ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು (Border Dispute) ದಿನೇ ದಿನೆ ಕಾವೇರತೊಡಗಿದ್ದು, ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಜಿಲ್ಲೆಗಳ ತಾಲೂಕಿನಲ್ಲಿ ವಾಸವಿರುವ ಕನ್ನಡಿಗರು ಕರ್ನಾಟಕಕ್ಕೆ ಸೇರ್ಪಡೆಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಆ ಭಾಗಗಳಲ್ಲಿ ಕನ್ನಡದ ಕಹಳೆ ಮೊಳಗುತ್ತಿದ್ದು, ಈಗ ಅಲ್ಲಿನ ಸಿದ್ಧನಾಥ ಗ್ರಾಮದ ಜನ ಕನ್ನಡ ಡಿಂಡಿಮವನ್ನು ಬಾರಿಸಿದ್ದಾರೆ. ತಮ್ಮನ್ನು ಕರ್ನಾಟಕಕ್ಕೇ ಸೇರಿಸಿ ಎಂದು ಒಕ್ಕೊರಲಾಗಿ ಆಗ್ರಹಿಸಿದ್ದಾರೆ.
ಕರ್ನಾಟಕಕ್ಕೆ ಸೇರ್ಪಡೆಯಾಗುವ ಬಗ್ಗೆ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಿದ್ಧನಾಥ ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್ ಮಾಡಲಾಗಿದೆ. ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರು ಒದಗಿಸಬೇಕು. ಮಹಿಶಾಳ ಏತ ನೀರಾವರಿ ಯೋಜನೆ ಜಾರಿಗೊಳಿಸುವುದು ಕನಸೇ ಆಗಿದೆ. ಶಿಕ್ಷಣ, ಕೃಷಿ ಹಾಗೂ ನೀರಾವರಿ ಸೌಲಭ್ಯದಿಂದ ನಮ್ಮನ್ನು ವಂಚಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ಗಡಿಯಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಈ ಸಿದ್ಧನಾಥ ಗ್ರಾಮವಿದ್ದು, ತಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಕೈಯಲ್ಲಿ ಕನ್ನಡ ಬಾವುಟ ಹಿಡಿದು, ಕನ್ನಡ ಶಲ್ಯ ಧರಿಸಿ ಕನ್ನಡಪರ ಘೋಷಣೆಗಳನ್ನು ಗ್ರಾಮಸ್ಥರು ಕೂಗಿದ್ದಾರೆ. ತಮಗೆ ನ್ಯಾಯ ಬೇಕು, ಮೂಲ ಸೌಕರ್ಯ ಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Border Dispute | ಸುಪ್ರೀಂನಲ್ಲಿ ಏನೇ ತೀರ್ಪು ಬರಲಿ, ಸುರಕ್ಷತೆ ಆದ್ಯತೆಯಾಗಲಿ; ಕರ್ನಾಟಕ- ಮಹಾರಾಷ್ಟ್ರ ಪೊಲೀಸರ ತೀರ್ಮಾನ