ಚಿಕ್ಕೋಡಿ: ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ (Border Dispute) ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎರಡೂ ರಾಜ್ಯಗಳ ಗಡಿ ಭಾಗದ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ಬುಧವಾರ (ನ. ೩೦) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತೀರ್ಪು ಬಂದರೂ ಎರಡೂ ಭಾಗದಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು ಹಾಗೂ ಯಾವುದೇ ವಾಹನಗಳು ಸೇರಿದಂತೆ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಸರ್ಕ್ಯುಟ್ ಹೌಸ್‌ನಲ್ಲಿ ಸಭೆ ನಡೆದಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಗಸ್ತು ತಿರುಗುವ, ಎಲ್ಲ ಕಡೆ ನಿಗಾ ವಹಿಸುವ ಬಗ್ಗೆ ಮಾತುಕತೆಗಳು ನಡೆದಿವೆ.
೩ ಕಡೆ ಮಹಾರಾಷ್ಟ್ರ-ಕರ್ನಾಟಕ ಜಂಟಿ ಚೆಕ್ ಪೋಸ್ಟ್
ಬಳಿಕ ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್, ಕಳೆದ ವಾರ ಕರ್ನಾಟಕದ ಬಸ್‌ಗಳ ಮೇಲೆ ಕಲ್ಲು ತೂರಿ, ಮಸಿಯನ್ನು ಬಳಿಯಲಾಗಿತ್ತು. ಇಂತಹ ಮೂರು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಆಗಿವೆ. ಮುಂದೆ ಈ ರೀತಿಯ ಚಟುವಟಿಕೆ ನಡೆಯಬಾರದು ಹಾಗೂ ಬುಧವಾರ ಗಡಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇರುವುದರಿಂದ ತೀರ್ಪು ಬರುವ ಸಾಧ್ಯತೆ ಇದೆ. ಒಂದು ವೇಳೆ ಅಲ್ಲಿ ಯಾವ ರೀತಿಯಾದಂತಹ ಆದೇಶ ಬಂದರೂ ಈ ಭಾಗದಲ್ಲಿ ಅಹಿತಕರ ಚಟುವಟಿಕೆ ನಡೆಯದಂತೆ ಕ್ರಮ ವಹಿಸಬೇಕಿದೆ. ಅದಕ್ಕಾಗಿ ಸಭೆ ನಡೆಸಲಾಗಿದ್ದು, ಮೂರು ಕಡೆಗಳಲ್ಲಿ ಮಹಾರಾಷ್ಟ್ರ – ಕರ್ನಾಟಕ ಜಂಟಿ ಚೆಕ್ ಪೋಸ್ಟ್ ಅನ್ನು ತೆರೆದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ | Border Dispute | ನಮಗೆ ಮೂಲಸೌಕರ್ಯ ಕೊಟ್ಟರಷ್ಟೇ ಮಹಾರಾಷ್ಟ್ರದಲ್ಲಿರುತ್ತೇವೆ; ಅಕ್ಕಲಕೋಟೆ ಗ್ರಾಮಸ್ಥರ ಖಡಕ್ ವಾರ್ನಿಂಗ್!
೪೦೦ಕ್ಕೂ ಅಧಿಕ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 176 ಬಸ್‌ಗಳು ಸಂಚರಿಸುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಚರ್ಚೆ ನಡೆದಿದ್ದು, ರಾಜ್ಯದಲ್ಲಿಯೂ ಅದೇ ರೀತಿಯಾಗಿ ನೋಡಿಕೊಳ್ಳುವ ಚರ್ಚೆಯು ಸಭೆಯಲ್ಲಿ ನಡೆದಿದೆ. ಅಧಿವೇಶನ ಸುಸೂತ್ರವಾಗಿ ನಡೆಯಬೇಕು. ಈಗ ಚುನಾವಣೆ ವರ್ಷ ಇರುವುದರಿಂದ ಕಿಡಿಗೇಡಿಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಅವುಗಳಿಗೆ ಅವಕಾಶವನ್ನು ಮಾಡಿಕೊಡಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದರು.
ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ನಾವು ಬಿಡುವುದಿಲ್ಲ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದರೆ ಅವಕಾಶವನ್ನು ಕೊಡಲಾರೆವು. ಅವರು ಖಾಸಗಿ ಕಾರ್ಯಕ್ರಮಗಳಿಗೆ ಬಂದರೆ ನಮ್ಮ ಅಭ್ಯಂತರ ಇಲ್ಲ. ಬೆಳಗಾವಿಯಲ್ಲಿ 21 ಚೆಕ್ ಪೋಸ್ಟ್ ಇದ್ದು, ಗಡಿ ಭಾಗದ ಎಲ್ಲ ಎಸ್‌ಪಿಗಳಿಗೆ ನಿರ್ದೇಶನ ನೀಡಿದ್ದೇವೆ. ನಮ್ಮ ಭಾಗದಲ್ಲಿ ಮಂಗಳವಾರ (ನ. ೨೯) ಸಂಜೆಯಿಂದಲೇ ಗಸ್ತು ನಡೆಯಲಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.
ಸಭೆಗೆ ಬಾರದ ಮಹಾರಾಷ್ಟ್ರ ಹಿರಿಯ ಅಧಿಕಾರಿಗಳು
ಸಭೆಗೆ ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿಲ್ಲ. ಆನ್‌ಲೈನ್ ಮುಖಾಂತರ ಕೊಲ್ಲಾಪುರ ಎಸ್‌ಪಿ, ಸಾಂಗ್ಲಿ ಎಸ್‌ಪಿ, ಸಿಂಧದುರ್ಗ ಎಸ್‌ಪಿ, ಸೊಲ್ಲಾಪುರ ಎಸ್‌ಪಿ ಭಾಗಿಯಾಗಿದ್ದರು. ಉತ್ತರ ವಲಯ ಐಜಿಪಿ, ಬೆಳಗಾವಿ ಎಸ್‌ಪಿ, ನಗರ ಪೊಲೀಸ್ ಆಯುಕ್ತ, ಇಬ್ಬರು ಡಿಸಿಪಿ, ಆರು ಡಿಎಸ್‌ಪಿ ಭಾಗಿಯಾಗಿದ್ದರು. ಅಲ್ಲದೆ, ಬೀದರ್, ವಿಜಯಪುರ, ಕಲಬುರಗಿ ಎಸ್‌ಪಿಗಳು ಸಹ ಇದೇ ವೇಳೆ ಆನ್‌ಲೈನ್‌ನಲ್ಲಿ ಭಾಗಿಯಾಗಿದ್ದರು.
ಗುಲಾಬಿ ಹೂ ನೀಡಿದ ಅಲೋಕ್ ಕುಮಾರ್
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ, ಬಸ್ ಚಾಲಕ, ನಿರ್ವಾಹಕರಿಗೆ ಎಡಿಜಿಪಿ ಅಲೋಕ್ ಕುಮಾರ್ ಗುಲಾಬಿ ಹೂವು ನೀಡುವ ಮೂಲಕ “ನಿಮ್ಮೊಂದಿಗೆ ನಾವಿದ್ದೇವೆ” ಎಂದು ಧೈರ್ಯ ತುಂಬಿದರು.
ಇದನ್ನೂ ಓದಿ | Border Dispute | ಬೆಳಗಾವಿಗೆ ಬನ್ನಿ ಎಂದು ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ ಬರೆದ MES; ಉದ್ದಟತನ ಪ್ರದರ್ಶನ