Site icon Vistara News

Border Dispute | ಸವದತ್ತಿಗೆ ಬಂದಿದ್ದ ಮಹಾರಾಷ್ಟ್ರದ 145 ಬಸ್‌ ಸುರಕ್ಷಿತವಾಗಿ ವಾಪಸ್‌: ಬೆಳಗಾವಿ ಪೊಲೀಸರಿಗೆ ಮಹಾ ಧನ್ಯವಾದ

savadatti maharashtra bus ಸವದತ್ತಿ ಯಲ್ಲಮ್ಮ ಜಾತ್ರೆ ಮಹಾರಾಷ್ಟ್ರ ಬಸ್‌

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಕರ್ನಾಟಕದ ಬಸ್‌ಗಳಿಗೆ ಹಾನಿ ಮಾಡುವ, ಮಸಿ ಬಳಿಯುವ ಪ್ರಕರಣಗಳು ದಿನೇ ದಿನೆ ಬೆಳಕಿಗೆ ಬರುತ್ತಲೇ ಇವೆ. ಈ ನಡುವೆ ಮಹಾರಾಷ್ಟ್ರದಿಂದ ಕರ್ನಾಟಕದ ಬೆಳಗಾವಿಯ ಸವದತ್ತಿಗೆ ಬಂದಿದ್ದ ೧೪೫ ಬಸ್‌ಗಳನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸುವ ವ್ಯವಸ್ಥೆಯನ್ನು ಕರ್ನಾಟಕ ಪೊಲೀಸರು ಮಾಡಿದ್ದಾರೆ. ಈ ವ್ಯವಸ್ಥೆಗೆ ತಲೆಬಾಗಿರುವ ಮಹಾರಾಷ್ಟ್ರದ ಎಂಎಸ್‌ಆರ್‌ಟಿಸಿ ಅಧಿಕಾರಿಗಳು, ಧನ್ಯವಾದಗಳನ್ನು ಹೇಳಿದ್ದಾರೆ.

ಹೊಸ್ತಿಲ ಹುಣ್ಣಿಮೆ ಜಾತ್ರೆಗೆ ಸವದತ್ತಿಗೆ 145 ಮಹಾರಾಷ್ಟ್ರ ಬಸ್‌ಗಳು ಬಂದಿದ್ದವು. ಅಲ್ಲಿನ ಭಕ್ತರು ಪ್ರತಿ ವರ್ಷ ಸವದತ್ತಿಗೆ ಭೇಟಿ ನೀಡಿ ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಾರೆ. ವಿಶೇಷ ದಿನಗಳು ಮಾತ್ರವಲ್ಲದೆ, ಸಾಮಾನ್ಯವಾಗಿ ಆಗಾಗ ಸವದತ್ತಿಗೆ ಭೇಟಿ ನೀಡಿ ತಾಯಿ ಯಲ್ಲಮ್ಮ ದೇವಿ ದರ್ಶನವನ್ನು ಪಡೆಯುತ್ತಾರೆ. ಈಗ ಹುಣ್ಣಿಮೆ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮ ದೇವಿ ದೇಗುಲಕ್ಕೆ ಮಹಾರಾಷ್ಟ್ರದ ಭಕ್ತಾದಿಗಳು ಬಸ್‌ ಮೂಲಕ ಬಂದಿದ್ದರು.

ಬೆಳಗಾವಿ ಜಿಲ್ಲಾ ಪೊಲೀಸರಿಗೆ ಧನ್ಯವಾದ
ಮಹಾರಾಷ್ಟ್ರದಿಂದ ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಬಂದಿದ್ದ ಮಹಾರಾಷ್ಟ್ರದ ಬಸ್‌ಗಳನ್ನು ಒಂದೆಡೆ ನಿಲುಗಡೆ ವ್ಯವಸ್ಥೆ ಮಾಡಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಯಾವುದೇ ತೊಂದರೆ ಇಲ್ಲದೆ ಎಂಎಸ್ಆರ್‌ಟಿಸಿಯ ಎಲ್ಲ ಬಸ್‌ಗಳು ಸುರಕ್ಷಿತವಾಗಿ ಮಹಾರಾಷ್ಟ್ರಕ್ಕೆ ವಾಪಸ್ ಆಗಿವೆ. ಇವು ಕೊಲ್ಲಾಪುರ ವಿಭಾಗಕ್ಕೆ ಸೇರಿದ ಬಸ್‌ಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಎಂಎಸ್ಆರ್‌ಟಿಸಿ ಅಧಿಕಾರಿಗಳು ಧನ್ಯವಾದವನ್ನು ಸಮರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ | Border Dispute | ಮಹಾರಾಷ್ಟ್ರದಿಂದ ಕನ್ನಡಿಗರನ್ನು ಓಡಿಸುತ್ತೇವೆ: ಎಂಎನ್‌ಎಸ್‌ ಮುಖಂಡನ ಉದ್ಧಟತನ

Exit mobile version