ದಾವಣಗೆರೆ: ಕೃಷಿಗೆ ನೀರಾವರಿ ಬಹಳ ಅವಶ್ಯಕ. ಈ ಹಿನ್ನೆಲೆಯಲ್ಲಿ ಬಾವಿ ತೆಗೆಸುವುದು ಅಥವಾ ಬೋರ್‌ವೆಲ್ ಕೊರೆಸುವ (Borewell irrigation) ಮೂಲಕ ರೈತರು ನೀರಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇಲ್ಲೊಂದು ಕಡೆ ಕೊರೆಸಿರುವ ಬೋರ್‌ವೆಲ್‌ವೊಂದರಲ್ಲಿ ನೀರು ಹಾಯಿಸುತ್ತಿರುವಾಗ ನೋಡ ನೋಡುತ್ತಿದ್ದಂತೆಯೇ ಒಳಕ್ಕೆ ಹೋಗಿದೆ.
ಜಗಳೂರು ತಾಲೂಕಿನ ರಸ್ತೆ ಮಾಕುಂಟೆ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪರಮೇಶ್ವರ್ ಎನ್ನುವ ರೈತರಿಗೆ ಸೇರಿದ ಬೋರ್ವೆಲ್ ಇದಾಗಿದೆ. ಇವರು ಕಳೆದ ಒಂದು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದರು. ಮೊದಲು ಒಂದು ತಿಂಗಳು ಚೆನ್ನಾಗಿಯೇ ನೀರು ಬಂದಿದ್ದು, ಬಳಿಕ ಬರಿದಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಪೈಪ್ ಹಾಗೂ ಪಂಪ್ ಅನ್ನು ಎತ್ತಿ ಮನೆಯಲ್ಲಿಟ್ಟಿದ್ದರು.
ಈಚೆಗೆ ಉತ್ತಮ ಮಳೆಯಾಗುತ್ತಿರುವುದರಿಂದ ಅಂತರ್ಜಲ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೆ, ಅಕ್ಕಪಕ್ಕದ ಜಮೀನುಗಳಲ್ಲಿನ ಬೋರ್‌ವೆಲ್‌ಗಳಲ್ಲಿ ಭರ್ಜರಿ ಪ್ರಮಾಣದಲ್ಲಿ ನೀರು ಬರುತ್ತಿರುವ ವಿಚಾರ ತಿಳಿದ ಪರಮೇಶ್ವರ್ ಅವರು ತಮ್ಮ ಜಮೀನಿನಲ್ಲಿರುವ ಬೋರ್‌ವೆಲ್‌ಗೆ ಪಂಪ್ ಅಳವಡಿಸಿ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಅದೃಷ್ಟ ಎಂಬಂತೆ ಅದರಿಂದ ನೀರು ಬರತೊಡಗಿದೆ. ಈ ಖುಷಿಗಾಗಿ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ | ದೆಹಲಿ ಮಾದರಿ ಕೊಲೆ | ತಂದೆಯನ್ನು ಕೊಂದು 30 ಚೂರು ಮಾಡಿ ಕೊಳವೆ ಬಾವಿಗೆ ಎಸೆದ ಮಗ!
ಬೋರ್‌ವೆಲ್‌ನಲ್ಲಿ ನೀರು ಯಥೇಚ್ಛವಾಗಿ ಹರಿಯುತ್ತಿರುವುದನ್ನು ನೋಡುತ್ತಿದ್ದ ರೈತರಿಗೆ ಖುಷಿಯಾದರೂ ಕೆಲವೇ ಸೆಕೆಂಡಿನಲ್ಲಿ ಆ ಖುಷಿ ಮರೆಯಾಗಿದೆ. ನೋಡ ನೋಡುತ್ತಿದ್ದಂತೆ ಬೋರ್‌ವೆಲ್ ಕುಸಿದು ಪಾತಾಳಕ್ಕೆ ಇಳಿದಿದೆ. ಈ ಮೂಲಕ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕೇಸಿಂಗ್ ಪೈಪ್ ಸಮಸ್ಯೆ?
ಬೋರ್ ಕೊರೆಸಿದ ಮೇಲೆ ಕೇಸಿಂಗ್ ಪೈಪ್ ಹಾಕದೇ ಪಂಪ್‌ಸೆಟ್ ಇಳಿಸಿದರೆ ಇಂತಹ ಅವಘಡ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಪರಮೇಶ್ವರ್ ತಾವು ಕೇಸಿಂಗ್ ಪೈಪ್ ಹಾಕಿದ್ದಾಗಿ ತಿಳಿಸಿದ್ದಾರೆ. ಇನ್ನು ಗಟ್ಟಿ ಜಾಗ ಸಿಗುವವರೆಗೆ ಇಲ್ಲವೇ ೩೦ರಿಂದ ೪೦ ಅಡಿಯಷ್ಟು ಎತ್ತರಕ್ಕೆ ಕೇಸಿಂಗ್ ಪೈಪ್ ಹಾಕದೇ ಇದ್ದರೆ ಬೋರ್‌ವೆಲ್ ಪೈಪ್ ಕುಸಿಯುವ ಸಾಧ್ಯತೆ ಇದೆ ಎಂಬ ವಾದವೂ ಇದೆ. ಆದರೆ, ಬೋರ್‌ವೆಲ್ ಕುಸಿಯಲು ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ | Sabarimala yatre | ಮೈಸೂರಿನಿಂದ ತೆರಳಿದ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ: ತಪ್ಪಿಲ್ಲದಿದ್ದರೂ ಹೊಡೆದು ಕೊನೆಗೆ ಕ್ಷಮೆ ಯಾಚನೆ