ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ದಿನೇ ದಿನೆ ತಾರಕಕ್ಕೇರುತ್ತಿದ್ದು, ಪ್ರತಿಭಟನೆಗಳು, ಆಕ್ರೋಶಗಳು ಹೆಚ್ಚತೊಡಗಿವೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಎರಡು ಬಣಗಳು ಸಹ ಅತಿರೇಕದಿಂದ ವರ್ತನೆ ಮಾಡುತ್ತಿವೆ. ಇದೀಗ ಬುಧವಾರ (ಡಿ.೭) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆಯ ಕಾರ್ಯಕರ್ತರು ಮಹಾರಾಷ್ಟ್ರದ ಮೀರಜ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕುವ ಮೂಲಕ ಉದ್ದಟತನವನ್ನು ಪ್ರದರ್ಶನ ಮಾಡಿವೆ.
ಜತ್ತ ತಾಲೂಕಿನ ಹಳ್ಳಿಗರು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅವರಿಗೆ ಇಷ್ಟವಿದ್ದರೆ ಕರ್ನಾಟಕಕ್ಕೆ ಸೇರ್ಪಡೆಯಾಗಲಿ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಬುಧವಾರ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮತ್ತೆ ಬಸ್‌ಗೆ ಮಸಿ ಬಳಿದ ಮಹಾ ಪುಂಡರು
ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಜಯಪುರಕ್ಕೆ ಬರುತ್ತಿದ್ದ ಸಾರಿಗೆ ಬಸ್‌ಗೆ ಮರಾಠಿ ಪುಂಡರು ಮಸಿ ಬಳಿದಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಮಹಾರಾಷ್ಟ್ರದ ಭಾರಾಮತಿ ಬಸ್ ನಿಲ್ದಾಣದಲ್ಲಿಯೂ ಕರ್ನಾಟಕ ಬಸ್‌ಗೆ ಮಸಿ ಬಳಿಯಲಾಗಿದೆ. ಹಳಿಯಾಳ ಡಿಪೋಗೆ ಸೇರಿದ KA25 F 3428 ಸಂಖ್ಯೆಯ ಬಸ್‌ಗೆ ಕಪ್ಪು ಮಸಿಯನ್ನು ಬಳಿಯಲಾಗಿದೆ. ಭಾರಾಮತಿ-ಹಳಿಯಾಳ ಮಧ್ಯೆ ಸಂಚರಿಸುವ ಬಸ್ ಹಿಂಬದಿ, ಪಕ್ಕ ಹಾಗೂ ಮುಂಬದಿಗೆ ಶಿವಸೇನೆ ಪುಂಡರು ಮಸಿಯನ್ನು ಹಾಕಿ ಕಿಡಿಗೇಡಿತನವನ್ನು ಮರೆದಿದ್ದಾರೆ.
ಇದನ್ನೂ ಓದಿ | Border Dispute | ಸಂಸತ್ತಿನಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಸುಳೆ! ಶಾ ಮಧ್ಯಪ್ರವೇಶಕ್ಕೆ ಆಗ್ರಹ
ಭಾರಾಮತಿಯಿಂದ ಬೆಳಗಾವಿ ಬಸ್ ನಿಲ್ದಾಣಕ್ಕೆ ಹಳಿಯಾಳ ಡಿಪೋ ಬಸ್ ಬಂದಿದ್ದು, ಶಿವಸೇನೆ ಪುಂಡರ ಪುಂಡಾಟಿಕೆ ಬಗ್ಗೆ ಬಸ್ ನಿರ್ವಾಹಕ ಭರಮಪ್ಪ ಮಾಹಿತಿ ನೀಡಿದ್ದಾರೆ. ಮಂಗಳವಾರ (ಡಿ. ೭) ರಾತ್ರಿ ಭಾರಾಮತಿ ನಿಲ್ದಾಣದಲ್ಲಿ ಬಸ್ ಅನ್ನು ನಿಲ್ಲಿಸಿದ್ದೆವು. ಈ ವೇಳೆ ಸುಮಾರು 20 ಜನ ಶಿವಸೇನೆ ಕಾರ್ಯಕರ್ತರು ಬಂದು ಕಪ್ಪು ಮಸಿ ಬಳಿದಿದ್ದಾರೆ. ಏಕಾಏಕಿ ಬಂದವರೇ ಕಪ್ಪು ಮಸಿ ಬಳಿದು ಜೈ ಶಿವಾಜಿ ಜೈ ಭವಾನಿ ಎಂದು ಘೋಷಣೆ ಕೂಗಿದ್ದಾರೆ ಎಂದು ಭರಮಪ್ಪ ಮಾಹಿತಿ ನೀಡಿದ್ದಾರೆ.
ಈ ರೀತಿ ಮಾಡುವುದರಿಂದ ಉಭಯ ರಾಜ್ಯಗಳ ಪ್ರಯಾಣಿಕರಿಗೂ ತೊಂದರೆ ಆಗಲಿದೆ. ಅಲ್ಲದೆ, ಮಹಾರಾಷ್ಟ್ರಕ್ಕೆ ತೆರಳುವ ಕರ್ನಾಟಕ ಸಾರಿಗೆ ಸಿಬ್ಬಂದಿಗೆ ಭಯವಾಗುತ್ತಿದೆ ಎಂದು ಭರಮಪ್ಪ ಹೇಳಿದ್ದಾರೆ. ಶಿವಸೇನೆ ಪುಂಡರ ಕೃತ್ಯಕ್ಕೆ ಹಲವು ಕಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕರವೇ ಪ್ರತಿಭಟನೆ
ಕರ್ನಾಟಕ ಬಸ್‌ಗಳ ಮೇಲೆ ಮಹಾರಾಷ್ಟ್ರ ಶಿವಸೇನೆ ಪುಂಡರು ಮಸಿ ಬಳಿದಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಎದುರು ಜಮಾಯಿಸಿದ ಕರವೇ ಶಿವರಾಮೆಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಪುಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ | Border Dispute | ಕರ್ನಾಟಕ ಬಸ್‌ಗೆ ಮತ್ತೆ ಮಸಿ; ಮುಂದುವರಿದ ಠಾಕ್ರೆ ಬಣದವರ ಪುಂಡಾಟಿಕೆ
330 ಬಸ್ ಸೇವೆ ತಾತ್ಕಾಲಿಕ ಸ್ಥಗಿತ
ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ 330 ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಬೆಳಗಾವಿ ವಿಭಾಗದ ಡಿಟಿಒ ಕೆ.ಕೆ. ಲಮಾಣಿ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್‌ಗಳನ್ನು ಗಡಿಯಲ್ಲಿ ನಿಲ್ಲಿಸಲಾಗಿದೆ. ಚಿಕ್ಕೋಡಿ ವಿಭಾಗದಿಂದ 250 ಬಸ್ ಹಾಗೂ ಬೆಳಗಾವಿ ವಿಭಾಗದ 80 ಸೇರಿ ಒಟ್ಟು 330 ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಒಟ್ಟಾರೆಯಾಗಿ ೩೦ ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಪ್ರಯಾಣಿಕರಿಗೆ ತೊಂದರೆ
ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ಜನರ ಪರದಾಡುವಂತಾಗಿದೆ. ಈಗ ಮದುವೆ ಸೀಸನ್ ಇರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮಹಾರಾಷ್ಟ್ರದ ಮೀರಜ್ ಬಸ್ ನಿಲ್ದಾಣದಲ್ಲಿ ಜನರು ಪರದಾಡುತ್ತಿದ್ದಾರೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಜನರು ಪರದಾಡುವಂತಾಗಿದೆ. ಕಾಗವಾಡ, ಅಥಣಿ, ಚಿಕ್ಕೋಡಿ ಭಾಗದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಜನರಿಗೂ ಸಮಸ್ಯೆಯಾಗಿದೆ.
ಇದನ್ನೂ ಓದಿ | Border Dispute | ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕರ್ಣಾಟಕ ಬ್ಯಾಂಕ್ ಫಲಕಕ್ಕೆ ಮಸಿ ಬಳಿದ ಕಿಡಿಗೇಡಿಗಳು