Site icon Vistara News

Accident Case | ಕ್ಯಾಂಪ್ ಪ್ರದೇಶದಲ್ಲಿ ಲಾರಿ ಹರಿದು ಬಾಲಕ ಸಾವು: ಮೂರು ದಿನದಲ್ಲಿ 2 ಮಕ್ಕಳು ಸಾವು!

ಬೆಳಗಾವಿ

ಬೆಳಗಾವಿ: ಕ್ಯಾಂಪ್ ಪ್ರದೇಶದ ಹೋಟೆಲ್ ಒಂದರ ಬಳಿ ಬುಧವಾರ (ಆ.3) ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅರಹಾನ್ ಬೇಪಾರಿ (10) ಮೃತ ದುರ್ದೈವಿ. ಅತಿಕಾ ಬೇಪಾರಿ ಹಾಗೂ ಪಾದಚಾರಿ ಆಯುಷ್‌ಗೆ ಗಾಯಗಳಾಗಿವೆ. ಎರಡು ದಿನಗಳ ಹಿಂದಷ್ಟೇ ಪೋರ್ಟ್ ರಸ್ತೆಯಲ್ಲಿ ಲಾರಿಹರಿದು ಸಾಬಿಯಾ ಪಾಳೇದಾರ (16) ಮೃತಪಟ್ಟಿದ್ದರು. ಈ ಪ್ರಕರಣಗಳು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಕೂಟಿ ಮೇಲೆ ಅತಿಕಾ ಜತೆ ಅರಹಾನ್ ತೆರಳಿತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಸ್ತೆ ದಾಟುವಾಗ ಎದುರಿಗೆ ಬಂದ ಲಾರಿ ಸ್ಕೂಟಿಗೆ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸ್ಥಳೀಯರು ರವಾನೆ ಮಾಡಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಅಪಘಾತ ಮಾಡಿದ ಲಾರಿ ಮೇಲೆ ಉದ್ರಿಕ್ತರಿಂದ ಕಲ್ಲು ತೂರಾಟ ಆಗಿದ್ದು, ಲಾರಿ ಜಖಂಗೊಂಡಿದೆ.

ಇದನ್ನೂ ಓದಿ | Bike Accident | ಮೂರು ಪ್ರತ್ಯೇಕ ಅಪಘಾತ; ಮೂವರು ಸ್ಥಳದಲ್ಲೇ ಸಾವು

ಸ್ಥಳದಲ್ಲಿನ ಜನರನ್ನು ಚದುರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಜಖಂಗೊಂಡಿರುವ ವಾಹನ ತೆರವು ಕಾರ್ಯಾಚರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಜೆಸಿಬಿ ಸಹಾಯದಿಂದ ಜಖಂಗೊಂಡಿರುವ ಲಾರಿ ತೆರವು ಕಾರ್ಯಾಚರಣೆ ಆಗುತ್ತಿದೆ. ಲಾರಿ ಮೇಲೆ ಕಲ್ಲು ಎಸೆಯುವ ಸಾಧ್ಯತೆ ಇದ್ದು ಬಿಗಿಪೊಲೀಸ್ ಭದ್ರತೆ ಮಾಡಲಾಗಿದೆ. ಲಾರಿ ಸುತ್ತುವರಿದಿರುವ ಪೊಲೀಸರು, ಎರಡು ಜೆಸಿಬಿಯಿಂದ ಲಾರಿ ತೆರವು ಮಾಡುತ್ತಿದ್ದಾರೆ. ಈ ಸಂಬಂಧ ಅಪರಾಧ ವಿಭಾಗದ ಡಿಸಿಪಿ ಸ್ನೇಹಾ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ನಗರ ಪೊಲೀಸರ ದಿವ್ಯ ನಿರ್ಲಕ್ಷ್ಯಕ್ಕೆ ಅಮಾಯಕ ಮಕ್ಕಳು ಬಲಿಯಾಗುತ್ತಿದ್ದು, ಬೆಳಗ್ಗೆ 7ರ ನಂತರ ನಗರದಲ್ಲಿ ಭಾರಿ ವಾಹನಗಳ ನಿರ್ಬಂಧವಿದ್ದರೂ ಆದೇಶ ಪಾಲನೆ ಆಗುತ್ತಿಲ್ಲ. ಪೊಲೀಸರ ನಿರ್ಲಕ್ಷ್ಯಕ್ಕೆ ಶಾಲೆ-ಕಾಲೇಜಿಗೆ ಹೋಗಬೇಕಿದ್ದ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಭಾರಿ ವಾಹನಗಳ ನಿರ್ಬಂಧಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಐವರ ಸಾವು, ನಾಲ್ವರಿಗೆ ಗಾಯ

Exit mobile version