಜೈ ಮರಾಠ ಎಂದು ಬರೆದಿದ್ದರು.
ಕನ್ನಡಪರ ಹೋರಾಟಗಾರರ ಬೆನ್ನು ಬಿದ್ದ ಪೊಲೀಸರು
ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ ಹಿನ್ನೆಲೆ ಪೊಲೀಸರು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಬೆನ್ನು ಬಿದ್ದಿದ್ದಾರೆ. ಮಹಾರಾಷ್ಟ್ರದ ಬಸ್‌ಗಳಿಗೆ ಮಸಿ ಬಳಿಯದಂತೆ ಹೋರಾಟಗಾರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಜನಸಂಚಾರಕ್ಕೆ ಯಾವುದೇ ರೀತಿ ನಿರ್ಬಂಧ ಹೇರದಂತೆ ಕಾನೂನು ಕೈಗೆತ್ತಿಕೊಳ್ಳದಂತೆ ತಾಕೀತು ಮಾಡಿದ್ದಾರೆ. ಕರವೇ ಶಿವರಾಮೇಗೌಡ ಬಣ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿ ಸೇರಿ ಹಲವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Border dispute | ರಾಜ್ಯದ ಬಸ್ ಅಡ್ಡಗಟ್ಟಿ ಪುಂಡಾಟ ಮೆರೆದ ಮಹಾ ಪುಂಡರು, ಬೊಮ್ಮಾಯಿ ವಿರುದ್ಧ ಪ್ರತಿಭಟನೆ