Site icon Vistara News

Border Dispute | ಕರ್ನಾಟಕದಿಂದ ಮಹಾರಾಷ್ಟ್ರದತ್ತ ಹೊರಟ ಸಾರಿಗೆ ಬಸ್‌; ಇನ್ನೂ ಆರಂಭವಾಗದ ಮಹಾ ಸಂಚಾರ

border dispute ಮಹಾರಾಷ್ಟ್ರ - ಕರ್ನಾಟಕ ಬಸ್‌ ಬೆಳಗಾವಿ - ಚಿಕ್ಕೋಡಿ

ಬೆಳಗಾವಿ: ತಣ್ಣಗಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಸಂಬಂಧ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು ಮುಂದುವರಿದಿರುವ ಮಧ್ಯೆಯೇ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭವಾಗಿದೆ. ತ್ವೇಷಮಯ ವಾತಾವರಣವಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಅತ್ತ ಕಡೆಯಿಂದ ಇನ್ನೂ ಬಸ್‌ ಸಂಚಾರ ಆರಂಭವಾಗಿಲ್ಲ.

ಈ ಮೂಲಕ ಉಭಯ ರಾಜ್ಯಗಳ ಗಡಿ ಭಾಗದ ಜನರಿಗೆ ಇದ್ದ ಸಮಸ್ಯೆಗಳು ಅಲ್ಪಮಟ್ಟಿಗೆ ಬಗೆಹರಿದಂತಾಗಿದೆ. ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪುಂಡರ ಉದ್ಧಟತನಕ್ಕೆ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಶುಕ್ರವಾರದಿಂದ (ಡಿ.೯) ಬೆಳಗಾವಿ, ಚಿಕ್ಕೋಡಿ ವಿಭಾಗದ ಬಸ್ ಸಂಚಾರ ಪುನರಾರಂಭಗೊಂಡಿದೆ. ಬೆಳಗಾವಿ ವಿಭಾಗದಿಂದ 150 ಹಾಗೂ ಚಿಕ್ಕೋಡಿ ವಿಭಾಗದಿಂದ 250 ಬಸ್ ಸಂಚಾರವನ್ನು ಪುನರಾರಂಭ ಮಾಡಲಾಗಿದೆ. ಬೆಳಗಾವಿಯಿಂದ ಮುಂಬೈ, ಠಾಣೆ, ನಾಸಿಕ್, ಪುಣೆ ಔರಂಗಾಬಾದ್, ಮೀರಜ್, ಸಿಂಧದುರ್ಗ‌ಗೆ ಬಸ್‌ಗಳು ಸಂಚಾರವನ್ನು ಆರಂಭಿಸಿವೆ.

ಇದನ್ನೂ ಓದಿ | Item Song | ಬುರ್ಖಾ ಧರಿಸಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಮುಸ್ಲಿಂ ಯುವಕರು; ಕಾಲೇಜಿಂದ ನಾಲ್ವರು ಸಸ್ಪೆಂಡ್

೭೦ ಲಕ್ಷ ರೂಪಾಯಿ ನಷ್ಟ
ಎರಡು ದಿನ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಗಾವಿ- ಚಿಕ್ಕೋಡಿ ವಿಭಾಗಕ್ಕೆ 70 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಚಾಲಕ-ನಿರ್ವಾಹಕರಿಗೆ ಆತ್ಮಸ್ಥೈರ್ಯ
ಮಹಾರಾಷ್ಟ್ರದಲ್ಲಿ ಉದ್ವಿಗ್ನ ವಾತಾವರಣ ಇರುವುದು ಹಾಗೂ ಅಲ್ಲಿ ಮರಾಠಿ ಪುಂಡರಿಂದ ದಾಂಧಲೆಗಳು ಆಗಬಹುದು ಎಂದು ರಾಜ್ಯ ಸಾರಿಗೆಯ ಚಾಲಕರು ಹಾಗೂ ನಿರ್ವಾಹಕರು ಭಯಗೊಂಡಿದ್ದು, ಕರ್ತವ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹಿರಿಯ ಅಧಿಕಾರಿಗಳು, ಇವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದು, ಮಹಾರಾಷ್ಟ್ರ ‌ಸಾರಿಗೆ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ರೀತಿ ಅಲ್ಲಿಯ ಸಾರಿಗೆ ಅಧಿಕಾರಿಗಳ ಜತೆಗೆ ಬೆಳಗಾವಿ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದಿಂದ ಇನ್ನೂ ಬಾರದ ಬಸ್‌
ಈ ಬೆಳವಣಿಗೆ ಮಧ್ಯೆ ಮಹಾರಾಷ್ಟ್ರ ಬಸ್‌ಗಳು ಇನ್ನೂ ಕರ್ನಾಟಕವನ್ನು ಪ್ರವೇಶ ಮಾಡಿಲ್ಲ. ಈ ಬಗ್ಗೆ ಇನ್ನೂ ಅಲ್ಲಿನ ಸಾರಿಗೆ ಅಧಿಕಾರಿಗಳು ನಿರ್ಧಾರ ಮಾಡಿಲ್ಲ. ಮಹಾರಾಷ್ಟ್ರದಿಂದ ಬೆಳಗಾವಿ ‌ವಿಭಾಗಕ್ಕೆ ನಿತ್ಯ 69 ಬಸ್‌ಗಳು ಬರುತ್ತಿದ್ದವು. ಆದರೆ, ಈವರೆಗೂ ಯಾವುದೇ ಬಸ್‌ ಬಂದಿಲ್ಲ ಎಂದು ಮಾಧ್ಯಮಗಳಿಗೆ ಬೆಳಗಾವಿ ವಿಭಾಗದ ಡಿಟಿಒ ಕೆ.ಕೆ ಲಮಾಣಿ ಮಾಹಿತಿ ನೀಡಿದ್ದಾರೆ.

ಗ್ರಾಪಂ ಚುನಾಯಿತ ಮಂಡಳಿ ವಿಸರ್ಜನೆ ಬೆದರಿಕೆ
ಕರ್ನಾಟಕಕ್ಕೆ ಸೇರುತ್ತೇವೆ ಎಂದು ಮಹಾರಾಷ್ಟ್ರದಲ್ಲಿರುವ ಜತ್ತ, ಅಕ್ಕಲಕೋಟ ತಾಲೂಕಿನ 11 ಗ್ರಾಮಗಳಿಂದ ಠರಾವು ಹೊರಡಿಸಿರುವ ಬೆನ್ನಲ್ಲೆ ಅಲ್ಲಿನ ಸರ್ಕಾರ ಕನ್ನಡಿಗರಿಗೆ ಬೆದರಿಕೆಯೊಡ್ಡಿದೆ. ಇಂತಹ ಚಟುವಟಿಕೆಯನ್ನು ನಿಲ್ಲಿಸದಿದ್ದರೆ ಗ್ರಾಮ ಪಂಚಾಯಿತಿ ಚುನಾಯಿತ ಮಂಡಳಿಯನ್ನು ವಿಸರ್ಜನೆ ಮಾಡಲಾಗುವುದು ಹಾಗೆಯೇ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಆದರೆ, ಇದಕ್ಕೆ ಸಡ್ಡು ಹೊಡೆದಿರುವ ಕನ್ನಡ ಭಾಷಿಕರು ನೇಣು ಹಾಕಿದರೂ ನಮ್ಮ ಹಕ್ಕಿಗಾಗಿ ಹೋರಾಟವನ್ನು ನಿಲ್ಲಿಸಲಾರೆವು. ಅಭಿವೃದ್ಧಿ ಮಾಡದಿದ್ದರೆ ನಾವು ಕರ್ನಾಟಕಕ್ಕೆ ಹೋಗಿಯೇ ಹೋಗುತ್ತೇವೆ ಎಂದು ಸಂದೇಶವನ್ನು ರವಾನೆ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ತಾಲೂಕಿನ ತಡವಳ ಗ್ರಾಮದಲ್ಲಿ ನಡೆದ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಭೆ ನಡೆಸಿದ್ದಾರೆ.

ಈ ವೇಳೆ ಸಭೆಯಲ್ಲಿ ಮಾತನಾಡಿದ್ದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಆಳಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಹತ್ತೂರೆ, ನನ್ನನ್ನು ಗಲ್ಲಿಗೇರಿಸಿದರೂ ನಮ್ಮ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ. ಕಳೆದ ವಾರವೇ ಕರ್ನಾಟಕ ಸೇರ್ಪಡೆ ಆಗುವ ಬಗ್ಗೆ ಈ ಗ್ರಾಪಂನಿಂದ ಠರಾವು ಪಾಸ್ ಮಾಡಲಾಗಿತ್ತು. ಅಲ್ಲದೆ, ಈ ಬಗ್ಗೆ ಸೊಲ್ಲಾಪುರ ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಸಿಎಂಗೆ ಪತ್ರ ಬರೆದು ಕರ್ನಾಟಕ ಸೇರ್ಪಡೆ ಆಗುವ ನಿರ್ಧಾರಗಳನ್ನು ತಿಳಿಸಲಾಗಿತ್ತು.

ಇದನ್ನೂ ಓದಿ | Border Dispute | ರಾಜ್ಯದ ನೀತಿ-ನಿಲುವನ್ನು ಸ್ಪಷ್ಟಪಡಿಸಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Exit mobile version