Site icon Vistara News

ವಾಕಿಂಗ್‌ ಮಾಡುತ್ತಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡ ಯುವ ಕುಸ್ತಿ ಪಟು, ನೋಡನೋಡುತ್ತಿದ್ದಂತೆಯೇ ಸಾವು

kustipatu

ಧಾರವಾಡ: ಗಟ್ಟಿಮುಟ್ಟಾಗಿದ್ದ, ಆರೋಗ್ಯವಂತನಾಗಿದ್ದ ಯುವ ಕುಸ್ತಿಪಟುವೊಬ್ಬರು ಬೆಳಗ್ಗೆ ವಾಕಿಂಗ್‌ ಮಾಡುತ್ತಿದ್ದ ಹೊತ್ತಿನಲ್ಲಿ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡದ ಮದಿಹಾಳದ ಬಳಿ ಈ ಘಟನೆ ನಡೆದಿದೆ. ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ.

ಧಾರವಾಡ ತಾಲೂಕಿನ ದೊಡವಾಡ ಗ್ರಾಮದ ಪೈಲ್ವಾನ್ ಸಂಗಪ್ಪ ಬಳಿಗೇರ್ ಅವರೇ ಮೃತ ವ್ಯಕ್ತಿ. ಅವರು ಇಲ್ಲಿನ ರಸ್ತೆಯೊಂದರ ಅಂಚಿನಲ್ಲಿ ಗೆಳೆಯನ ಜತೆ ವಾಕಿಂಗ್‌ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಅವರು ಕುಸಿದುಬಿದ್ದು ಅಲ್ಲೇ ಪ್ರಾಣ ಕಳೆದುಕೊಂಡರು ಎನ್ನಲಾಗಿದೆ. ಗೆಳೆಯನ ಜತೆ ಮಾತನಾಡುತ್ತಾ ನಡೆಯುತ್ತಿದ್ದ ಅವರು, ಒಮ್ಮೆಗೇ ಮುಗ್ಗರಿಸಿ ಬಿದ್ದಂತೆ ಬಿದ್ದಿದ್ದಾರೆ. ಕೂಡಲೇ ಗೆಳೆಯ ಅವರನ್ನು ಎಬ್ಬಿಸುವ ಪ್ರಯತ್ನ ನಡೆಸಿದರು. ಆದರೆ, ಏನೇ ಮಾಡಿದರೂ ಅವರು ಮತ್ತೆ ಮೇಲೇಳಲಿಲ್ಲ. ಗೆಳೆಯನ ಮುಂದೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಇದು ಅಲ್ಲಿನ ಸಿಸಿಟಿಯಲ್ಲಿ ದಾಖಲಾಗಿದೆ. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.

ಗೆಳೆಯನ ಜತೆ ನಡೆದುಬರುತ್ತಿರುವ ಪೈಲ್ವಾನ್‌ ಸಂಗಪ್ಪ ಬಳಿಗೇರ್‌
ಕ್ಷಣ ಮಾತ್ರದಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡ ಪೈಲ್ವಾನ್‌

ಪೈಲ್ವಾನ್‌ ಸಂಗಪ್ಪ ಬಳಿಗೇರ್‌ ಅವರು ಈ ಭಾಗದಲ್ಲಿ ಕುಸ್ತಿಪಟುವಾಗಿ ಭಾರಿ ಜನಪ್ರಿಯತೆಯನ್ನು ಪಡೆದವರು. ಜತೆಗೆ ಹಲವು ಪ್ರಶಸ್ತಿಗಳನ್ನು ಗೆದ್ದ ಕೀರ್ತಿಯೂ ಅವರಿಗಿದೆ. ಅವರು ಬುಲೆಟ್‌ ಹತ್ತಿ ಹೊರಟರೆಂದರೆ ಎಲ್ಲರೂ ತಿರುಗಿ ನೋಡುತ್ತಿದ್ದರು. ಆ ಮಟ್ಟಿಗೆ ಅವರಿಗೆ ಖದರ್‌ ಇತ್ತು. ಜತೆಗೆ ತುಂಬ ಆರೋಗ್ಯವಂತರಾಗಿಯೇ ಇದ್ದರು ಎನ್ನಲಾಗುತ್ತಿದೆ. ಒಳ್ಳೆಯ ಆಹಾರ, ಉತ್ತಮ ದೇಹದಾರ್ಢ್ಯತೆ ನಿರ್ವಹಿಸಿಕೊಂಡಿದ್ದ ಅವರ ದೈಹಿಕ ತಾಕತ್ತಿನ ಬಗ್ಗೆಯೇ ಚರ್ಚೆ ಇತ್ತು. ಆದರೆ, ಇಷ್ಟೆಲ್ಲ ಇದ್ದರೂ ಕುಸಿದು ಬಿದ್ದ ಒಂದೇಟಿಗೇ ಅವರು ಪ್ರಾಣ ಕಳೆದುಕೊಂಡಿದ್ದು ಅಚ್ಚರಿ ಮೂಡಿಸಿದೆ.

ಹಿಟ್ ಆ್ಯಂಡ್ ರನ್‌: ಬೈಕ್ ಸವಾರ ಸಾವು
ವಿಜಯಪುರ: ತಾಲೂಕಿನ ಹಿಟ್ನಳ್ಳಿಯ ನಾಶಿ ಡಾಬಾದ ಬಳಿ ಮಂಗಳವಾರ ರಾತ್ರಿ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾದ ಹಿನ್ನೆಲೆಯಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ನಾಳ ಗ್ರಾಮದ ಸುಭಾಷ್ ಸೀತಾರಾಮ ರಜಪೂತ ಮೃತಪಟ್ಟಿರುವ ದುರ್ದೈವಿ.

ಅವರು ಬೈಕ್‌ನಲ್ಲಿ ತಮ್ಮ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವು ಸಂಭವಿಸಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Kickboxing Death | ಬೆಂಗಳೂರಿನಲ್ಲಿ ಒಂದೇ ಏಟಿಗೆ ರಿಂಗ್‌ನಲ್ಲೇ ಬಾಕ್ಸರ್‌ ಸಾವು

Exit mobile version