ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ (Border Dispute) ಹಿನ್ನೆಲೆಯಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸಹೋದರನ ಪುತ್ರ, ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಸೋಮವಾರ ರಾತ್ರಿ ಸದ್ದಿಲ್ಲದೆ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಹಾರಾಷ್ಟ್ರ ನಾಯಕರು ಮಾಡಿದ್ದಾರೆ.
ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಪವಾರ್ ಬೆಳಗಾವಿ ಭೇಟಿ ನೀಡಿದ್ದಾರೆನ್ನಲಾಗಿದೆ. ಕೊಲ್ಲಾಪುರ- ಕುಗನೊಳ್ಳಿ ಮಾರ್ಗವಾಗಿ ರೋಹಿತ್ ಬೆಳಗಾವಿಗೆ ಆಗಮಿಸಿದ್ದಾರೆ. ಅಲ್ಲದೆ, ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ್ ದಳವಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ರೋಹಿತ್ ಪವಾರ್ ಭೇಟಿ ನೀಡಿದ್ದಾರೆ. ಇದೇ ವೇಳೆ ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ಗೆ ತುತ್ತಾಗಿದ್ದ 11 ಎಂಇಎಸ್ ಕಾರ್ಯಕರ್ತರ ಹೆಸರಲ್ಲಿ ಹಿಂಡಲಗಾ ಗ್ರಾಮದಲ್ಲಿ ನಿರ್ಮಿಸಲಾಗಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ | Mahadayi issue | ಮಹದಾಯಿ ಸಮಸ್ಯೆಗೆ ಸೋನಿಯಾ ಗಾಂಧಿಯೇ ಕಾರಣ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಅಲ್ಲಿಂದ ಯಳ್ಳೂರ ಗ್ರಾಮದಲ್ಲಿರುವ ಮಹಾರಾಷ್ಟ್ರ ಹೈಸ್ಕೂಲ್‌ಗೆ ರೋಹಿತ್ ಭೇಟಿ ನೀಡಿ ಕೆಲಕಾಲ ಚರ್ಚೆ ನಡೆಸಿದ್ದಾರೆ. ಎನ್‌ಸಿಪಿ ಶಾಸಕರಿಗೆ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದೆ ರೋಹಿತ್ ಬೆಳಗಾವಿಗೆ ಬಂದಿದ್ದಾರೆ. ಆದರೆ, ಈ ವೇಳೆ ಯಾವ ಮಾತುಕತೆ ನಡೆಸಿದ್ದಾರೆ? ಸಭೆಯನ್ನು ನಡೆಸಿದ್ದಾರೆಯೇ? ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಿಲ್ಲ. ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದೆ.
ಕನ್ನಡ ಪರ ಸಂಘಟನೆಗಳ ಅಸಮಾಧಾನ
ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ನಾಯಕರು ಹುಲಿಯಂತೆ ಮಾತನಾಡಿ, ನರಿಯಂತೆ ವರ್ತನೆ ಮಾಡುತ್ತಿದ್ದಾರೆ. ರೋಹಿತ್ ಪವಾರ್ ಸೋಮವಾರ ರಾತ್ರಿ ಕಳ್ಳರಂತೆ ಬೆಳಗಾವಿಗೆ ಬಂದು ಹೋಗಿದ್ದಾರೆ. ಇದು ಸೌಜನ್ಯ, ಸಭ್ಯತೆ ಮೀರಿದ ವರ್ತನೆಯಾಗಿದೆ. ರಾಜಕಾರಣದಲ್ಲಿ ಯಾವಾಗಲೂ ನೇರಾ ನೇರ ಇರಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿ ಪ್ರವೇಶಕ್ಕೆ 21 ಚೆಕ್ ಪಾಯಿಂಟ್‌ಗಳಿವೆ. ಆದರೆ, ಬೆಳಗಾವಿಗೆ ಕಳ್ಳರಂತೆ ಬಂದು ಹೋಗಿದ್ದರಿಂದ ರೋಹಿತ್ ಪವಾರ್ ಮರ್ಯಾದೆ ಹೋಗಿದೆ. ಬೆಳಗಾವಿಗೆ ಬರುವುದಾದರೆ ಹೇಳಿ ಬರಲಿ, ಚೆನ್ನಮ್ಮ ವೃತ್ತದಲ್ಲಿ ನಿಂತು ಮಾತನಾಡಲಿ. ಗಡಿ ವಿವಾದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಲಿ, ನಮ್ಮ ನಿಲುವನ್ನೂ ನಾವು ಹೇಳುತ್ತೇವೆ. ಆದರೆ, ಹೀಗೆ ಕದ್ದುಮುಚ್ಚಿ ಬರುವುದು ತಪ್ಪು ಎಂದು ಚಂದರಗಿ ಹೇಳಿದ್ದಾರೆ.
ಇದನ್ನೂ ಓದಿ| Basavaraja Bommai | ಮೂಢನಂಬಿಕೆ ನಂಬಲ್ಲ, ಚಾಮರಾಜ ನಗರ ಭೇಟಿಯಿಂದ ಶುಭವಾಗುತ್ತೆ ಎಂದ ಬೊಮ್ಮಾಯಿ